ಮಹಾನಗರ: ಕಿತ್ತಳೆ ಹಣ್ಣು ಮಾರಾಟ ಮಾಡಿ ಬಂದ ಆದಾಯದಲ್ಲಿ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಯನ್ನು ಕಟ್ಟಿ ಬೆಳೆಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮಂಗಳವಾರ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವತಿಯಿಂದ “ಅರಸು ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಹಿರಿಯ ವೈದ್ಯ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಉಳೂ¤ರು ಅವರು ಪ್ರಶಸ್ತಿ ಪ್ರದಾನ ಮಾತನಾಡಿದ ಅಣ್ಣಯ್ಯ ಕುಲಾಲ್, ಹಾಜಬ್ಬ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅದಕ್ಕೂ ಮುನ್ನವೇ ಹಾಜಬ್ಬನವರ ಸೇವೆಯನ್ನು ಪ್ರತಿಷ್ಠಾನ ಗುರುತಿಸಿ ಮೊದಲ ವರ್ಷದ ಅರಸು ಪ್ರಶಸ್ತಿ ಘೋಷಿಸಿತ್ತು. 19ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರು ಹಾಜರಾಗದಿದ್ದರೂ ಇಂದು ಪದ್ಮಶ್ರೀ ಪುರಸ್ಕೃತರಾಗಿ ನಮ್ಮ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಪ್ರತಿಷ್ಠಾನದ ವಿಂಶತಿ ಸಂಭ್ರಮದ ನೆನಪಿಗಾಗಿ ಈ ವರ್ಷದಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಅರಸು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಡಾ| ಮೋಹನ ಆಳ್ವ ಮತ್ತು ಡಾ| ಎಂ.ವಿ. ಕುಲಾಲ್ ಅವರಿಗೆ ಜ. 19 ರಂದು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಪ್ರತಿಷ್ಠಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್, ರಾಜ್ಯ ಐಎಂಎ ಹಿರಿಯ ಉಪಾಧ್ಯಕ್ಷ ಡಾ| ಜಿ.ಕೆ. ಭಟ್ ಸಂಕಬಿತ್ತಿಲು, ವೀರನಾರಾಯಣ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ್, ಮಂಜಣ್ಣ ಬ್ರಿಗೇಡ್ ಅಧ್ಯಕ್ಷ ಮನೋಜ್ ಕುಮಾರ್ ಕೋಡಿಕೆರೆ, ಕನ್ನಡ ಕಟ್ಟೆಯ ಸುರೇಶ್ ಆಚಾರ್, ಕರವೇ ಕರಾವಳಿ ಅಧ್ಯಕ್ಷ ಜಾರ್ಜ್, ಸುಜೀರ್ ಕುಡುಪು, ಮಹಾಬಲ ಕುಲಾಲ್, ಬೈರಾಡಿ ಕೆರೆ ಸಂರಕ್ಷಣೆ ಸಮಿತಿಯ ಶೋಭಾ ಕೇಶವ, ರಾಜೇಶ್ ಕುಂದರ್, ದೇವದಾಸ್ ಶೆಟ್ಟಿ, ಪ್ರಸಾದ್ ಕಣ್ಣೂರು, ಕುಲಾಲ್ ಯುವ ವೇದಿಕೆಯ ಅಕ್ಷಯ್ ಕುಲಾಲ್, ಜೇನುಗೂಡಿನ ಅನಿಲ್ ಮತ್ತು ಚಂದ್ರು, ಕುಂಭ ವೈದ್ಯಕೂಟದ ಡಾ| ಸುಷ್ಮಾ ಉಪಸ್ಥಿತರಿದ್ದರು.
ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ ಅವರು, ನಾನೆಂದೂ ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ಅನಕ್ಷರಸ್ಥನಾದ ನನಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಎಲ್ಲ ಪ್ರತೀಕೂಲಗಳನ್ನೂ ಮೆಟ್ಟಿ ನಿಂತು, ಸಮಾಜದ ಸಹಕಾರದೊಂದಿಗೆ ಕನ್ನಡ ಶಾಲೆಯನ್ನು ಕಟ್ಟಿ ಬೆಳೆಸಲು ಸಾಧ್ಯವಾಯಿತು. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.