ಅರಸೀಕೆರೆ: ನಗರ ಸಮೀಪದ ಪುರಾಣ ಪ್ರಸಿದ್ಧ ಮಾಲೇಕಲ್ ತಿರುಪತಿ ಸುಕ್ಷೇತ್ರದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸೋ ದ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿ ನಿವಾಸ್ ನೂತನ ಕಟ್ಟಡ ಸಾರ್ವಜನಿಕರ ಸೇವೆಗಾಗಿ ಸಮರ್ಪಣೆ ಆಗುವುದು
ಯಾವಾಗ ಎಂಬ ಪ್ರಶ್ನೆಯನ್ನು ಭಕ್ತರು ಮಾಡುವಂತಾಗಿದೆ.
ನಗರ ಸಮೀಪದಲ್ಲಿರುವ ಪುರಾಣ ಪ್ರಸಿದ್ಧ ಮಾಲೇಕಲ್ ತಿರುಪತಿ ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಜಿ.ಜನಾರ್ದನ ರೆಡ್ಡಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭದಲ್ಲಿ ಯಾತ್ರಿ ನಿವಾಸ ಕಟ್ಟಡ ನಿರ್ಮಾಣಕ್ಕಾಗಿ 90 ಲಕ್ಷ ರೂ ಅನುದಾನ ದಲ್ಲಿ ಕಟ್ಟಡದ ನಿರ್ಮಾಣ ಕಾರ್ಯ ಮುಗಿದು 10 ವರ್ಷಗಳು ಕಳೆದರು ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದ ಪರಿಣಾಮ ಭಕ್ತಾದಿಗಳ ಸೇವೆಗೆ ಸಮರ್ಪಣೆ ಆಗಬೇಕಾಗಿದ್ದ ಯಾತ್ರಿ ನಿವಾಸದ ಕಟ್ಟಡ ಇನ್ನೂ ಲೋಕಾರ್ಪಣೆಗೊಂಡಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕಟ್ಟಡ ಸುತ್ತ ಗಿಡಗಂಟಿ: ಈಗಾಗಲೇ ಈ ಕಟ್ಟಡದ ಸುತ್ತಮುತ್ತಲು ಗಿಡಗಂಟಿಗಳು ಬೆಳೆದಿರುವ ಕಾರಣ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲು ಸಾಧ್ಯವಾಗಿದೆ. ಆದ್ದರಿಂದ ಸಂಬಂಧಪಟ್ಟ ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ನೂತನ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ಜೂನ್ ತಿಂಗಳ ಆಷಾಢ ಮಾಸದಲ್ಲಿ ನಡೆಯುವ ತಿರುಪತಿ ತಿಮ್ಮಪ್ಪನ ಜಾತ್ರಾ ಮಹೋತ್ಸವದ ವೇಳೆಗೆ ಯಾತ್ರಿ ನಿವಾಸ ಕಟ್ಟಡ ಲೋಕಾರ್ಪಣೆ ಸಮಾರಂಭವನ್ನು ನೆರವೇರಿಸುವ ಮೂಲಕ ಸಾರ್ವಜನಿಕರ ಸೇವೆಗಾಗಿ ಯಾತ್ರಿ ನಿವಾಸ್ ನೂತನ ಕಟ್ಟಡವನ್ನು ಸಮರ್ಪಣೆ ಮಾಡಬೇಕೆಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.
ಲೋಕಾರ್ಪಣೆ ಶೀಘ್ರ: ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣಗೊಂಡು ಅನೇಕ ವರ್ಷಗಳಾಗಿದೆ. ಸದ್ಯದಲ್ಲಿ ನೂತನ ಸಚಿವರಿಂದ ಉದ್ಘಾಟನೆ ನೆರವೇರಿಸುವ ಮೂಲಕ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಭಕ್ತರಿಗೆ ಅನುಕೂಲ ಕಲ್ಪಿಸಿ: ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಟಿ.ವಿ.ಅರುಣ್ ಕುಮಾರ್ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಭಕ್ತರ ಅನುಕೂಲಕ್ಕೆ ನಿರ್ಮಿ ಸಿರುವ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನೆ ಆಗದಿರುವುದು ಆಶ್ಚರ್ಯಕರ ಸಂಗತಿಯಾಗಿದ್ದು, ಸ್ಥಳೀಯ ಶಾಸಕರು ಹೆಚ್ಚಿನ ಆಸಕ್ತಿ ವಹಿಸಿ ಭಕ್ತರ ಸೇವೆಗೆ ಅತ್ಯಂತ ತ್ವರಿತವಾಗಿ ಸಮರ್ಪಣೆ ಮಾಡಬೇಕೆಂದು ಮನವಿ ಮಾಡಿದರು.