Advertisement

ಅರಂಬೂರು ಸೇತುವೆ ಎಪ್ರಿಲ್‌ಗೆ ಪೂರ್ಣ?

03:45 AM Jul 04, 2017 | Karthik A |

ಸುಳ್ಯ: ಅರಂಬೂರು ಬಳಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಎಪ್ರಿಲ್‌ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುಮಾರು 4.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆ ಕರ್ನಾಟಕ – ಕೇರಳಕ್ಕೆ ಸಂಪರ್ಕ ಕಲ್ಪಿಸಲಿದ್ದು, ಎರಡೂ ರಾಜ್ಯದ ಜನರಿಗೆ ಪ್ರಯೋಜನವಾಗಲಿದೆ. ಮಾಣಿ – ಮೈಸೂರು ಹೆದ್ದಾರಿಯ ಸುಳ್ಯದಿಂದ ಅಂದಾಜು 2 ಕಿ.ಮೀ. ಬಳಿಕ ಸಿಗುವ ಅರಂಬೂರು ಕೂಟೇಲು ಸಮೀಪ ಇದ್ದ ತೂಗುಸೇತುವೆ ಸಮೀಪವೇ ಈ ಸೇತುವೆ ನಿರ್ಮಾಣವಾಗುತ್ತಿದೆ. ಇದು ಆಲೆಟ್ಟಿ ಗ್ರಾಮದ ಅರಂಬೂರು ಭಾಗದ ಜನರ ಶತಮಾನದ ಬೇಡಿಕೆ. ಹಲವು ವರ್ಷಗಳ ಹಿಂದೆ ದೋಣಿ ಮತ್ತು ತೆಪ್ಪದ ಮೂಲಕ ಪಯಸ್ವಿನಿ ನದಿ ದಾಟುತ್ತಿದ್ದ ಈ ಭಾಗದ 300ಕ್ಕೂ ಅಧಿಕ ಕುಟುಂಬಗಳಿಗೆ ಅನುಕೂಲವಾಗಲೆಂದು ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ತಾಲೂಕಿನಲ್ಲಿ ಮೊದಲ ಬಾರಿಗೆ ತೂಗು ಸೇತುವೆ ನಿರ್ಮಿಸಿದ್ದರು. ಇದು ಗ್ರಾಮ ಸ್ಥರಿಗೆ ತುರ್ತಾಗಿ ಸಂಪರ್ಕಿಸಲು, ಸರಕು – ಸಾಮಾನು ಸಾಗಾಟಕ್ಕೆ ಅನುಕೂಲವಾಗಿತ್ತಾದರೂ ಸೇತುವೆಯ ನಿರ್ಮಾಣದ ಬೇಡಿಕೆ ಈಡೇರಿರಲಿಲ್ಲ. ಮಳೆಗಾಲದಲ್ಲೂ ಬಿರುಸಿನಿಂದ ಕಾಮಗಾರಿ ನಡೆಯುತ್ತಿದೆ.

Advertisement

ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಮುಖಾಂತರ ಮೊದಲ ಬಾರಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ ಮಂಜೂರು ಗೊಂಡಿರಲಿಲ್ಲ. ಮತ್ತೆ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಪ್ರಸ್ತಾವನೆ ಸಲ್ಲಿಸಿದ್ದರು. 2016ರಲ್ಲಿ ಸೇತುವೆ ಮಂಜೂರಾಗಿ ಅನುದಾನ ಬಿಡುಗಡೆಗೊಂಡಿತ್ತು. ಇದೇ ಸೇತುವೆಯೊಂದಿಗೆ ಮಂಜೂರಾಗಿದ್ದ ಬೆಂಡೋಡಿ ಸೇತುವೆ ವರ್ಷದೊಳಗೆ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಿದೆ.

ಪಿಲ್ಲರ್‌ಹಂತದಲ್ಲಿ ಕಾಮಗಾರಿ
ನೂತನ ಸೇತುವೆ 7ಮೀಟರ್‌ ಅಗಲ, 86 ಮೀಟರ್‌ ಉದ್ದವಿದ್ದು, 6 ಪಿಲ್ಲರ್‌ಗಳಿವೆ. ಈಗಾಗಲೇ ಮೂರು ಪಿಲ್ಲರ್‌ಗಳು ಬಹುತೇಕ ಪೂರ್ಣಗೊಂಡಿವೆ. ಇದೀಗ ನೀರಿನ ಹರಿವು ಅಧಿಕವಿರುವುದರಿಂದ ಮೂರ್‍ನಾಲ್ಕು ತಿಂಗಳು ಕಾಲ ಕಾಮಗಾರಿ ಅಸಾಧ್ಯವಾದರೂ ವರ್ಷದೊಳಗಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ.

ಕಾವಲು ಸಮಿತಿ
ಜನವರಿ ತಿಂಗಳಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದು, ಮಾರ್ಚ್‌ 15ಕ್ಕೆ ಕಾಮಗಾರಿ ಆರಂಭಗೊಂಡಿತು. ಆರಂಭದಲ್ಲಿ ಸ್ಥಳೀಯರ ವಿರೋಧದಿಂದಾಗಿ ಪ್ರಕರಣ ಕೋರ್ಟ್‌ ಮೇಟ್ಟಿಲೇರಿದ್ದರೂ ಈಗ ಬಗೆಹರಿದಿದೆ. ಗುಣಮಟ್ಟದ ಕಾಮಗಾರಿಗಾಗಿ ಗ್ರಾಮಸ್ಥರನ್ನೊಳಗೊಂಡ ಕಾವಲು ಸಮಿತಿಯನ್ನೂ ರಚಿಸಲಾಗಿದೆ.

ಯಾವ್ಯಾವ ಭಾಗ ಸಂಪರ್ಕ?
ಕೂಟೇಲು – ಆಲೆಟ್ಟಿ ಕೇಂದ್ರವಾಗಿ ನೆಡ್ಚಿಲು, ಗುತ್ತಿನಡ್ಕ, ಬಡ್ಡಡ್ಕ ಮಾರ್ಗವಾಗಿ ಕೇರಳದ ಪಾಣತ್ತೂರು ತಲುಪಲಿದೆ. ಮಡಿಕೇರಿ – ಮೈಸೂರು ತಲುಪಲು ಪಾಣತ್ತೂರು ಭಾಗದಿಂದ ಆಗಮಿಸುವವರಿಗೂ ಅಥವಾ ಹೆದ್ದಾರಿ ಮೂಲಕ ಅರಂತೋಡಿಗೆ ಸಾಗಿ ಮರ್ಕಂಜ- ಎಲಿಮಲೆ ಮಾರ್ಗವಾಗಿ ಸುಬ್ರಹ್ಮಣ್ಯ, ಧರ್ಮಸ್ಥಳ, ಹಾಸನ ಭಾಗಕ್ಕೂ ತೆರಳಲು ಉಪಯೋಗವಾಗಲಿದೆ. ಈ ಸೇತುವೆ ಇಲ್ಲ ದಿದ್ದರೆ ಸುಳ್ಯ ಪೇಟೆ ಮೂಲಕ 3 ಕಿ.ಮೀ. ಸುತ್ತು ಬಳಸಬೇಕಾದ ಅನಿವಾರ್ಯವಿದೆ.

Advertisement

ಒತ್ತಡ ಹೇರಿದ್ದೆ
ಜನರ ಬೇಡಿಕೆಗೆ ಅನುಗುಣವಾಗಿ ಲೋಕೋಪಯೋಗಿ ಇಲಾಖೆ ಮೇಲೆ ಒತ್ತಡ ಹೇರಿ ಈ ಸೇತುವೆಗೆ ಅನುದಾನ ಮಂಜೂರಾತಿ ಮಾಡಿಸಿದ್ದೆ. ಈಗ ಕಾಮಗಾರಿ ನಡೆಯುತ್ತಿದೆ. ಇದರೊಂದಿಗೆ ಅನುದಾನ ಬಿಡುಗಡೆಯಾಗಿದ್ದ ಬೆಂಡೋಡಿ ಸೇತುವೆ ಈಗಾಗಲೇ ಜನೋಪಯೋಗಕ್ಕಾಗಿ ಲಭ್ಯವಾಗಿದೆ.
– ದಿವ್ಯಪ್ರಭಾ ಚಿಲ್ತಡ್ಕ, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ

ಎಪ್ರಿಲ್‌ನಲ್ಲಿ ಪೂರ್ಣ
ಜನವರಿ ತಿಂಗಳಿನಲ್ಲಿ ಗುದ್ದಲಿ ಪೂಜೆ ನೆರವೇರಿದ್ದು, ಮುಂದಿನ ಎಪ್ರಿಲ್‌ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
– ಸತ್ಯನಾರಾಯಣ ಆಡಿಂಜ, ಕಾವಲು ಸಮಿತಿ ಕಾರ್ಯದರ್ಶಿ

– ಭರತ್‌ ಕನ್ನಡ್ಕ

Advertisement

Udayavani is now on Telegram. Click here to join our channel and stay updated with the latest news.

Next