Advertisement

ಅರಂತೋಡು: ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಸ್ಥಗಿತ 

11:27 AM Feb 15, 2018 | Team Udayavani |

ಬೆಳ್ಳಾರೆ : ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಮೂರು ವರ್ಷ ಸಂದರೂ ಇನ್ನೂ ಅಪೂರ್ಣಗೊಂಡಿದೆ.

Advertisement

ಈ ಗ್ರಂಥಾಲಯ ರಾಜ್ಯ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಜಿಲ್ಲಾ ಗ್ರಂಥಾಲಯದ ಅಧೀನಲ್ಲಿದೆ. ಹಲವಾರು ವರ್ಷಗಳಿಂದ ಸ್ವಂತ ಕಟ್ಟಡ ಇಲ್ಲದೆ ಇಲ್ಲಿಯ ಗ್ರಾಮ ಪಂಚಾಯತ್‌ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸುವಂತೆ ಸ್ಥಳಿಯ ಗ್ರಾಮ ಪಂಚಾಯತ್‌ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ 10 ಲಕ್ಷ ರೂ. ಅನುದಾನ ಮಂಜೂರಾಯಿತು.

2016ರ ಎ. 20ರಂದು ಗ್ರಂಥಾಲಯ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಗ್ರಂಥಾಲಯ ಕಾಮಗಾರಿ ಕೈಗೆತ್ತಿಕೊಂಡು ಎರಡು ವರ್ಷ ಕಳೆಯುತ್ತ ಬಂದರೂ ಇನ್ನೂ ಕಾಮಗಾರಿ ಅಪೂರ್ಣವಾಗಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

ನಿರ್ಮಿತಿ ಕೇಂದ್ರದವರು ಕಟ್ಟಡ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇಲಾಖೆಯಿಂದ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ 5 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನೂ ಅರ್ಧಾಂಶ ಹಣ ಬಿಡುಗಡೆಯಾಗಲು ಬಾಕಿ ಉಳಿದಿದ್ದು, ಕಾಮಗಾರಿ ಮುಂದುವರಿಸಲು ಅಸಾಧ್ಯವಾಗಿದೆ. ಕಟ್ಟಡದ ಸ್ಲ್ಯಾಬ್‌ ಕೆಲಸ ತನಕ ಪೂರ್ಣವಾಗಿದೆ.

ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಮುಂತಾದ ಪ್ರಮುಖ ಕೆಲಸಗಳು ಬಾಕಿ ಉಳಿದಿವೆ. ಕಟ್ಟಡದ ಒಳಗಡೆ ಕೆಲವರು ಈ ಹಿಂದೆ ಮೋಜು-ಮಸ್ತಿ ಮಾಡಿ ಗಲೀಜು ಮಾಡುತ್ತಿದ್ದರು. ತಿಂಗಳ ಹಿಂದೆಯಷ್ಟೆ ಕಟ್ಟಡಕ್ಕೆ ಬಾಗಿಲು ನಿರ್ಮಾಣ ಮಾಡಿ ಬೀಗ ಜಡಿಯಲಾಗಿದೆ.

Advertisement

ದೇವಚಳ್ಳದಲ್ಲಿ…
2016ನೇ ಅಕ್ಟೋಬರ್‌ ತಿಂಗಳಿನಲ್ಲಿ ದೇವಚಳ್ಳದಲ್ಲಿ ಗ್ರಂಥಾಲಯ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇದಕ್ಕೂ ಇಲಾಖೆಯಿಂದ ರೂ.10 ಲಕ್ಷ ರೂ. ಅನುದಾನ ಮಂಜೂರಾಗಿ ಬಿಡುಗಡೆಯೂ ಆಗಿದೆ. ಆದರೆ. ಅದಕ್ಕೂ ಐದು ತಿಂಗಳ ಮೊದಲೇ ಅರಂತೋಡು ಗ್ರಂಥಾಲಯದ ಕಾಮಗಾರಿ ಶುರು ಮಾಡಿದ್ದರೂ ಪೂರ್ಣ ಅನುದಾನ ದೊರೆಯದಿರುವುದು ಅಚ್ಚರಿ ಮೂಡಿಸಿದೆ. ಇಲಾಖೆ ಅರಂತೋಡು ಗ್ರಂಥಾಲಯಕ್ಕೆ ಬಾಕಿ ಉಳಿದ 5 ಲಕ್ಷ ರೂ. ಅನುದಾನವನ್ನು ತತ್‌ ಕ್ಷಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೂಡಲೇ ಆರಂಭ
ಬಿಡುಗಡೆಯಾಗಿದೆ. ಇನ್ನೂ 5 ಲಕ್ಷ ರೂ. ಬಿಡುಗಡೆಯಾಗಲು ಬಾಕಿ ಉಳಿದಿದೆ. ಅನುದಾನ ಬಿಡುಗಡೆಯಾದ ಕೂಡಲೇ
ಕಾಮಗಾರಿ ಪ್ರಾರಂಭಿಸಲಾಗುವುದು.
– ಹರೀಶ್‌
ಎಂಜಿನಿಯರ್‌ ನಿರ್ಮಿತಿ ಕೇಂದ್ರ

ಅನುದಾನ ಕೊಡಿ
ಗ್ರಂಥಾಲಯ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಎರಡು ವರ್ಷವಾಗುತ್ತಿದೆ. ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಇಲಾಖೆ ತಕ್ಷಣ ಅನುದಾನ ಬಿಡುಗಡೆ ಮಾಡಿ ಕಟ್ಟಡ ಸಾರ್ವಜನಿಕ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕು.
– ಅಶ್ರಫ್ ಗುಂಡಿ
  ಸ್ಥಳೀಯರು

ಕಾಮಗಾರಿ ಮುಗಿಸಲಿ
ಈ ಗ್ರಂಥಾಲಯ ಅನೇಕ ವರ್ಷಗಳಿಂದ ನಮ್ಮ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಲೈಬ್ರರಿ ಇರುವ ಕಟ್ಟಡದ ವಿಸ್ತರಣೆ ಕಾಮಗಾರಿ ನಡೆಯಲಿದೆ. ನಮ್ಮ ಕಟ್ಟಡ ನಮಗೆ ಬಹಳ ಅಗತ್ಯ ಇದೆ. ಇಲಾಖೆ ಇದರ ಬಗ್ಗೆ ಗಮನ ಹರಿಸಿ ಸ್ಥಗಿತಗೊಂಡ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ.
– ಜಯಪ್ರಕಾಶ್‌
 ಅರಂತೋಡು ಪಿಡಿಒ

ತೇಜೇಶ್ವರ್‌ ಕುಂದಲ್ಪಾಡಿ 

Advertisement

Udayavani is now on Telegram. Click here to join our channel and stay updated with the latest news.

Next