Advertisement
ಅರಂತೋಡು ನೆಹರೂ ಸ್ಮಾರಕ ಕಾಲೇಜು, ಪಾಪ್ಯುಲರ್ ಎಜುಕೇಶನ್ ಸೊಸೈಟಿ, ದ.ಕ. ಜಿಲ್ಲಾ ಗ್ರಾಹಕರ ಸಂಘಗಳ ಒಕ್ಕೂಟ ಹಾಗೂ ಜಾಗೃತಿ ವಿದ್ಯಾರ್ಥಿ ಕ್ಲಬ್ ಆಶ್ರಯದಲ್ಲಿ ಗ್ರಾಹಕರ ಸಂತೆ ನಡೆಯಿತು. ಹೈಸ್ಕೂಲ್ ವಿಭಾಗದ ಒಟ್ಟು 308 ವಿದ್ಯಾರ್ಥಿಗಳ ಪೈಕಿ ಸುಮಾರು 72 ಮಕ್ಕಳನ್ನು ತಲಾ 6 ಜನರ ಗುಂಪುಗಳಲ್ಲಿ ಸೇರಿಸಿ, ವಿವಿಧ ವ್ಯಾಪಾರಗಳನ್ನು ನಡೆಸಲು ಸೂಚಿಸಲಾಗಿತ್ತು. ತರಕಾರಿ, ತಿಂಡಿಗಳು, ಬಟ್ಟೆ, ಆಲಂಕಾರಿಕ ವಸ್ತುಗಳು, ಬೆತ್ತದ ಕುಡುಪು, ಬುಟ್ಟಿ, ಹಸಿರು ಸೊಪ್ಪುಗಳು, ವೀಳ್ಯದೆಲೆ, ಐಸ್‌ಕ್ರೀಮ್ ಇತ್ಯಾದಿಗಳು ಸಂತೆಯಲ್ಲಿ ಮಾರಾಟಕ್ಕಿದ್ದವು.
ಪಾಪ್ಯುಲರ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ವಿದ್ಯಾರ್ಥಿ ಗ್ರಾಹಕ ಸಂತೆಯನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಮೇಶ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿ ಕಾರ್ಯದರ್ಶಿ ಕೆ.ಆರ್. ಪದ್ಮನಾಭ, ಸಂಚಾಲಕ ಕೆ.ಆರ್. ಗಂಗಾಧರ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ವಿಷ್ಣು ಪಿ. ನಾಯಕ್, ಅರಂತೋಡು – ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ವೈ.ಎ. ಆನಂದ, ಸಿ.ಆರ್.ಪಿ. ಗೋಪಾಲಕೃಷ್ಣ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಯೋಜಕ ಕಿಶೋರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಗ್ರಾಹಕ ಕ್ಲಬ್ ಅಧ್ಯಕ್ಷೆ ರಕ್ಷಾ ಬಿ.ಆರ್. ವಂದಿಸಿದರು.
Related Articles
ಆಧುನಿಕ ಕಾಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಲ ಕಳೆಯುವ ವಿದ್ಯಾರ್ಥಿಗಳಲ್ಲಿ ಮಕ್ಕಳ ಸಂತೆ ಸಹಬಾಳ್ವೆ, ಸಹಜೀವನದ ಕಲ್ಪನೆಯನ್ನು ಮೂಡಿಸಿತು. ತರಗತಿಯ ನಾಲ್ಕು ಗೋಡೆಯ ಮದ್ಯೆ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಗಣಿತದ ಪ್ರಾಯೋಗಿಕ ಪಾಠ ಹೇಳಿತು. ವೃತ್ತಿ ಶಿಕ್ಷಣಕ್ಕೆ ಉತ್ತೇಜನ ನೀಡಿತು. ಇಂತಹ ಕಾರ್ಯಕ್ರಮಗಳು ಶಾಲೆ, ಕಾಲೇಜುಗಳಲ್ಲಿ ಆಗಾಗ ನಡೆದರೆ ಒಳ್ಳೆಯದು.
– ಆನಂದ ವೈ.ಎ.,
ಮುಖ್ಯ ಶಿಕ್ಷಕರು, ಪ್ರೌಢಶಾಲಾ
ವಿಭಾಗ, ನೆಹರೂ ಸ್ಮಾರಕ ಪ.ಪೂ.ಕಾಲೇಜು, ಅರಂತೋಡು
Advertisement