ಅರಂತೋಡು : ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಎರಡು ವರ್ಷ ಕಳೆದು ಅನಂತರದಲ್ಲಿ ಕಾಮಗಾರಿ ಪ್ರಾರಂಭ ಗೊಂಡರೂ, ಮತ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿರುವ ಅರಂತೋಡು ಸಾರ್ವಜನಿಕ ಗ್ರಂಥಾಲಯ ಈಗ ಗ್ರಾ.ಪಂ. ಪಕ್ಕದ ಹಳೆಯ ಕಟ್ಟಡದಲ್ಲಿದೆ. ಮೂರು ವರ್ಷಗಳ ಹಿಂದೆ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ. ಅನುದಾನಕ್ಕೆ ತಕ್ಕಂತೆ ನೀಲ ನಕಾಶೆ ತಯಾರಿಸಿ ಸರಕಾರಿ ಹಿ.ಪ್ರಾ. ಶಾಲೆ ಸಮೀಪ ಇಲಾಖೆಯ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಆರಂಭಿಸಲಾಗಿತ್ತು.
ನಿರ್ಮಿತಿ ಕೇಂದ್ರದವರು ಕಾಮಗಾರಿಯ ಉಸ್ತುವಾರಿ ವಹಿಸಿ ಕೊಂಡಿದ್ದರು. ಮಂಜೂರುಗೊಂಡ 10 ಲಕ್ಷ ರೂ. ಅನುದಾನದಲ್ಲಿ ಮೊದಲ ಹಂತದಲ್ಲಿ 5 ಲಕ್ಷ ರೂ. ಮಾತ್ರ ಬಿಡುಗಡೆ ಗೊಂಡಿತ್ತು. ಉಳಿದ 5 ಲಕ್ಷ ರೂ. ಅನುದಾನ ಬಿಡುಗಡೆಗೊಳ್ಳದ ಹಿನ್ನೆಲೆ ಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಜನವರಿ ತಿಂಗಳಲ್ಲಿ ಮತ್ತೆ 5 ಲಕ್ಷ ರೂ. ಅನುದಾನ ಬಿಡುಗಡೆ ಗೊಂಡು ಕಾಮಗಾರಿಯನ್ನು ಪುನರಾರಂಭಿಸಲಾಗಿತ್ತು. ಇದೀಗ ಆಮೆ ನಡಿಗೆಯಲ್ಲಿ ಕಾಮಗಾರಿ ಸಾಗುತ್ತಿದೆ. ವಾರಕ್ಕೆ ಒಂದೆರಡು ದಿನ ಮಾತ್ರ ಕೆಲಸ ನಡೆಸಿದ್ದು, ಸದ್ಯ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಕೆಲಸಗಳೆಲ್ಲ ಬಾಕಿ ಇವೆ
ಶೌಚಾಲಯ ನಿರ್ಮಾಣವಾಗಿದ್ದರೂ ಅದಕ್ಕೆ ಬಾಗಿಲು ನಿರ್ಮಿಸಿಲ್ಲ. ವಿದ್ಯುತ್ ಸಂಪರ್ಕಕ್ಕೆ ವೈರಿಂಗ್ ಆಗಿಲ್ಲ. ಪೈಪ್ ಲೈನ್ ಆಗಿಲ್ಲ. ನೀರಿನ ಸೌಲಭ್ಯಕ್ಕೆ ಟ್ಯಾಂಕ್ ಅಳವಡಿಸಿಲ್ಲ. ಆವರಣಗೋಡೆ ಆಗಿಲ್ಲ. ಗ್ರಂಥಾಲಯಕ್ಕೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿಲ್ಲ. ಹೀಗೆ ಇತರ ಕೆಲಸಗಳು ಬಾಕಿ ಉಳಿದಿವೆ.
ಅರಂತೋಡು ಗ್ರಂಥಾಲಯ ಕಟ್ಟಡದ ಕಾಮಗಾರಿ ಆರಂಭಿಸಿ 8 ತಿಂಗಳ ಬಳಿಕ ಕಾಮಗಾರಿ ಪ್ರಾರಂಭಿಸಿದ್ದ ದೇವಚಳ್ಳ ಗ್ರಂಥಾಲಯ ಕಾಮಗಾರಿ ಪೂರ್ಣಗೊಂಡು ಒಂದು ವರ್ಷದಿಂದ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಾಹಿಸುತ್ತಿದೆ. ದೇವಚಳ್ಳ ಗ್ರಂಥಾಲಯಕ್ಕಿಂತ 8 ತಿಂಗಳು ಮೊದಲು ಪ್ರಾರಂಭಿಸಿದ್ದ ಅರಂತೋಡು ಗ್ರಂಥಾಲಯ ಕಾಮಗಾರಿ ಮಾತ್ರ ಪೂರ್ಣಗೊಳ್ಳದಿರುವುದು ವಿಪರ್ಯಾಸ.
ಸೂಕ್ತ ಕ್ರಮ ಕೈಗೊಳ್ಳಿ
ಅರಂತೋಡು ಲೈಬ್ರೆರಿ ಕಟ್ಟಡ ಕಾಮಗಾರಿ ಕೆಲಸ ನಿಲ್ಲಿಸಿ ಎರಡು ವರ್ಷ ಕಳೆದ ಬಳಿಕ ಮತ್ತೆ ಕಾಮಗಾರಿ ಆರಂಭಿಸಿ ತಿಂಗಳು ಎರಡು ಹತ್ತಿರವಾಗುತ್ತಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳದಿರುವುದು ವಿಪರ್ಯಾಸ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಸ್ಥಗಿತಗೊಳಿಸಿರುವುದು ವಾಚಕರಿಗೆ ಬೇಸರ ತರಿಸಿದೆ ಎಂದು ಗ್ರಂಥಾಲಯದ ಒದುಗ ಆಶ್ರಫ್ ಗುಂಡಿ ಹೇಳಿದ್ದಾರೆ.
ಚರ್ಚಿಸಲಾಗಿದೆ
ಲೈಬ್ರೆರಿ ಕಾಮಗಾರಿ ಕೊನೆ ಹಂತದಲ್ಲಿದೆ. ಈ ಹಿಂದೆ ನಾನು ಕೂಡ ಸಂಬಂಧಪಟ್ಟವರಲ್ಲಿ ಈ ಬಗ್ಗೆ ಚರ್ಚಿಸಿದ್ದೆ. ಸದ್ಯದಲ್ಲಿಯೇ ಲೈಬ್ರೆರಿ ಜನರ ಉಪಯೋಗಕ್ಕೆ ಲಭ್ಯವಾಗುವ ಆಶಾಭಾವನೆ ಇದೆ.
– ಶಿವಾನಂದ ಉಪಾಧ್ಯಕ್ಷರು,
– ಶಿವಾನಂದ ಉಪಾಧ್ಯಕ್ಷರು,
ಅರಂತೋಡು ಗ್ರಾ.ಪಂ.
ಶೀಘ್ರ ಪೂರ್ಣ
ಎರಡನೇ ಹಂತದ ಅನುದಾನ ಬಿಡುಗಡೆ ತಡವಾದ ಕಾರಣ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ನಿರಂತರವಾಗಿ ನಡೆಸಲು ಸಮಸ್ಯೆಯಾಗಿದೆ. ಆದಷ್ಟು ಬೇಗನೆ ಕಾಮಗಾರಿ ಮಗಿಸಿಕೊಡುತ್ತೇವೆ.
– ರಾಜೇಂದ್ರ,
ನಿರ್ದೇಶಕ ನಿರ್ಮಿತಿ ಕೇಂದ್ರ, ಸುರತ್ಕಲ್
ತೇಜೇಶ್ವರ್ ಕುಂದಲ್ಪಾಡಿ