Advertisement

ಚೆಂಬು: ಅಣ್ಣನನ್ನು ಕೊಂದ ತಮ್ಮಂದಿರು ಪರಾರಿ

10:31 PM Jul 14, 2023 | Team Udayavani |

ಅರಂತೋಡು: ಮಡಿಕೇರಿ ತಾಲೂಕು ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಅಣ್ಣನನ್ನು ಕೊಂದು ಸಹೋದರರು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.

Advertisement

ಮೂಲತಃ ಪುತ್ತೂರಿನ ಸಂಟ್ಯಾರಿನವರಾಗಿದ್ದ ಇಬ್ರಾಹಿಂ ಹಾಜಿ ಅರಂತೋಡಿಗೆ ಬಂದು ಕೆಲವು ವರ್ಷಗಳ ಹಿಂದೆ ಕುದ್ರೆಪಾಯದಲ್ಲಿ ಸುಮಾರು 50 ಎಕ್ರೆ ಭೂಮಿ ಖರೀದಿಸಿ ಕೃಷಿ ಆರಂಭಸಿದ್ದರು. ಇಬ್ರಾಹಿಂರವರು ಸುಮಾರು 25 ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಭೂಮಿಯನ್ನು ಪುತ್ರ ಉಸ್ಮಾನ್‌ ನೋಡಿಕೊಳ್ಳುತ್ತಿದ್ದರೆನ್ನಲಾಗಿದೆ.

ಇಬ್ರಾಹಿಂ ಅವರಿಗೆ 7 ಮಂದಿ ಪುತ್ರರು ಮತ್ತು ಮೂವರು ಪುತ್ರಿಯರು. ಜಾಗದ ವಿಚಾರವಾಗಿ ಗಂಡು ಮಕ್ಕಳಲ್ಲಿ ತಕರಾರು ಬಂದು ಪಾಲು ಮಾಡಿಕೊಡಲಾಗಿತ್ತು. ಆದರೆ ಉಸ್ಮಾನ್‌ ಅವರಿಗೆ ಹೆಚ್ಚು ಜಾಗ ಸಿಕ್ಕಿದೆ ಎಂದು ರಫೀಕ್‌, ಸತ್ತಾರ್‌ ಮತ್ತಿತರ ಕೆಲವು ಸಹೋದರರು ತಕರಾರು ತೆಗೆದಿದ್ದರೆಂದು, ಈ ಹಿನ್ನೆಲೆಯಲ್ಲಿ ಅವರೊಳಗೆ ಯಾವಾಗಲೂ ಜಗಳವಾಗುತ್ತಿತ್ತೆಂದು ಹೇಳಾಗುತ್ತಿದೆ. ಉಸ್ಮಾನ್‌(65) ತಮ್ಮ ಕುಟುಂಬದೊಂದಿಗೆ ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದು, ಪ್ರತೀ ಶುಕ್ರವಾರ ಕುದ್ರೆಪಾಯದ ತಮ್ಮ ತೋಟಕ್ಕೆ ಬರುತ್ತಿದ್ದರು. ರಫೀಕ್‌ ಮತ್ತು ಮಾಯಿಂಞಿ ಅರಂತೋಡಿನಲ್ಲಿ ನೆಲೆಸಿದ್ದರೆ, ಸತ್ತಾರ್‌ ಮಡಿಕೇರಿಯ ಹಾಕತ್ತೂರಿನಲ್ಲಿದ್ದರು.

ಶುಕ್ರವಾರ ಕುದ್ರೆಪಾಯದ ಜಾಗದಲ್ಲಿ ಸರ್ವೆ ಇತ್ತೆನ್ನಲಾಗಿದೆ. ಅದಕ್ಕಾಗಿ ಉಸ್ಮಾನ್‌, ರಫೀಕ್‌ ಮತ್ತು ಸತ್ತಾರ್‌ ಕುದ್ರೆಪಾಯಕ್ಕೆ ಬಂದಿದ್ದರು. ಸರ್ವೆಗೆ ಬಂದಿದ್ದ ಅಧಿಕಾರಿಗಳು ತಮ್ಮ ಕಾರ್ಯ ಮುಗಿಸಿ ದೂರದಲ್ಲಿ ಇದ್ದ ಸಂದರ್ಭ ಉಸ್ಮಾನ್‌, ರಫೀಕ್‌, ಸತ್ತಾರ್‌ ಅವರು ಜಾಗದ ಸಮೀಪ ರಸ್ತೆ ಬದಿ ನಿಂತು ಮಾತನಾಡುತ್ತಿದ್ದರು. ಮಾತಿಗೆ ಮಾತು ಬೆಳೆದು ತಮ್ಮಂದಿರಾದ ರಫೀಕ್‌ ಮತ್ತು ಸತ್ತಾರ್‌ ಅಣ್ಣ ಉಸ್ಮಾನ್‌ಗೆ ಚೂರಿಯಿಂದ ಇರಿದು ಇಬ್ಬರೂ ಪರಾರಿಯಾಗಿದ್ದಾ ರೆನ್ನಲಾಗಿದೆ. ಅವರು ರಿಕ್ಷಾವೊಂದರಲ್ಲಿ ಸುಳ್ಯದ ಕಡೆಗೆ ಬಂದು ಪರಾರಿಯಾಗಿದ್ದಾ ರೆಂದು ಹೇಳಲಾಗಿದೆ.

ಮಡಿಕೇರಿ ಡಿವೈಎಸ್ಪಿ ಸುಂದರ್‌ರಾಜ್‌ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಸಂಪಾಜೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮಹಜರು ನಡೆಸಿದ್ದಾರೆ. ಉಸ್ಮಾನ್‌ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next