Advertisement

ಖಾಸಗಿಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ

05:22 PM Aug 12, 2017 | Team Udayavani |

ಚನ್ನಪಟ್ಟಣ: ಖಾಸಗಿ ಶಾಲೆಗಳ ಹಾವಳಿಯಿಂದ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಸರ್ಕಾರ ಬೀಗ ಹಾಕುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥರ ಸಹಕಾರ ಮತ್ತು ಸರ್ಕಾರದ ಅಲ್ಪ ಸ್ವಲ್ಪ ಸಹಕಾರ ಬಳಸಿಕೊಂಡು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬಹುದು ಎಂಬುದಕ್ಕೆ ತಾಲೂಕಿನ ಅರಳಾಪುರ ಗ್ರಾಮದ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ. ತಾಲೂಕಿನ ಗಡಿ ಗ್ರಾಮವಾಗಿರುವ ಅರಳಾಪುರ ಸರ್ಕಾರಿ ಶಾಲೆ, ಶಿಕ್ಷಕರು ಹಾಗೂ ಗ್ರಾಮಸ್ಥರ ಪರಿಶ್ರಮದಿಂದಾಗಿ ಇತರ ಶಾಲೆಗಳಿಗೆ ಮಾದರಿಯಾಗಿದೆ. ಮಕ್ಕಳಿಗೆ ಅಗತ್ಯವಿರುವ ಕಲಿಕಾ ವಾತಾವರಣ, ಗುಣಮಟ್ಟದ ಶಿಕ್ಷಣದ ಜತೆಗೆ ಪರಿಸರದ ಬಗ್ಗೆ ಪಾಠಕ್ಕಿಂತ ಪ್ರಾಯೋಗಿಕವಾಗಿ ಅದನ್ನು ತಿಳಿಸಿಕೊಡುವ ಮೂಲಕ ಶಿಕ್ಷಕರು ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಶಹಬ್ಟಾಶ್‌ ಎನಿಸಿಕೊಂಡಿದ್ದಾರೆ. 1 ರಿಂದ 5ನೇ ತರಗತಿಯವರೆಗೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಯುತ್ತಿದ್ದು, ಸುಮಾರು 25 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆಯೇ ಒಂದು ಸುಂದರ ಉದ್ಯಾನ ಹಾಗೂ ದೇವಾಲಯಕ್ಕೆ ಭೇಟಿ ನೀಡಿದಂತ ಅನುಭವವಾಗುತ್ತದೆ.

Advertisement

ಸುಂದರ ಪರಿಸರ: ಗ್ರಾಮಸ್ಥರು ಹಾಗೂ ಶಿಕ್ಷಕರು ಶಾಲಾವರಣದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಶಾಲೆಯನ್ನು
ಸಾಕ್ಷಾತ್‌ ದೇವಾಲಯವನ್ನಾಗಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ದೇವರ ಮೇಲೆ ಭಕ್ತಿ ಹಾಗೂ ಮಕ್ಕಳಿಗೆ ದೇವರ ಅನುಗ್ರಹ ಸಿಗಲಿ
ಎಂಬುದು ಇವರ ಆಶಯವಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜತೆಗೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತಿ, ಸಂಸ್ಕಾರ ಕಲಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.

ಉದ್ಯಾನವನ: ಶಾಲೆ ಆವರಣವೆಲ್ಲ ಹಸಿರು ಗಿಡಗಳಿಂದ ಕಂಗೋಳಿಸುತ್ತಿದ್ದು, ಪ್ರಮುಖವಾಗಿ ಈ ಗಿಡಗಳಿಗೆ ಸಾವಯವ ಗೊಬ್ಬರ ಬಳಸಿ ವಿಧ ವಿಧವಾರ ಅಲಂಕಾರಿಕ ಸಸ್ಯಗಳು, ತರಕಾರಿ, ಸೊಪ್ಪು, ಹಣ್ಣಿನ ಗಿಡ ಬೆಳೆಸಲಾಗಿದೆ. ಜೊತೆಗೆ ಪ್ರತಿನಿತ್ಯ ಇದರ ಪೋಷಣೆಗೆ ಮಕ್ಕಳಿಗೆ ನಿಗದಿತ ಸಮಯಾವಕಾಶ ಕಲ್ಪಿಸಲಾಗಿದೆ. ಅಲ್ಲದೇ ಶಾಲಾವರಣವನ್ನು ಸದಾ ಸ್ವತ್ಛವಾಗಿರುವಂತೆ
ಶ್ರಮಿಸಲಾಗುತ್ತಿದೆ.

ಬೇಕಿದೆ ಹೊಸ ಕಟ್ಟಡ, ಮೈದಾನ: ಶಾಲಾ ಕಟ್ಟಡ ಹಳೆಯದಾದರೂ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಶಾಲೆಯನ್ನು ಸುಂದರವನ್ನಾಗಿ ಅಲಂಕರಿಸಲಾಗಿದ್ದು, ಶಾಲೆಗೆ ಮೈದಾನ ಹಾಗೂ ಹೊಸ ಕಟ್ಟಡದ ಅವಶ್ಯವಿದೆ. ಹಳೆ ಕಟ್ಟಡವನ್ನೇ ಬಳಸಿಕೊಂಡು ಉತ್ತಮ ಶಿಕ್ಷಣ ನೀಡುತ್ತಿರುವ ಶಿಕ್ಷಕರು ಮಕ್ಕಳಿಗೆ ಆಟವಾಡಲು ಅಗತ್ಯವಿರುವ ಮೈದಾನ ಬೇಕಿದೆ ಎಂದು ಶಾಲೆ ಶಿಕ್ಷಕರಾದ ಕೃಷ್ಣಪ್ಪ, ಕೆಂಪೇಗೌಡ ಮನವಿ ಮಾಡಿದ್ದಾರೆ.

ಗಡಿಗ್ರಾಮವೆಂದು ನಿರ್ಲಕ್ಷ್ಯ: ನಮ್ಮೂರಿನ ಮಕ್ಕಳು ಉತ್ತಮವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ನಮ್ಮ ಗ್ರಾಮ ತಾಲೂಕಿನ ಗಡಿಭಾಗದಲ್ಲಿರುವ ಕಾರಣ ಸರ್ಕಾರ ಹಾಗೂ ಜನಪ್ರತಿನಿಧಿಗಳು ಶಾಲೆಗೆ ಮೂಲ ಸೌಲಭ್ಯ ಸಮರ್ಪಕವಾಗಿ ನೀಡಲು ನಿರ್ಲಕ್ಷ್ಯತೋರುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮದ ವಿಜಯ್‌ ಕುಮಾರ್‌, ಆನಂದರಾಮು, ಶ್ರೀಧರ್‌ ರಾಜು, ಸುರೇಶ್‌, ದಿನೇಶ್‌, ಬಸವೇಗೌಡ, ಮರಿಯಪ್ಪ, ರವಿ ಆಗ್ರಹಿಸಿದ್ದಾರೆ. ಒಟ್ಟಾರೆ ಸರ್ಕಾರ ಅಲ್ಪ ಸೌಲಭ್ಯ ಕೊಟ್ಟಿದ್ದರೂ ಧೃತಿಗೆಡದೇ ಗ್ರಾಮಸ್ಥರ
ಸಹಕಾರದೊಂದಿಗೆ ಶಾಲೆ ಶಿಕ್ಷಕರು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಪರಿವರ್ತಿಸಿದ್ದಾರೆ. ಇನ್ನು ಮುಂದಾದರೂ
ಸರ್ಕಾರ ಈ ಶಾಲೆ ಬಗ್ಗೆ ಹೆಚ್ಚಿನ ಗಮನಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.

Advertisement

ಸಿ.ಎನ್‌.ವೆಂಕಟೇಶ್‌

Advertisement

Udayavani is now on Telegram. Click here to join our channel and stay updated with the latest news.

Next