Advertisement

Work Pressure: ಕೆಲಸದ ಒತ್ತಡಕ್ಕೂ ತುಸು ವಿರಾಮವಿರಲಿ

07:07 AM Mar 16, 2024 | Team Udayavani |

ಕೆಲಸಕ್ಕೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಸದಾ ವೃತ್ತಿಗೆ ಸಂಬಂಧಿಸಿದ ಒತ್ತಡವನ್ನು ಅನುಭವಿಸುತ್ತಾರೆ. ಇಂದಿನ ವೇಗದ ಜೀವನದಲ್ಲಿ ಎಲ್ಲರೂ ಸ್ಪರ್ಧಿಸಿ ಗೆಲ್ಲಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕೆಲಸದ ಹೊರೆಯಿಂದ ಉಂಟಾಗುವ ಒತ್ತಡವನ್ನು ಜಯಿಸುವುದು ಎಲ್ಲರಿಗೂ ಕಷ್ಟ.

Advertisement

ಈ ಒತ್ತಡ  ಅತಿಯಾದರೆ ಹೃದ್ರೋಗ ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇಂದು ಕೆಲಸದ ಒತ್ತಡ ಸಾಮಾನ್ಯವಾಗಿ ಬಿಟ್ಟಿದೆ. ಇಂದಿನ ಜಗತ್ತಿನಲ್ಲಿ ಕಡಿಮೆ ಒತ್ತಡದಲ್ಲಿ ಕೆಲಸ ಹುಡುಕುವುದು ತುಸು ಕಷ್ಟವೇ. ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಗುರಿ ಮತ್ತು ಗಡುವು ಮುಂತಾದ ನಿಯಮಗಳು ಇರುತ್ತವೆ.

ಕಚೇರಿ ಎಂದ ಕೂಡಲೇ ಕೆಲಸದ ಒತ್ತಡ, ನಿರ್ದಿಷ್ಟ ಗುರಿ, ಕೆಲಸಕ್ಕೆ ಡೆಡ್‌ಲೈನ್‌, ವೇತನ ಹೆಚ್ಚಳ, ಸಂಬಳ, ಇವೇ ಮುಂತಾದ ತಲೆಬಿಸಿಗಳು ಇದ್ದೇ ಇರುತ್ತದೆ. ಈ ಎಲ್ಲ ಒತ್ತಡಗಳ ನಡುವೆಯೂ ಉದ್ಯೋಗಿಯು ನೀಡಲಾದ ಕೆಲಸ ಮತ್ತು ಜವಾಬ್ದಾರಿಯನ್ನು ಮಾಡಿ ಮುಗಿಸಬೇಕು. ಇಂತಹ ಅಗಾಧ ಒತ್ತಡದ ನಡುವೆಯೂ ಖುಷಿಯಾಗಿ ಕೆಲಸ ಮಾಡುವ ವಿಧಾನ ಹೀಗಿದೆ.

ಗುಳ್ಳೆ ಪೇಪರನ್ನು ಅದುಮಿರಿ: ಟಿ.ವಿ. ಫ್ರಿಜ್‌, ವಾಶಿಂಗ್‌ ಮೆಶಿನ್‌ಗಳ ಪ್ಯಾಕಿಂಗ್‌ ಮಧ್ಯೆ ಪ್ಲಾಸ್ಟಿಕ್‌ ಗುಳ್ಳೆ ಪೇಪರ್‌ ಇರುತ್ತದೆ, ಇದನ್ನು ಅದುಮುವ ಅಭ್ಯಾಸ ನಮಗೆ ಎಳವೆಯಿಂದಲೇ ಬಂದಿರುತ್ತದೆ. ಈ ಗುಳ್ಳೆ ಪೇಪರನ್ನು ಅದುಮುವುದು ಒಂದು ರೀತಿ ಮನಸ್ಸಿಗೆ ಮನೋರಂಜನೆ ನೀಡುತ್ತದೆ.

ಇಂತಹ ಗುಳ್ಳೆ ಪೇಪರನ್ನು ಎಸೆಯದೇ ತೆಗೆದು ಇಟ್ಟುಕೊಂಡರೆ ಕೆಲಸದ ಒತ್ತಡ ಹೆಚ್ಚಾದಾಗ ಆ ಗುಳ್ಳೆ ಪೇಪರ್‌ ಎತ್ತಿಕೊಂಡು ಆ ಗುಳ್ಳೆಗಳನ್ನ ಒಡೆಯಬೇಕು. ಇದರಿಂದ ನಮ್ಮ ಬುದ್ಧಿ ರಿಲಾಕ್ಸ್‌ ಆಗಿ ಮನಸ್ಸಿನ ಒತ್ತಡವೂ ದೂರವಾಗುತ್ತದೆ.

Advertisement

ಹದ ಬಿಸಿನೀರ ಸ್ನಾನ ಮಾಡಿ: ಕಚೆೇರಿಯಲ್ಲಿ ಕೆಲಸವನ್ನು ಮಾಡಿ ಒತ್ತಡದಿಂದ ಮನೆಗೆ ಬಂದ ಕೂಡಲೇ ಮತ್ತೆ ಬೇರೆ ಯಾವುದೇ ಕೆಲಸಕ್ಕೆ ತೊಡಗಿಕೊಳ್ಳಬೇಡಿ. ಬದಲಿಗೆ ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಸ್ನಾನವನ್ನು ಮಾಡಿ. ಇದರಿಂದ ಮನಸ್ಸು ತುಸು ರಿಲಾಕ್ಸ್‌ ಎನಿಸಿ ಕೆಲಸದ ಒತ್ತಡವೂ ನಿವಾರಣೆ ಆಗಿ ನೆಮ್ಮದಿಯ ಭಾವನೆ ಉಂಟಾಗುತ್ತದೆ.

ಕೈಗಳ ಲಟಿಕೆ ಮುರಿಯಿರಿ: ಕಚೇರಿಯಲ್ಲಿ ಕೆಲಸದ ಚಿಂತೆ ಹೆಚ್ಚಾದ ಹಾಗೇ ತಲೆ ಕೆಡಿಸಿಕೊಳ್ಳುವ ಆವಶ್ಯಕತೆ ಇಲ್ಲ. ಬದಲಿಗೆ ಕೆಲಸ ಮಾಡುತ್ತಾ ಇದ್ದ ಹಾಗೇ ಕೈಗಳ ಲಟಿಕೆ (ನೆಟ್ಟಿಗೆ) ಮುರಿಯಬೇಕು. ಇದರಿಂದ ತುಸು ನೆಮ್ಮದಿಯ ಭಾವನೆ ಉಂಟಾಗುತ್ತದೆ. ಒಂದು ಕೆಲಸ ಮುಗಿದ ಕೂಡಲೇ ಮೈ ಮುರಿಯುವ ಅಭ್ಯಾಸ ಇಟ್ಟುಕೊಂಡಲ್ಲಿ ಪೂರ್ತಿ ದೇಹವೇ ನಿರಾಳಗೊಂಡು ಒತ್ತಡ ನಿವಾರಣೆಯ ಅನುಭವ ದೊರೆಯುತ್ತದೆ.

ಚಪ್ಪಲ್‌/ಶೂ ಕಳಚಿ: ನಿರಂತರವಾಗಿ ಕುಳಿತು ಕಚೇರಿಯಲ್ಲಿ ಕೆಲಸ ಮಾಡುತ್ತಾ ಒತ್ತಡ ಹೆಚ್ಚಾದಾಗ ಕುಳಿತ ಸ್ಥಳದಲ್ಲೇ ಕಾಲಿಗೆ ಧರಿಸಿರುವ ಶೂ ಅಥವಾ ಚಪ್ಪಲನ್ನು ಕಳಚಿ ಬಿಟ್ಟು ಖಾಲಿ ಕಾಲಲ್ಲಿ ನೆಲಕ್ಕೆ ಉಜ್ಜಬೇಕು. ಇದರಿಂದಲೂ ಒತ್ತಡದ ಮನಸ್ಸಿಗೆ ತುಸು ಆರಾಮದ ಅನುಭವ ಸಿಗುತ್ತದೆ.ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಂತ ದೇಶದಲ್ಲಿ ಎಲ್ಲರೂ ಉದ್ಯೋಗಕ್ಕಾಗಿ ಕೆಲಸಕ್ಕಾಗಿ ಸಾಕಷ್ಟು ಸ್ಪರ್ಧೆಯನ್ನು ಎದುರಿಸಬೇಕು. ಉದ್ಯೋಗಿಯು ಯಾವುದೇ ಕೆಲಸವನ್ನು ಆಯ್ದುಕೊಂಡರೂ ಅದರಲ್ಲಿ ಒತ್ತಡವಂತೂ ಇದ್ದೇ ಇರುತ್ತದೆ. ಉದ್ಯೋಗದಲ್ಲಿ ಒತ್ತಡ ಇದೆಯೆಂದು ಕೆಲಸ ಮಾಡದೇ ಇರಲು ಸಾಧ್ಯವಿಲ್ಲ. ಒತ್ತಡವನ್ನು ನಿಭಾವಣೆ ಮಾಡಿಕೊಂಡು ಜೀವನ ನಡೆಸುವುದು ಒಂದು ರೀತಿಯ ಕಲೆ ಎಂದರೂ ತಪ್ಪಾಗದು. ಇಂತಹ ಕಲೆಗಳನ್ನು ಅಳವಡಿಕೆ ಮಾಡಿಕೊಂಡು ಕೆಲಸವನ್ನು ನಿರ್ವಹಿಸಿದಲ್ಲಿ ಪ್ರತಿಯೊಬ್ಬರೂ ಯಶಸ್ವಿ ಉದ್ಯೋಗಿ ಎನಿಸಿಕೊಳ್ಳಬಹುದು.

-ಸಂತೋಷ್‌ ರಾವ್‌ ಪೆರ್ಮುಡ

ಪೆರ್ಮುಡ ಮನೆ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next