ಆಲಮಟ್ಟಿ: ಸ್ಥಳೀಯ ಗ್ರಾಪಂ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಪ್ರಮುಖ ರಸ್ತೆಯಾಗಿರುವ ಅರಳದಿನ್ನಿಯಿಂದ ಆಲಮಟ್ಟಿ ಮಾರುಕಟ್ಟೆಗೆ ಬರುವ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿದೆ.
ಅರಳದಿನ್ನಿಯಲ್ಲಿರುವ ಕನ್ನಡ ಮಾಧ್ಯಮ ಹಾಗೂ ಉರ್ದು ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಹೋಗುವ ರಸ್ತೆಯು ಇತ್ತೀಚೆಗೆ ಸುರಿದ ಮಳೆಯಿಂದ ಕೆಸರುಮಯವಾಗಿರುವುದಲ್ಲದೇ ನೀರು ಸಹ ರಸ್ತೆಯಲ್ಲಿ ತುಂಬಿದೆ. ಕೋವಿಡ್-19ರ ಪರಿಣಾಮದಿಂದ ಶಾಲೆಗೆ ಮಕ್ಕಳು ಬಾರದಿದ್ದರೂ ಶಿಕ್ಷಕರು ವಿದ್ಯಾಗಮ ಶಿಕ್ಷಣ ನೀಡಲು ಮಕ್ಕಳು ಇರುವಲ್ಲಿಗೆ ಹೋಗಿ ಬೋಧಿಸಿನಂತರ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಲು ಹಾಗೂ ಇನ್ನುಳಿದ ಸರ್ಕಾರದ ನಿಯಮದಂತೆ ದಾಖಲಾತಿಯನ್ನು ತಯಾರಿಸಲು ಆಗಮಿಸುವ ಶಿಕ್ಷಕರ ಮೈಯೆಲ್ಲಾ ಕೆಸರು ಮಾಡಿಕೊಂಡು ಶಾಲೆಗಳಿಗೆ ತೆರಳುವಂತಾಗಿದೆ.
ಇನ್ನು ನಾಗರಿಕರು ಪ್ರಮುಖವಾಗಿ ಅವಲಂಬಿಸಿರುವ ರಸ್ತೆಯಲ್ಲಿ ನೀರು ನಿಂತು ರಸ್ತೆಯೆಲ್ಲ ಕೆಸರುಮಯವಾಗಿದ್ದರಿಂದ ದೂರವಾದರೂ ಇನ್ನೊಂದು ಮಾರ್ಗದ ಮೂಲಕ ತಮ್ಮ ಮನೆಗಳಿಗೆ ತಲುಪುತ್ತಾರೆ. ಅದೇ ರಸ್ತೆಯ ಮೂಲಕ ತೆರಳಬೇಕಾಗಿರುವ ರೈತರು ಕೆಸರಿನಲ್ಲಿ ಕಾಲು ಜಾರಿ ಬಿದ್ದು ಕಾಲುಗಳಿಗೆ ನೋವು ಮಾಡಿಕೊಂಡಿರುವ ಘಟನೆಗಳೂ ನಡೆದಿವೆ ಎನ್ನುತ್ತಾರೆ ಮಾಧುರಾಯಗೌಡ ಪಾಟೀಲ.
ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುತ್ತಿದ್ದರೂ ಇಂಥ ಗ್ರಾಪಂ ವ್ಯವಸ್ಥೆಯಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುವಂತಾಗುತ್ತಿದೆ. ಪ್ರತಿ ಬಾರಿ ಮಳೆಯಾದಾಗಲೊಮ್ಮೆ ಇದೇ ರೀತಿ ತೊಂದರೆಯಾಗುತ್ತಿದೆ ಅಲ್ಲದೇ ಈ ಬಾರಿ ಕಳೆದ ಒಂದು ವಾರದಿಂದಲೂ ರಸ್ತೆಯಲ್ಲಿ ನೀರು ನಿಂತು ಸಂಪೂರ್ಣ ಕೆಸರುಮಯವಾಗಿ ಬೈಕ್‌ಗಳು ತೆರಳದಂತೆ ಜನರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಿಸಿದವರೊಂದಿಗೆ ಹಲವಾರು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಕೂಡಲೇ ಸಂಬಂಧಿಸಿದ ಇಲಾಖೆಯವರು ರಸ್ತೆ ದುರಸ್ತಿಗೊಳಿಸಬೇಕು.
ಬೇಜವಾಬ್ದಾರಿ ತೋರಿದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ತ್ವರಿತವಾಗಿ ದುರಸ್ತಿಗೊಳಿಸದಿದ್ದರೆ ಗ್ರಾಮಸ್ಥರೊಂದಿಗೆ ಸೇರಿಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಉಮೇಶ ಗಣಿ, ಬಸಪ್ಪ ಮಾದರ, ಪರಸಪ್ಪ ಮಾದರ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದ ಅಧ್ಯಕ್ಷ ಹನಮಂತ ಮಾದರ ಎಚ್ಚರಿಕೆ ನೀಡಿದ್ದಾರೆ.