Advertisement

ಸಿದ್ದುಗೆ ಅರ್ಕಾವತಿ ಕೋಳ: ಶೆಟ್ಟರ

01:07 PM May 16, 2019 | Team Udayavani |

ಹುಬ್ಬಳ್ಳಿ: ಅರ್ಕಾವತಿ ಡಿನೋಟಿಫಿಕೇಶನ್‌ ಕುರಿತ ತನಿಖಾ ವರದಿ ಸದನದಲ್ಲಿ ಮಂಡನೆಯಾದರೆ ಸಿಎಲ್ಪಿಸಿ ಅಧ್ಯಕ್ಷ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಸುಮಾರು 900 ಎಕರೆ ಜಮೀನನ್ನು ಒಂದೇ ಫೈಲ್ನಲ್ಲಿ ಡಿನೋಟಿಫಿಕೇಶನ್‌ ಮಾಡಿ ಅಂದಾಜು 10 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ ಆರೋಪವಿದೆ. ಈ ಕುರಿತು ನ್ಯಾ| ಕೆಂಪಣ್ಣ ಆಯೋಗ ವರದಿ ಬಂದು ಎರಡು ವರ್ಷವಾದರೂ ಸದನದಲ್ಲಿ ಮಂಡನೆ ಮಾಡಿಲ್ಲ. ಒಂದು ವೇಳೆ ಮಂಡನೆಯಾದರೆ ಅವರು ಜೈಲಿಗೆ ಹೋಗುವುದು ಸಿದ್ಧ. ಇಂಥವರು ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರೆಂದು ಹಗುರವಾಗಿ ಮಾತನಾಡುತ್ತಿರುವುದು ಎಷ್ಟು ಸರಿ ಎಂದರು.

ಡಿ.ಕೆ. ಶಿವಕುಮಾರ ಕೆಲವು ಪ್ರಕರಣಗಳಲ್ಲಿ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸಹ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಒಂದು ವೇಳೆ ಇವರಿಗೆಲ್ಲ ಬೇಲ್ ಸಿಗದಿದ್ದರೆ ಜೈಲಿಗೆ ಹೋಗುತ್ತಿದ್ದರು. ತಮ್ಮ ಪಕ್ಷದಲ್ಲಿ ಇಷ್ಟೆಲ್ಲ ಭ್ರಷ್ಟಾಚಾರ ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡಲು ಸಿದ್ದರಾಮಯ್ಯಗೆ ಸಾಮಾನ್ಯ ಜ್ಞಾನವಿಲ್ಲವೆ. ಅವರ ಅಹಂಕಾರ, ದಬ್ಟಾಳಿಕೆ ಬಹಳ ದಿನ ಇರಲ್ಲ. ಕುಂದಗೋಳ ಕ್ಷೇತ್ರದ ಜನ ಎಸ್‌.ಐ. ಚಿಕ್ಕನಗೌಡರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಬಂಗ್ಲೆಯಿಂದ ಹೊರದಬ್ಬಲಿ: ಸಿದ್ದರಾಮಯ್ಯ ಅನಧಿಕೃತವಾಗಿ ಕಾವೇರಿ ಬಂಗ್ಲೆಯಲ್ಲಿ ಉಳಿದು ಕೊಂಡಿದ್ದು, ಯಾವ ನೈತಿಕತೆ ಮೇಲೆ ಅಲ್ಲಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಧಮ್‌ ಇದ್ದರೆ ಅವರನ್ನು ಅಲ್ಲಿಂದ ಹೊರಗೆ ಹಾಕಬೇಕಿತ್ತು ಎಂದರು.

ಯಾರದೋ ಮಂತ್ರಿ ಹೆಸರಿನಲ್ಲಿ ಬಂಗ್ಲೆ ಮಂಜೂರು ಮಾಡಿಸಿಕೊಂಡು ಅಲ್ಲಿ ಇರುತ್ತೇನೆಂದರೆ ಹೇಗೆ? ಆ ಅಧಿಕಾರ ಸಿದ್ದರಾಮಯ್ಯಗೆ ಇದೆಯಾ? ಜಾರ್ಜ್‌ ಗೆ ಮಂಜೂರಾಗಿದೆ. ಅದರಲ್ಲಿ ನಾನಿದ್ದೇನೆ ಎಂದು ಬೇಜವಾಬ್ದಾರಿಯಿಂದ ಹೇಳುತ್ತಿದ್ದಾರೆ. ಅಲ್ಲದೆ ಅವರ ವಿರುದ್ಧ ಲೋಕಾಯುಕ್ತದಲ್ಲಿ 71 ಪ್ರಕರಣಗಳಿವೆ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಸೇರಿದಂತೆ ನೂರೆಂಟು ಪ್ರಕರಣಗಳಿವೆ. ತಾವೊಬ್ಬರೇ ಸತ್ಯಹರಿಶ್ಚಂದ್ರ, ಪ್ರಾಮಾಣಿಕ ಎಂದುಕೊಂಡಿದ್ದಾರೆ. ಇಂಥವರಿಗೆ ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆಯಿಲ್ಲ. ಮೇ 23ರ ನಂತರ ಇವರಿಗೆ ಎಲ್ಲೂ ನೆಲೆಗಟ್ಟು ಇರುವುದಿಲ್ಲ ಎಂದು ಹೇಳಿದರು.

Advertisement

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದುರ್ಯೋಧನಗಿಂತ ಹೆಚ್ಚಿನ ಅಹಂಕಾರಿ ಸಿದ್ದರಾಮಯ್ಯ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನ ಅವರಿಗೆ ತಕ್ಕಪಾಠ ಕಲಿಸಿದರೂ ಬುದ್ಧಿ ಬಂದಿಲ್ಲ. ಹೀಗಾಗಿ ಅಲ್ಲಿಂದ ಬಾದಾಮಿಗೆ ಬಂದಿದ್ದಾರೆ. ಇವರು ಪ್ರಧಾನಿ ಹಾಗೂ ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಪಕ್ಷ ಖಂಡಿಸುತ್ತದೆ. ಸಿದ್ದರಾಮಯ್ಯ ಕಾವೇರಿ ಬಂಗ್ಲೆಯಲ್ಲಿ ಅನಧಿಕೃತವಾಗಿ ಇದ್ದ ಬಗ್ಗೆ ಪಕ್ಷವು ಚುನಾವಣೆ ಫಲಿತಾಂಶದ ನಂತರ ಕೋರ್ಟ್‌ ಮೊರೆ ಹೋಗಲು ಚಿಂತನೆ ನಡೆಸಿದೆ ಎಂದರು.

ಮುಖ್ಯಮಂತ್ರಿ ರೇಸ್‌ನಲ್ಲಿ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ, ಆರ್‌.ವಿ. ದೇಶಪಾಂಡೆ, ಎಂ.ಬಿ. ಪಾಟೀಲ, ಡಾ| ಜಿ. ಪರಮೇಶ್ವರ ಹೀಗೆ ಐದಾರು ಜನರಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತು ಪಡಿಸಿ ಯಾರೂ ಸಿಎಂ ರೇಸ್‌ನಲ್ಲಿಲ್ಲ. ಅವರೇ ನಮ್ಮ ಪ್ರಶ್ನಾತೀತ ನಾಯಕ, ಮುಖ್ಯಮಂತ್ರಿ. ಅದರಲ್ಲಿ ಯಾವುದೇ ಸಂದೇಹವಿಲ್ಲ.
ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ
ನನ್ನ ಬಗ್ಗೆ ಅನುಕಂಪ ಬೇಡ
ಸೋಮವಾರ ಸಿದ್ದರಾಮಯ್ಯ ಕುತಂತ್ರ ಬಗ್ಗೆ ನಾನು ಹೇಳಿದ್ದು ಅವರಿಗೆ ನಾಟಿದೆ. ಅದಕ್ಕೆ ಟ್ವೀಟ್ ಮಾಡಿದ್ದಾರೆ. ನನ್ನ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ. ಇದೆಲ್ಲ ಬೇಡ. ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಮೂಡಿಸುವ ಕೆಲಸ ಮಾಡಬೇಡಿ. ಮೇ 23ರ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಅಷ್ಟೇ ಸತ್ಯ. ಕಾದುನೋಡಿ ಎಂದು ಜಗದೀಶ ಶೆಟ್ಟರ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next