Advertisement

Arakalgudu: ರೈತರಿಗೆ ಬೇಡವಾದ ಸಿಂದಿ ಹೋರಿಕರು

06:26 PM Oct 16, 2023 | Team Udayavani |

ಅರಕಲಗೂಡು: ರೈತರಿಗೆ ಬೇಡವಾದ ಸಿಂದಿ ಹೋರಿ ಕರುಗಳು ಬೀದಿ ನಾಯಿಗಳ ಬಾಯಿಗೆ ತುತ್ತಾಗುತ್ತಿದ್ದು, ಇದೊಂದು ರೀತಿಯಲ್ಲಿ ತಿಳಿದೇ ಮಾಡುತ್ತಿರುವ ಸಿಂದಿ ಹೋರಿ ಕರುಗಳ ಮಾರಣ ಹೋಮವಾಗಿದೆ.

Advertisement

ತಾಲೂಕಿನಲ್ಲಿನ ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದು, ಸಿಂದಿ ಹಸುಗಳನ್ನೇ ಅಧಿಕವಾಗಿ ಸಾಕಾಣಿಕೆ ಮಾಡಿ ಹಾಲು ಉತ್ಪಾದನೆಯಲ್ಲಿ ತೊಡಗಿ ದ್ದಾರೆ. ಪ್ರತಿ ವರ್ಷವೂ ಕೂಡ ಹಸುಗಳು ಕರುಗಳಿಗೆ ಜನ್ಮ ನೀಡುತಿದ್ದು, ಗಂಡು ಕರುಗಳು ಜನಿಸಿದರೇ ಯಾರೂ ಕೂಡ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನು ಜಾನುವಾರುಗಳ ಸಂತೆ ನಡೆಯುವ ದಿನ ಕರುಗಳನ್ನು ಬೈಕ್‌ ಅಥವಾ ವಾಹನಗಳಲ್ಲಿ ತಂದು ಸಂತೆ ಒಳಗೆ ಅಥವಾ ರಸ್ತೆಬದಿ ಬಿಟ್ಟು ಹೋಗುತ್ತಾರೆ. ಇವುಗಳನ್ನು ಯಾರೂ ಕೂಡ ಸಾಕುವುದಿಲ್ಲ. ಅಂತಿಮವಾಗಿ ಬೀದಿ ನಾ ಯಿಗಳ ದಾಳಿಗೆ ಆಗತಾನೆ ಜನಿಸಿದ ಗಂಡು ಸಿಂದಿ ಕರುಗಳು ಒಳ ಗಾಗು ತ್ತಿರುವುದು ನೋವಿನ ಸಂಗತಿಯಾಗಿದೆ.

ರೈತರೇ ಕರುಗಳನ್ನು ಬಿಡುತ್ತಿರುವುದು: ಹೈನುಗಾರಿಕೆಯನ್ನೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇತ್ತೀಚೆಗೆ ಕೈಗೊಳ್ಳುತಿದ್ದಾರೆ. ಕನಿಷ್ಠ 2 ಸಿಂದಿ ಹಸುಗಳಿಂದ ಗರಿಷ್ಟ 10ರ ತನಕ ಸಾಕಾಣಿಕೆ ಮಾಡುತಿದ್ದಾರೆ. ಇದರಲ್ಲಿ ರೈತ ಮಹಿಳೆಯರು, ಮಕ್ಕಳು ಕೂಡ ತೊಡಗಿಕೊಳ್ಳುವುದರಿಂದ ಆರ್ಥಿಕ ಬದುಕಿಗೆ ನೆರವಾಗುತ್ತಿದೆ. ವರ್ಷಕ್ಕೆ ಹಸು ಕರುವನ್ನು ಹಾಕುವುದರಿಂದ ಸಂಖ್ಯೆ ದ್ವಿಗುಣಗೊಳ್ಳುತ್ತದೆ. 10 ಹಸುಗಳ ಪೈಕಿ 8 ಹೆಣ್ಣು ಕರುಗಳನ್ನು ಹಾಕಿದರೇ 2 ಗಂಡು ಕರುಗಳು ಜನನವಾಗುತ್ತವೆ. ಈ ಹಿಂದೆ ಗಂಡು ಕರುಗಳನ್ನು ಸಾಕಿ ಜಮೀನಿನ ಉಳುಮೆಗೆ ಬಳಕೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಕೃಷಿ ಬದುಕು ಕಷ್ಟದಿಂದ ಕೂಡಿರುವುದನ್ನು ಮನಗಂಡಿರುವ ಬಹುತೇಕ ರೈತರು ಯಂತ್ರಗಳನ್ನು ಬಳಕೆ ಮಾಡುತ್ತಿರುವುದರಿಂದ ಹಸುಗಳಿಂದ ಮಾಡುವ ಉಳುಮೆಗೆ ಬ್ರೇಕ್‌ ಬಿದ್ದಿದೆ. ಅಲ್ಲದೇ ಸಿಂದಿ ಗಂಡು ಕರುಗಳು ಬೆಳೆದ ಮೇಲೆ ಹೆಚ್ಚು ಗಾತ್ರದಿಂದ ಕೂಡಿರುವುದು ಮೇವು ಹೆಚ್ಚಾಗಿ ಬೇಕಾಗುತ್ತದೆ. ಈ ಸಲುವಾಗಿಯೇ ಯಾರೂ ಕೂಡ ಸಾಕುತ್ತಿಲ್ಲ. ಎತ್ತಿನಗಾಡಿ ಹೊಂದಿರುವ ರೈತರು ನಾಟಿ ಓರಿ ಕರು, ಎತ್ತುಗಳನ್ನು ಬಳಕೆ ಮಾಡುತ್ತಿದ್ದಾರೆ.

ಪರಿಶೀಲನೆ ಮಾಡಬೇಕಿದೆ: ಈ ಹಿಂದೆ ರಾಜ್ಯದಲ್ಲಿ ಜಾರಿಗೆ ಬಂದಿದ್ದ ಗೋಹತ್ಯೆ ನಿಷೇಧ ಕಾಯಿದೆ ಹಿನ್ನೆಲೆ ಪಶು ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ದನಗಳ ಸಂತೆ ನಡೆಯುವ ಸ್ಥಳಕ್ಕೆ ತೆರಳಿ ರೈತರು ಮಾರುವ ಹಸು ಎಮ್ಮೆ, ಕೋಣ ಕುರಿತು ಮೊದಲು ಮಾಹಿತಿ ದಾಖಲಿಸಿದ ಬಳಿಕ ಮಾರಾಟ ಮತ್ತು ಸಾಗಾಣಿಕೆ ಬಗ್ಗೆ ಎಚ್ಚರ ವಹಿಸಲಾಗುತಿತ್ತು. ಇದು ಒಂದೆರಡು ವಾರ ಮಾತ್ರ ನಡೆದಿತ್ತು. ಬಳಿಕ ಇಲ್ಲವಾಯಿತು. ಈ ವೇಳೆ ಗಂಡು ಸಿಂದಿ ಕರುಗಳನ್ನು ರೈತರು ಸಂತೆಗೆ ತಂದು ಬಿಟ್ಟುಹೋಗುತಿರಲಿಲ್ಲ. ಈಗ ಅದು ಇಲ್ಲವಾದ ಹಿನ್ನೆಲೆ ಪುಟ್ಟ ಕರುಗಳ ಮಾರಣಹೋಮ ನಡೆಯುತ್ತಿದೆ.

ತಾಲೂಕಲ್ಲಿ ಗೋಶಾಲೆಗಳು ಇಲ್ಲ : ತಾಲೂಕಿನಲ್ಲಿ ಯಾವುದೇ ಗೋಶಾಲೆ ಇಲ್ಲ. ಹತ್ತಾರು ಮಠ ಮಾನ್ಯಗಳು ಇದ್ದು, ಯಾವುದೇ ಮಠ ಅಥವಾ ಸಂಘ ಸಂಸ್ಥೆಗಳು ಗೋಶಾಲೆಯನ್ನು ತೆರೆದಿಲ್ಲ. ಕೆಲವೊಮ್ಮೆ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಾಣಿಕೆ ಮಾಡುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವ ಪೊಲೀಸರು ಕೂಡ ಮೈಸೂರಿನ ಗೋಶಾಲೆಗೆ ವಶಕ್ಕೆ ಪಡೆದ ಜಾನುವಾರುಗಳನ್ನು ಕಳುಹಿಸುತ್ತಾರೆ. ಆದರೆ, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರೈತರು ಬಿಟ್ಟು ಓಡಿಸಿರುವ ಗಂಡು ಸಿಂದಿ ಕರುಗಳನ್ನು ಪೊಲೀಸರಾಗಲಿ, ಸಂಘ ಸಂಸ್ಥೆಯವರಾಗಲಿ ವಶಕ್ಕೆ ಪಡೆದು ರಕ್ಷಣೆ ಮಾಡುವ ಕೆಲಸ ಆಗಿಲ್ಲ. ಇದರಿಂದ ಬೀದಿ ನಾಯಿಗಳ ದಾಳಿಗೆ ಕರುಗಳು ಒಳಗಾಗುತ್ತಿವೆ.

Advertisement

– ವಿಜಯ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next