Advertisement

ಕೊರಗ ಸಮುದಾಯದ ಅಹೋರಾತ್ರಿ ಪ್ರತಿಭಟನೆ

08:29 PM Jul 15, 2019 | Sriram |

ಉಡುಪಿ: ತಮ್ಮ ಬೇಡಿಕೆಗೆ ಅನುಸಾರವಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅನುದಾನ ಹಂಚಬೇಕೆಂದು ಆಗ್ರಹಿಸಿ ಕೊರಗರ ಜಿಲ್ಲಾ ಸಮಿತಿ ಅಹೋರಾತ್ರಿ ಪ್ರತಿಭಟನೆಯನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿದೆ.

Advertisement

ಕೊರಗರು ಮತ್ತು ಮಲೆಕುಡಿಯರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಅನುಷ್ಠಾನವಾಗಬೇಕು. ತಾಲೂಕುವಾರು ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಆಗಬೇಕು. ಮೂರನೆಯ ಒಂದರಷ್ಟು ಅನುದಾನವನ್ನು ಮಹಿಳೆಯರ ಹೆಸರಿಗೆ ಕಾಯ್ದಿರಿಸಿ ಅನುಷ್ಠಾನ ಆಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಂಘಟನೆಯ ಜನ ಯೋಜನೆಯನ್ನು ಸಮುದಾಯದ ಪರಿಣಾಮಕಾರಿ ಸಹಭಾಗಿತ್ವದಲ್ಲಿ ಜಾರಿಗೊಳ್ಳಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.

ಸಮಿತಿ ಜಿಲ್ಲಾಧ್ಯಕ್ಷ ಕೆ.ಪುತ್ರ ಹೆಬ್ರಿ, ನಾಯಕರಾದ ಸುಶೀಲಾ ನಾಡ, ಸಂಜೀವ ಬಾರಕೂರು, ಅಮ್ಮಣ್ಣಿ ಬೆಳ್ವೆ, ಬೊಗ್ರ ಕೊಕ್ಕರ್ಣೆ, ಕುಮಾರ ಕೆಂಜೂರು ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ನ್ಯಾಯ ದೊರಕಿಸಿ
ಕೊಡುವಂತೆ ಪ್ರತಿಭಟನೆ:ಪುತ್ರ
ನಿಗಮದಿಂದ 2.25 ಕೋ.ರೂ. ಅನುದಾನ ಮಂಜೂರಾಗಿತ್ತು. ಅಧಿಕಾರಿಗಳು ಹಿಂದೆ ತಮಗೆ ತೋಚಿದಂತೆ ಯೋಜನೆಗಳನ್ನು ತಯಾರಿಸಿದಾಗ ಅದನ್ನು ವಿರೋಧಿಸಿ ಶಾಸಕರಿಗೆ, ಹಿಂದಿನ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೆವು. ಅನಂತರ ಶಾಸಕರು, ಜಿಲ್ಲಾಧಿಕಾರಿಯವರು ಜನ ಸಮುದಾಯದ ಬೇಡಿಕೆಯಂತೆ ಯೋಜನೆ ತಯಾರಿಸಲು ಹೇಳಿದ್ದರೂ ಈಗ ಕೇಂದ್ರ ಕಚೇರಿಯವರು ಒಪ್ಪಲಿಲ್ಲ ಎಂದು ತಮ್ಮದೇ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಈ ವಿಷಯ ಜು. 4ರಂದು ನಡೆದ ಜಿಲ್ಲಾಧಿಕಾರಿಯವರ ಕೊರಗ ಅಭಿವೃದ್ಧಿ ಪ್ರಗತಿ ಪರಿಶೀಲನ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆಂದು ಪುತ್ರ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next