Advertisement

ಅಡಿಕೆಗೆ ಬಾಧಿಸುವ ಎಲೆಚುಕ್ಕಿ ರೋಗ ತಡೆಗೆ ಉನ್ನತಮಟ್ಟದ ಸಂಶೋಧನೆ: ಸಚಿವ ಆರಗ ಜ್ಞಾನೇಂದ್ರ

11:27 PM Dec 21, 2022 | Team Udayavani |

ಸುವರ್ಣ ವಿಧಾನಸೌಧ: ಅಡಿಕೆ ಗಿಡಕ್ಕೆ ಬಾಧಿಸುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಮೂಲಾಗ್ರವಾಗಿ ಸಂಶೋಧನೆ ನಡೆಸಲು ಕೃಷಿ ವಿಜ್ಞಾನಿಗಳಿಗೆ ನಿರ್ದೇಶನ ನೀಡಲಾಗಿದೆ ಮತ್ತು ಈ ಉದ್ದೇಶಕ್ಕಾಗಿ 4.39 ಕೋ.ರೂ. ಮೀಸಲಿಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರ ಪರವಾಗಿ ಸಂಜೀವ ಮಟ್ಟಂದೂರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಬೆಳೆಗಳನ್ನು ಬೆಳೆಯುವುದು ಕಷ್ಟ. ಹೀಗಾಗಿ ಬಹುತೇಕರು ಅಡಿಕೆ, ತೆಂಗು, ಏಲಕ್ಕಿ, ಕಾಲುಮೆಣಸು ಹೀಗೆ ವಾಣಿಜ್ಯ ಬೆಳಗಳನ್ನು ಬೆಳಯುತ್ತಿದ್ದಾರೆ. ಕೃಷಿ ಪರಿಕರ ಖರೀದಿಗೆ ಸರ್ಕಾರವು ಸಬ್ಸಿಡಿಯನ್ನು ನೀಡುತ್ತಿದೆ. 1962ರಿಂದ ಕಾಫಿ ಬೆಳೆಯಲ್ಲಿ ಬಾಧಿಸುತ್ತಿದ್ದ ಎಲೆಚುಕ್ಕಿ ರೋಗ ಎರಡು ವರ್ಷದಿಂದ ಅಡಿಕೆ ಬೆಳೆಯಲ್ಲೂ ಕಾಣಿಸಿಕೊಳ್ಳುತ್ತಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗುತ್ತಿವೆ. ಈ ರೋಗಕ್ಕೆ ಇಲ್ಲಿಯವರೆಗೂ ಪರಿಹಾರ ಕಂಡುಕೊಂಡಿಲ್ಲ. ಈ ನಿಟ್ಟಿನಲ್ಲಿ ಕೃಷಿ ಕಾಲೇಜು, ಶೃಂಗೇರಿ ಮತ್ತು ತೀರ್ಥಹಳ್ಳಿ ಕೃಷಿ ಸಂಶೋಧನ ಕೇಂದ್ರದಿಂದ ಪ್ರಸ್ತಾವನೆಯನ್ನು ಸ್ವೀಕರಿಸಿಕೊಂಡು ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಲಾಗಿದೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಡಿಕೆ ತೋಟಕ್ಕೆ ಹೋಗಿ ಅಡಿಕೆ ಬೆಳೆಗಳನ್ನು ಪರಿಶೀಲಿಸಿದ್ದರು. ಹೀಗಾಗಿ ಅವರು ಕೂಡ ಎಲೆಚಿಕ್ಕಿ ರೋಗದ ನಿರ್ಮೂಲನೆಗೆ ಉನ್ನತ ಮಟ್ಟದ ಸಂಶೋಧನೆಗೆ ಸೂಚಿಸಿದ್ದಾರೆ. ಸಂಶೋಧನೆಯಿಂದ ಮಾತ್ರ ಈ ರೋಗಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈಗಾಗಲೇ ರೈತರಿಗೆ ಅಡಿಕೆ ಮರಕ್ಕೆ ಔಷಧ ಸಿಂಪಡನೆ ಮಾಡಲು ಒಂದು ಬಾರಿ ಉಚಿತವಾಗಿ ಔಷಧ ನೀಡುತ್ತಿದ್ದೇವೆ. ಅಡಿಕೆ ಕುಯ್ಯುವ ಫೈಬರ್‌ ದೋಟಿಗಳಿಗೆ 30 ಸಾವಿರ ರೂ.ಗಳ ವರೆಗೂ ಸಬ್ಸಿಡಿ ನೀಡುತ್ತಿದ್ದೇವೆ ಎಂದರು.

ಬಿಜೆಪಿಯ ಸಂಜೀವ ಮಟ್ಟಂದೂರ ಮಾತನಾಡಿ, ಎಲೆಚುಕ್ಕಿ ರೋಗ, ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಈ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಬಿಜೆಪಿಯ ಸಿ.ಟಿ.ರವಿ ಮಾತನಾಡಿ, ಅತೀಯಾದ ರಾಸಾಯನಿಕ ಬಳೆಯಿಂದಲೂ ರೋಗಬಾಧೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಾಗುತ್ತಿದೆ. ಈವರೆಗೂ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಮಗ್ರ ಅಧ್ಯಯನ ನಡೆಸಬೇಕು ಎಂದು ಹೇಳಿದರು.

Advertisement

ಕಾಂಗ್ರೆಸ್‌ ರಮೇಶ್‌ ಕುಮಾರ್‌ ಮಾತನಾಡಿ, ಇದೊಂದು ಪಾರಂಪರಿಕ ಕಾಯಿಲೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿ.ವಿ.ಗಳಲ್ಲಿ ಯಾವುದೇ ಸಂಶೋಧನೆಗಳು ನಡೆಯುತ್ತಿಲ್ಲವೋ ಏನೋ ಎಂಬ ಸಂಶಯ ಕಾಡುತ್ತಿದೆ. ಹಾಗಾದರೇ ಸಂಶೋಧನೆಗಳ ಫ‌ಲಿತಾಂಶ ಏನು? ಒಂದೊಂದು ಬೆಳೆಯ ಸಂಶೋಧನೆಗೂ ಒಂದೊಂದು ವಿ.ವಿ. ಮಾಡಬೇಕಾಗುತ್ತದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಉಪನಾಯಕ ಯು.ಟಿ.ಖಾದರ್‌ ಮಾತನಾಡಿ, ಎಲೆಚಿಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳುವ ಜತೆಗೆ ಬೆಳೆ ನಷ್ಟಕ್ಕೆ ತತ್ಕ್ಷಣವೇ ಬೆಳಗಾಗರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿ, ಅಡಿಕೆಗೆ ಸಂಬಂಧಿಸಿದಂತೆ ಹೊಸ ತೋಟ ಮಾಡುವುದು ಬೇಡವೇ ಬೇಡ. ಈಗ ಇರುವ ತೋಟವನ್ನು ಉಳಿಸಿಕೊಳ್ಳಬೇಕಾಗಿದೆ. ಅಲ್ಲದೆ, ಅಡಿ ಜಿಗಿದು ಉಗಿಯುವುದಕ್ಕೆ ಸೀಮಿತವಾಗಿದೆಯೇ ಹೊರತು, ಬೇರೆ ಯಾವುದೇ ಉದ್ದೇಶಕ್ಕೆ ವ್ಯಾಪಕವಾಗಿ ಬಳಸುವ ಬಗ್ಗೆ ಸಮಗ್ರ ಸಂಶೋಧನೆಯಾಗಿಲ್ಲ ಮತ್ತು ಬಳಕೆಯೂ ಆಗುತ್ತಿಲ್ಲ. 10 ನರ್ಸರಿಗಳು ಖಾಲಿಯಾಗುತ್ತಿವೆ. ಹೀಗಾಗಿ ಹೊಸತೋಟ ಮಾಡುವ ಬದಲು ಇರುವುದನ್ನು ಉಳಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next