ಬಹಳ ವರ್ಷಗಳ ಹಿಂದೆ ಗ್ರೀಕ್ ದೇಶದಲ್ಲಿ ಅರಾಕ್ನೆ ಎಂಬ ಯುವತಿ ವಾಸವಾಗಿದ್ದಳಂತೆ. ಆಕೆಯ ವೃತ್ತಿ ನೇಯ್ಗೆ. ರೇಶಿಮೆಯ ನೂಲನ್ನು ತೆಗೆದು, ಅದನ್ನು ಸುಂದರವಾಗಿ ನೇಯ್ದು, ವಿಧ ವಿಧವಾದ ರೇಷ್ಮೆಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಆಕೆಯದ್ದು ಎತ್ತಿದ ಕೈ. ಆಕೆಯಲ್ಲಿದ್ದ ಕಲಾತ್ಮಕತೆಯಂತೂ ಅದ್ಭುತ. ನೇಯ್ಗೆಯನ್ನೇ ತನ್ನ ಜೀವ ಎಂದುಕೊಂಡಿದ್ದ ಆಕೆ ದಿನದ ಪೂರ್ತಿ ಹೊಸ ಹೊಸ ಮಾದರಿಯ ರೇಷ್ಮೆ ಬಟ್ಟೆಗಳನ್ನು ತಯಾರಿಸುವುದರಲ್ಲಿಯೇ ಕಳೆಯುತ್ತಿದ್ದಳು. ಅಷ್ಟೇ ಅಲ್ಲ, ತಾನು ಮಾಡುವ ಕೆಲಸವನ್ನು ಅಷ್ಟೇ ಪ್ರೀತಿಸುತ್ತಿದ್ದಳು ಕೂಡ.
ಗ್ರೀಕ್‌ನ ಎಲ್ಲ ಜನರೂ ರೇಷ್ಮೆಯ ಬಟ್ಟೆಗಳನ್ನು ಖರೀದಿಸಲು ಆಕೆಯಲ್ಲಿಗೇ ಬರುತ್ತಿದ್ದರು. ಹೀಗೆ ಸುತ್ತ ಮುತ್ತಲ ಪ್ರದೇಶದಲ್ಲಿ ಆರಾಕ್ನೆಯ ಪ್ರಸಿದ್ಧಿ ಹೆಚ್ಚುತ್ತಾ ಹೋಯಿತು. ಆರಾಕ್ನೆಗೆ ತನ್ನ ಕೈಚಳಕ, ಕಲಾತ್ಮಕತೆಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಪ್ರಸಿದ್ಧಿ ಹೆಚ್ಚಾದಂತೆಲ್ಲಾ ಅಹಂ ಬೆಳೆಯಿತು. ಆಕೆ ತನ್ನ ಕೌಶಲ್ಯದ ಬಗ್ಗೆ ಎಲ್ಲರಲ್ಲಿಯೂ ಕೊಚ್ಚಿಕೊಳ್ಳಲು ಶುರುಮಾಡಿದಳು. ಎಷ್ಟರಮಟ್ಟಿಗೆಯೆಂದರೆ ಅವಳು ತನ್ನ ಕಲಾತ್ಮಕತೆಯನ್ನು ಮೀರಿಸಲು ಗ್ರೀಕ್ ದೇವತೆ ಅಥೆನಾಳಿಗೆ ಕೂಡ ಸಾಧ್ಯವಾಗದು ಎಂದು ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದಳು.
ಈ ಮಾತುಗಳು ದೇವತೆ ಅಥೆನಾ ಕಿವಿಗೂ ಬಿದ್ದವು. ಅರಾಕ್ನೆಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ಅಥೆನ್ಸ್ ನಿರ್ಧರಿಸಿದಳು. ಮಾರನೆಯ ದಿನ ಆರಾಕ್ನೆ ರೇಷ್ಮೆಯ ನೇಯ್ಗೆಯನ್ನು ಒಂದು ಕಡೆಯಿಂದ ಹೊಲಿಯುತ್ತಾ ಹೋದಂತೆಲ್ಲ, ಇನ್ನೊಂದು ಕಡೆ ತನ್ನಷ್ಟಕ್ಕೆ ತಾನೇ ಬಟ್ಟೆಯ ನೂಲುಗಳು ಬಿಚ್ಚಿಕೊಳ್ಳುತ್ತಾ ಹೋದವು. ಆರಾಕೆ°ಗೆ ಏನು ಮಾಡಲೂ ತೋಚದಾಯ್ತು. ಏಕೆ ಹೀಗಾಗುತ್ತಿದೆ ಎಂದು ತಿಳಿಯದಾಯಿತು. ಮತ್ತೆ ಮರುದಿನ ಅದೇ ಪರಿಸ್ಥಿತಿ ಪುನರಾವರ್ತನೆಯಾಯಿತು. ಅರಾಕ್ನೆಗೆ ಇದರಿಂದ ತುಂಬ ಬೇಜಾರಾಯಿತು. ನೇಯ್ಗೆಯೇ ಜೀವವಾಗಿದ್ದ ಆಕೆಗೆ ಆನೇಕ ದಿನಗಳಿಂದ ಒಂದು ಬಟ್ಟೆಯನ್ನೂ ಪೂರ್ತಿ ಮಾಡಲು ಸಾಧ್ಯವಾಗದಿದ್ದಾಗ ದಿಕ್ಕೇ ತೋಚದಂತಾಯಿತು. ಅರಾಕ್ನೆಯ ಗಿರಾಕಿಗಳೆಲ್ಲರೂ ಅವಳಿಂದ ರೇಷ್ಮೆಯ ಬಟ್ಟೆಯನ್ನು ಕೇಳಲು ಶುರು ಮಾಡಿದರು. ಅವಮಾನವನ್ನು ಸಹಿಸಿಕೊಂಡಳು ಆರಾಕ್ನೆ. ವರ್ಷಗಳೇ ಉರುಳಿದವು. ಆಕೆಗೆ ಎಂದೂ ನೇಯ್ಗೆ ಮಾಡಲಾಗಲೇ ಇಲ್ಲ. ಇದೇ ನೋವಲ್ಲಿ ಆರಾಕ್ನೆ ತೀರಿಕೊಂಡಳು. ನಂತರ ಗ್ರೀಕ್ ದೇವತೆ ಅಥೆನಾಗೆ ತಾನು ಮಾಡಿದ್ದು ತಪ್ಪು. ಅನ್ಯಾಯವಾಗಿ ತನ್ನಿಂದ ಒಂದು ಜೀವ ಹೋಯಿತು ಅಂತ ಅನ್ನಿಸಿ ಪಶ್ಚಾತ್ತಾಪವಾಯಿತು. “ಮುಂದಿನ ಜನ್ಮದಲ್ಲಿ ನೀನು ಭೂಮಿಯಲ್ಲಿ ಜೇಡವಾಗಿ ಹುಟ್ಟು. ಜೀವನಪೂರ್ತಿ ನಿನಗೆ ಇಷ್ಟ ಬಂದ ಹಾಗೆ ನೇಯ್ಗೆ ನೇಯುತ್ತಾ ಇರು’ ಎಂದು ಅಥೆನ್ಸ್ ಆರಾಕ್ನೆಯನ್ನು ವಾಪಸ್ ಭೂಮಿಗೆ ಕಳುಹಿಸಿದಳಂತೆ.
– ಚೈತ್ರಾ ಹೊಸ್ಮನೆ