Advertisement

ಔಷಧವಾಗಿ ಬಳಕೆಯಾಗುವ ಅಡಿಕೆ ಇಲ್ಲಿ ಕ್ಯಾನ್ಸರ್‌ಕಾರಕ ಏಕೆ

09:04 PM Dec 21, 2022 | Team Udayavani |

ಪುತ್ತೂರು: ಅಡಿಕೆಯನ್ನು ವಿವಿಧ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ತಿಂದು ಉಗುಳುವುದಕ್ಕೆ ಮಾತ್ರ ಅಡಿಕೆಯನ್ನು ಬಳಕೆ ಮಾಡುವುದಲ್ಲ, ಅಡಿಕೆಯನ್ನು ಔಷಧ ಸೇರಿದಂತೆ ವಿವಿಧ ರೂಪದಲ್ಲಿ ವಿದೇಶದಲ್ಲೂ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಮಾತ್ರ ಅಡಿಕೆ ಹಾನಿಕಾರಕ, ಕ್ಯಾನ್ಸರ್‌ಕಾರಕ ಎಂದು ಏಕೆ ಪರಿಗಣನೆಯಾಗಬೇಕು. ಅಡಿಕೆಯಿಂದಲೂ ಹಲವು ಉತ್ಪನ್ನಗಳ ತಯಾರಿ ಸಾಧ್ಯವಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.

Advertisement

ಶ್ರೀ ಸರಸ್ವತಿ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಅಡಿಕೆ ಪತ್ರಿಕೆ ಸಹಯೋಗದಲ್ಲಿ ಪುತ್ತೂರಿನ ಚುಂಚಶ್ರೀ ಸಭಾಭವನದಲ್ಲಿ ನಡೆದ ಅಡಿಕೆಯ ಹೊಸಬಳಕೆ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಡಿಕೆಯ ಚೊಗರು, ಅಡಿಕೆಯ ಬಣ್ಣ, ಅಡಿಕೆಯ ಔಷಧಗಳು ಇಂದು ವ್ಯಾಪಕವಾಗಿ ಬೆಳೆಯಲು ಅವಕಾಶಗಳು ಇವೆ. ಈ ಹಿನ್ನೆಲೆಯಲ್ಲಿ ಪ್ರಯತ್ನಗಳು ಸಾಗಬೇಕಿದೆ ಎಂದರು.
ಅಡಿಕೆಯ ಬಣ್ಣದ ಬಗ್ಗೆ ಮಾತನಾಡಿದ ದೇಸೀ ಸಂಸ್ಥೆಯ ರುದ್ರಪ್ಪ, ಅಡಿಕೆಯ ಚೊಗರು ಇಂದು ಬೇಡಿಕೆಯ ವಸ್ತುವಾಗಿದೆ. ಅಡಿಕೆ ಬಣ್ಣದಿಂದ ತಯಾರಿಸಿದ ಬಟ್ಟೆಗಳಲ್ಲಿ ರಾಸಾಯನಿಕ ಬಳಕೆ ಬೇಕಿಲ್ಲ. ದೇಶದ ಹಲವು ಕಡೆಗಳಲ್ಲಿ ಬೇಡಿಕೆ ಇದೆ ಎಂದರು.

ಶಿವಮೊಗ್ಗದ ಅರುಣ್‌ ದೀಕ್ಷಿತ್‌ ಮಾತನಾಡಿ, ಬೇರೆ ಉದ್ಯೋಗದಲ್ಲಿದ್ದು ಕೃಷಿ ಸಂಬಂಧಿತ ಉದ್ಯಮ ಮಾಡುವ ವೇಳೆ ಅಡಿಕೆಯ ಉತ್ತಮ ಗುಣಗಳನ್ನು ಗಮನಿಸಿ ಔಷಧ ತಯಾರಿಸಿದ್ದೇನೆ. ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.

ಉಡುಪಿಯ ಎಸ್‌ಡಿಎಂ ಆಯುರ್ವೇದ ಸಂಸ್ಥೆಯ ಡಾ| ಮುರಳೀಧರ್‌ ಬಲ್ಲಾಳ್‌ ಮಾತನಾಡಿ, ಅಡಿಕೆಯನ್ನು ಆಯುರ್ವೇದದಲ್ಲಿ ಔಷಧಯಾಗಿ ಬಳಕೆ ಮಾಡಲಾಗುತ್ತಿದೆ. ಎಲೆ ಹಾಗೂ ಅಡಿಕೆ ಸೇವನೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂದರು.

Advertisement

ಸಿಎಫ್‌ಟಿಆರ್‌ ನಿವೃತ್ತ ವಿಜ್ಞಾನಿ ಡಾ| ಅಪ್ಪಯ್ಯ, ಅಡಿಕೆಯಿಂದ ಹಲ್ಲುಜ್ಜುವ ಪುಡಿ ತಯಾರು ಮಾಡಿರುವ ವಿವೇಕ್‌ ಆಳ್ವ, ಅಡಿಕೆ ಬಳಸಿ ಸೋಪು ಹಾಗೂ ಹಲ್ಲುಜ್ಜುವ ಪುಡಿ ತಯಾರು ಮಾಡಿರುವ ಬೆಳ್ತಂಗಡಿ ಗೇರುಕಟ್ಟೆಯ ರವಿರಾಜ್‌, ಹಣ್ಣಡಿಕೆ ಸಿಪ್ಪೆ ಬಳಕೆ ಮಾಡಿ ಸೋಪು ತಯಾರು ಮಾಡುತ್ತಿರುವ ಮುರಳೀಧರ್‌, ಅಡಿಕೆ ಸಿಪ್ಪೆ ಬಳಕೆ ಮಾಡಿ ವೈನ್‌ ತಯಾರು ಮಾಡಿದ ಗಗನ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿಕ, ಸಂಶೋಧಕ ಬದನಾಜೆ ಶಂಕರ ಭಟ್‌, ಫಾರ್ಮರ್‌ ಫಸ್ಟ್‌ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ ಪಡಾರು, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ, ಶ್ರೀ ಸರಸ್ವತಿ ಚಾರಿಟೆಬಲ್‌ ಟ್ರಸ್ಟ್‌ನ ಟ್ರಸ್ಟಿ ದೇವಿಪ್ರಸಾದ್‌ ಪುಣಚ, ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಜನರಲ್‌ ಮ್ಯಾನೇಜರ್‌ ವಸಂತ ಉಪಸ್ಥಿತರಿದ್ದರು.

ಮಧುಮೇಹಕ್ಕೆ ಉತ್ತಮ, ಪರಿಣಾಮಕಾರಿ ಔಷಧ
ವಿಟ್ಲದ ಜೆಡ್ಡು ಗಣಪತಿ ಭಟ್‌ ಮಾತನಾಡಿ, ಅಡಿಕೆಯನ್ನು ಆಯುರ್ವೇದದ ಹಲವು ಕಡೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಮಧುಮೇಹಕ್ಕೆ ಉತ್ತಮ ಹಾಗೂ ಪರಿಣಾಮಕಾರಿಯಾದ ಔಷಧವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next