Advertisement

ಆಮದು ದರ ಹೆಚ್ಚಳದಿಂದ ಅಡಿಕೆ ಮಾರುಕಟ್ಟೆ ಚೇತರಿಕೆ: ಕಿಶೋರ್‌ ಕೊಡ್ಗಿ

12:38 AM Feb 16, 2023 | Team Udayavani |

ಮಂಗಳೂರು: ಕೇಂದ್ರ ಸರಕಾರ ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ 251ರಿಂದ 351 ರೂ.ಗಳಿಗೆ ಹೆಚ್ಚಿಸಿ ಆದೇಶ ಮಾಡಿರುವುದರಿಂದ ದೇಶೀಯ ಅಡಿಕೆ ಮಾರುಕಟ್ಟೆ ಚೇತರಿಕೆ
ಯಾಗುವ ಆಶಾಭಾವನೆ ಇದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕೆಲವು ತಿಂಗಳುಗಳಿಂದ ಅಡಿಕೆ ದರದಲ್ಲಿ ಅನಿಶ್ಚಿತತೆ ಇದ್ದುದರಿಂದ ಬೆಳೆಗಾರರಲ್ಲಿ ಹತಾಶ ಭಾವನೆ ಇತ್ತು. ಇದೀಗ ಸರಕಾರದ ಆದೇಶದಿಂದಾಗಿ ವಿದೇಶಿ ಅಡಿಕೆಯ ಆಮದಿನ ಮೇಲೆ ಭಾರೀ ಹೊಡೆತ ಬೀಳಲಿದೆ. ಉತ್ತಮ ಗುಣಮಟ್ಟದ ದೇಶಿ ಅಡಿಕೆಗೆ ಬೇಡಿಕೆ ಬರಲಿದೆ. ದರದಲ್ಲಿ ಸ್ಥಿರತೆ ಕಂಡುಬರಲಿದೆ. ಇದು ರೈತರಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದರು.

ನಿರಂತರ ಪ್ರಯತ್ನದ ಫ‌ಲ
ಆ. 18ರಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕ್ಯಾಂಪ್ಕೊ, ಮ್ಯಾಮ್ಕೋಸ್‌, ಟಿಎಸ್‌ಎಸ್‌, ತುಮ್ಕೋಸ್‌, ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ನಾಯಕ ರಮೇಶ್‌ ವೈದ್ಯ ಮೊದಲಾದವರನ್ನೊಳಗೊಂಡ ನಿಯೋಗ ಹೊಸದಿಲ್ಲಿಗೆ ತೆರಳಿ ಕೃಷಿ ಮತ್ತು ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಿತ್ತು. ಅನಂತರ ದಿನಗಳಲ್ಲಿ ಕ್ಯಾಂಪ್ಕೊದ ನಿರಂತರ ಸಂಪರ್ಕ ಮತ್ತು ಒತ್ತಡದ ಪರಿಣಾಮ ಕೇಂದ್ರ ಸರಕಾರ ಸ್ಪಂದಿಸಿ ಆದೇಶ ಹೊರಡಿಸಿದೆ ಎಂದು ಕೊಡ್ಗಿ ತಿಳಿಸಿದರು.

ಮಿಶ್ರ ಬೆಳೆಗೆ ಪ್ರೋತ್ಸಾಹ
ಅಡಿಕೆ ಬೆಳೆ ವಿಸ್ತರಣೆಯಿಂದ ಭವಿಷ್ಯದಲ್ಲಿ ಆಗಬಹುದಾದ ತೊಂದರೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ತಮ್ಮ ಜಮೀನಿ ನಲ್ಲಿ ತಮಗಿಷ್ಟದ ಬೆಳೆ ಬೆಳೆಯುವ ಹಕ್ಕಿದೆ. ಅದನ್ನು ಕ್ಯಾಂಪ್ಕೋ ನಿರ್ಧ ರಿಸಲಾಗದು. ಆದರೆ ಅಡಿಕೆ ಬೆಳೆ ಇನ್ನೂ ವಿಸ್ತರಣೆಯಾದರೆ ಆಗಬಹುದಾದ ತೊಂದರೆ ಎದುರಿಸುವ ನಿಟ್ಟಿನಲ್ಲಿ ರೈತರಿಗೆ ಕ್ಯಾಂಪ್ಕೊ ಸಲಹೆಗಳನ್ನು ನೀಡುತ್ತಿದೆ. ಮಿಶ್ರಬೆಳೆ, ಮೆಡಿಸಿನಲ್‌ ಪ್ಲಾಂಟೇಷನ್‌ ಪ್ರೋತ್ಸಾಹಿಸಲು ಕ್ಯಾಂಪ್ಕೋ ಚಿಂತನೆ ನಡೆಸಿದೆ. ಜೀವ ವೈವಿಧ್ಯ ಇಲಾಖೆಯ ಜತೆ ಮಾತುಕತೆ ಕೂಡ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿ ಕ್ಯಾಂಪ್ಕೊದಿಂದ ಪೂರಕ ನಿರ್ಣಯ ಶೀಘ್ರದಲ್ಲೇ ಕೈಗೊಳ್ಳ ಲಾಗುವುದು. ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಕ್ಯಾಂಪ್ಕೋ ಪ್ರಯತ್ನ ನಡೆಸುತ್ತಿದೆ. ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸರಕಾರಕ್ಕೆ ಪತ್ರ ಬರೆಯ ಲಾಗಿದೆ ಎಂದು ಹೇಳಿದರು.

ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಕೆ., ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಕೃಷ್ಣ ಕುಮಾರ್‌, ನಿರ್ದೇಶಕರಾದ ಕೃಷ್ಣ ಪ್ರಸಾದ್‌ ಮಡ್ತಿಲ, ರಾಘವೇಂದ್ರ ಭಟ್‌ ಕೆದಿಲ, ಜಯಪ್ರಕಾಶ್‌ ಟಿ.ಕೆ, ಮಹಾಪ್ರಬಂಧಕಿ ರೇಶ್ಮಾ ಮಲ್ಯ, ಸಹಾಯಕ ಮಹಾ ಪ್ರಬಂಧಕ ಗೋವಿಂದ ಭಟ್‌ ಪತ್ರಿಕಾ ಗೋಷ್ಠಿಯಲ್ಲಿದ್ದರು.

Advertisement

ಸಂಶೋಧನೆಗೆ ನಿಟ್ಟೆ ವಿ.ವಿ. ಜತೆ ಒಪ್ಪಂದ
“ಅಡಿಕೆ ಸೇವನೆ ಹಾನಿಕರವಲ್ಲ, ಅಡಿಕೆಯಲ್ಲಿ ಕ್ಯಾನ್ಸರ್‌ ನಿವಾರಕ ಅಂಶ ಇದೆ’ ಎಂಬ ಸಂಶೋಧನ ವರದಿಯನ್ನು ಗೃಹಸಚಿವರು ಸದನದಲ್ಲಿ ಉಲ್ಲೇಖೀಸಿರುವ ಬಗ್ಗೆ ಹಾಗೂ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬುದಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ದಾವೆಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೊಡ್ಗಿ ಅವರು, “ಗೃಹಸಚಿವರು ಸಂಶೋಧನ ವರದಿಯನ್ನು ಉಲ್ಲೇಖೀಸಿದ್ದಾರೆ. ಅದು ಸರಿಯಾಗಿಯೇ ಇದೆ. ಕ್ಯಾಂಪ್ಕೊದಿಂದಲೂ ಈ ವಿಚಾರದ ಕುರಿತು ಸಂಶೋಧನೆ ನಡೆಸಲು ನಿಟ್ಟೆ ವಿ.ವಿ.ಯೊಂದಿಗೆ ಒಪ್ಪಂದ ಮಾಡಲಾಗಿದೆ. ಸಂಶೋಧನೆ ನಡೆಯುತ್ತಿದ್ದು ಮೊದಲ ಹಂತದ ವರದಿ ಅಡಿಕೆ ಬೆಳೆಗಾರರಿಗೆ ಪೂರಕವಾಗಿ ಬಂದಿದೆ. ಈ ಸಂಶೋಧನ ವರದಿಗಳು ಸುಪ್ರೀಂ ಕೋರ್ಟ್‌ನಲ್ಲಿರುವ ದಾವೆಗೆ ಸಂಬಂಧಿಸಿ ವಾದಿಸಲು ಪೂರಕವಾಗುತ್ತವೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next