Advertisement
ಶ್ರೀರಾಮನನ್ನು ಭಜಿಸುವ, ಆರಾಧಿಸುವ ಭಕ್ತರೆಲ್ಲರೂ ತನ್ನ ಆಪ್ತರೆಂದು ಪರಿಗಣಿಸುವ ಶ್ರೀಮಾರುತಿ ಸದಾ ಭಕ್ತ ವತ್ಸಲ. ಅಷ್ಟೇ ಅಲ್ಲ, ತನ್ನನ್ನು ನಂಬಿ ಬರುವ, ಸದಾ ಧ್ಯಾನಿಸುವ ಭಕ್ತರ ಸಕಲ ಇಷ್ಟಾರ್ಥಗಳನ್ನು ಆತ ನೆರವೇರಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ನಮ್ಮ ನಾಡಿನಲ್ಲಿ ಸಹಸ್ರಾರು ಮಾರುತಿ ದೇವಾಲಯಗಳಿದ್ದರು ಪ್ರತಿಯೊಂದು ದೇಗುಲದ ಸ್ಥಳ ಮಹಿಮೆ ಭಿನ್ನ, ವಿಶಿಷ್ಟ.
ಈ ದೇವಾಲಯಕ್ಕೆ ಪುರಾಣ ಮತ್ತು ಐತಿಹಾಸಿಕ ಮಹತ್ವವಿದೆ. ರಾಮಾಯಣದಲ್ಲಿ ಸೀತೆಯನ್ನು ಅರಸುತ್ತಾ ಶ್ರೀರಾಮ ಲಕ್ಷ್ಮಣರು ಈ ಮಾರ್ಗವಾಗಿ ಸಂಚರಿಸಿದ್ದರಂತೆ. ಈ ಸ್ಥಳ ಪಶ್ಚಿಮಘಟ್ಟ, ಕರಾವಳಿಯನ್ನು ಕೂಡಿಸುವ ಮಧ್ಯದ ಸ್ಥಳವಾಗಿದೆ. ಘಟ್ಟದ ಮೇಲೂ, ಘಟ್ಟದ ಕೆಳಗೂ ಆಂಜನೇಯನ ದೇಗುಲವಿದ್ದು, ಇವೆರಡರ ಮಧ್ಯದ ಸ್ಥಳವಾದ ಇಲ್ಲಿ ಸಹ ಆಂಜನೇಯನ ಶಕ್ತಿ ಸ್ಥಳವಿದೆ. ಸುಮಾರು 1,400 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಮುನಿಯೋರ್ವರು ತಪಸ್ಸಿಗೆ ಕುಳಿತಿದ್ದರಂತೆ. ಮಣ್ಣಿನಡಿ ಹೂತಿದ್ದ ಆಂಜನೇಯ ಮೂರ್ತಿಯ ದಿವ್ಯದೃಷ್ಟಿಯಿಂದ ಗ್ರಹಿಸಿ, ವಿಗ್ರಹ ತೆಗೆಸಿ, ಚಿಕ್ಕ ಗುಡಿಸಿ ನಿರ್ಮಿಸಿ ಪೂಜಿಸಿದರಂತೆ. 800 ವರ್ಷಗಳ ಹಿಂದೆ, ಇಲ್ಲಿನ ಗುಡಿ ಜೀರ್ಣೋದ್ದಾರಗೊಂಡು ಪುನರ್ ಪ್ರತಿಷ್ಠಾಪನೆಯಾದ ಉಲ್ಲೇಖವಿದೆ. ವಾಯುಪುತ್ರನಾದ ಶ್ರೀಮಾರುತಿ ದೇಗುಲ, ವಾಯುವ್ಯ ದಿಕ್ಕಿಗೆ ಅಭಿಮುಖವಾಗಿರುವುದು ಈ ದೇವಾಲಯದ ವಿಶೇಷವಾಗಿದೆ.
Related Articles
ದೇವಾಲಯದಲ್ಲಿ ನಿತ್ಯ ಮಧ್ಯಾಹ್ನ ಮತ್ತು ಸಂಜೆ ನೈವೇದ್ಯ ಸಹಿತ ಮಂಗಳಾರತಿ, ಪೂಜೆ ನಡೆಸಲಾಗುತ್ತದೆ. ಶನಿವಾರದಂದು ವಿಶೇಷ ಅಲಂಕಾರವಿರುತ್ತದೆ. ಯುಗಾದಿ ಸೇರಿ ಎಲ್ಲ ಹಬ್ಬ ಹರಿದಿನಗಳಂದು ಮಹಾಪೂಜೆ ನಡೆಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ದಶಮಿಯವರೆಗೆ ನಿತ್ಯವೂ ಬಗೆ ಬಗೆಯ ನೈವೇದ್ಯ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಪಾಲ್ಗುಣ ಶುದ್ಧ ಬಿದಿಗೆಯಂದು ದೇವಾಲಯ ಪ್ರತಿಷ್ಠಾಪನೆಯ ನೆನಪಿಗಾಗಿ ವರ್ಧಂತಿ ಉತ್ಸವ ನಡೆಯುತ್ತದೆ. ಚೈತ್ರ ಶುದ್ಧ ಹುಣ್ಣಿಮೆಯ ಹನುಮಜಯಂತಿಯಂದು ಜಾತ್ರೋತ್ಸವ ನಡೆಸಲಾಗುತ್ತದೆ. ಇಷ್ಟಾರ್ಥ ಸಿದ್ಧಿ ಬಗ್ಗೆ ಪ್ರಶ್ನಿಸಿದರೆ, ಇಲ್ಲಿನ ಪ್ರಸಾದ ನೀಡುವುದರ ಮೂಲಕ ದೈವವು ಉತ್ತರ ಹಾಗೂ ಪರಿಹಾರ ಸೂಚಸುತ್ತದೆ ಎಂಬುದು ಭಕ್ತರ ನಂಬಿಕೆ.
Advertisement
ವಿದ್ಯೆ,ಬುದ್ಧಿ ಮನಃಶಾಂತಿಗಾಗಿ ಮಾರುತಿಯನ್ನು ಪ್ರಾರ್ಥಿಸಿ, ಹರಕೆ ಹೊರುತ್ತಾರೆ. ಜಮೀನು ವ್ಯಾಜ್ಯ ಪರಿಹಾರ, ಶತ್ರು ಭಯ ನಿವಾರಣೆ, ದುಃಸ್ವಪ್ನ ನಿವಾರಣೆ, ಮನೋಭಿಷ್ಠ ಸಿದ್ಧಿಗಾಗಿ ಪ್ರಾರ್ಥಿಸಿ ನಿತ್ಯವೂ ನೂರಾರು ಜನ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಸಮರ್ಪಿಸುತ್ತಾರೆ.
ಎನ್.ಡಿ.ಹೆಗಡೆ ಆನಂದಪುರಂ