Advertisement
ಝಯಾನ್ ಆ ಮಾತನ್ನು ಒಪ್ಪಿಕೊಂಡ. “”ನೀನು ಹೇಳುವ ಮಾತು ನಿಜ. ನಾವು ದುಡಿಯಲಾಗದ ದಿನಗಳು ಬಂದಾಗ ನಿಶ್ಚಿಂತೆಯಿಂದ ಜೀವಿಸಬೇಕಾದರೆ ಉಳಿತಾಯ ಬೇಕೇ ಬೇಕಾಗುತ್ತದೆ. ಇದನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿರುವ ಜುಜುಬೆ ಮರದ ಬುಡದಲ್ಲಿ ಹೂಳುತ್ತೇನೆ. ಇಲ್ಲಿ ಇದೊಂದು ಮರ ಬಿಟ್ಟರೆ ಆ ಜಾತಿಯ ಬೇರೆ ಮರಗಳಿಲ್ಲವಾದ ಕಾರಣ ಗುರುತಿಸಲು ಕಷ್ಟವಾಗುವುದಿಲ್ಲ” ಎಂದು ಹೇಳಿದ. ಹಾರೆ, ಗುದ್ದಲಿಗಳೊಂದಿಗೆ ಅಲ್ಲಿಗೆ ಹೋಗಿ ಯಾರಿಗೂ ತಿಳಿಯದಂತೆ ಭದ್ರವಾಗಿ ಮರದ ಬುಡದಲ್ಲಿ ಚಿನ್ನವಿರುವ ಪೆಟ್ಟಿಗೆಯನ್ನು ಹೂಳಿ ಮನೆಗೆ ಮರಳಿದ.
Related Articles
Advertisement
ಈ ವಿಷಯ ಗೊತ್ತಾದಾಗ ಆ ಮನೆಗೆ ಅಳಿಯನಾಗಲಿದ್ದ ರಜಾಕ್ ಅವರಲ್ಲಿಗೆ ಬಂದ. ಆಗ ದುಃಖದಿಂದ ಹಾಸಿಗೆ ಹಿಡಿದಿದ್ದ ಝಯಾನ್ ಚಿಂತೆಯಿಂದ ಕೃಶನಾಗಿರುವುದು ಕಾಣಿಸಿತು. “”ಮದುವೆಯನ್ನು ಯಾಕೆ ನಿಲ್ಲಿಸುತ್ತಿದ್ದೀರಿ? ಹೇಳಿ, ನಿಮಗೆ ಏನೋ ಸಮಸ್ಯೆ ಬಂದಂತಿದೆ. ಅದನ್ನು ನನಗೆ ತಿಳಿಸಿದರೆ ಅದಕ್ಕೊಂದು ಪರಿಹಾರವನ್ನು ಹುಡುಕಲು ನಾನು ಪ್ರಯತ್ನಿಸುತ್ತೇನೆ” ಎಂದು ಝಯಾನ್ ಬಳಿ ಕುಳಿತು ಭರವಸೆ ನೀಡಿದ.
“”ನಮ್ಮ ಸಮಸ್ಯೆ ಹೇಳುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಅದಕ್ಕೆ ಪರಿಹಾರ ಹುಡುಕುವುದು ಕನಸಿನಲ್ಲೂ ಆಗದ ಮಾತು. ಆದಕಾರಣ ನೀನು ಬಂದ ದಾರಿಯಲ್ಲೇ ಹೋಗಿಬಿಡು” ಎಂದು ಝಯಾನ್ ನಿರಾಸಕ್ತಿಯಿಂದ ಹೇಳಿದ. ಆದರೂ ರಜಾಕ್ ಹಿಡಿದ ಹಟ ಬಿಡಲಿಲ್ಲ. ಒತ್ತಾಯಿಸಿ ನಡೆದ ಘಟನೆ ಏನೆಂಬುದನ್ನು ಕೇಳಿ ತಿಳಿದುಕೊಂಡ. ಬಳಿಕ, “”ನೀವು ಚಿನ್ನ ಹೂಳಿಟ್ಟ ಜಾಗದ ಬಳಿ ಯಾರದಾದರೂ ಬಟ್ಟೆಯ ಚೂರನ್ನೋ ಅಥವಾ ಬೇರೆ ಏನಾದರೂ ವಸ್ತುವನ್ನೋ ಬಿಟ್ಟು ಹೋದ ಕುರುಹನ್ನು ನೋಡಿದಿರಾ?” ಎಂದು ಕೇಳಿದ. “”ಇಲ್ಲವಪ್ಪ, ಆ ಮರವಿರುವ ಪ್ರದೇಶ ತಿಳಿದವರೇ ಕಮ್ಮಿ. ಅಲ್ಲಿಗೆ ಹೋಗಿ ಚಿನ್ನವನ್ನು ಅಪಹರಿಸಿರುವವನು ತುಂಬ ಬುದ್ಧಿವಂತನೇ ಇರಬೇಕು. ಅವನು ತನ್ನ ಯಾವುದೇ ಕುರುಹನ್ನು ಉಳಿಸಿಹೋಗಿ ಸಿಕ್ಕಿ ಹಾಕಿಕೊಳ್ಳಲು ಅವಕಾಶ ಕೊಡುವುದಿಲ್ಲ” ಎಂದು ಮುಖ ಮುಚ್ಚಿಕೊಂಡು ಅತ್ತುಬಿಟ್ಟ ಝಯಾನ್.
ಆದರೆ, ರಜಾಕ್ ಭರವಸೆ ಕಳೆದುಕೊಳ್ಳಲಿಲ್ಲ. “”ನೀವು ದುಃಖೀಸಬೇಡಿ, ಧೈರ್ಯ ತಂದುಕೊಳ್ಳಿ. ಹತ್ತು ದಿನಗಳ ಕಾಲ ಕಾದುನೋಡಿ. ಕಳೆದುಕೊಂಡ ಚಿನ್ನವನ್ನು ಮರಳಿ ತಂದುಕೊಡಲು ನಾನು ಮಾಡುವ ಪ್ರಯತ್ನಗಳು ಖಂಡಿತ ಯಶಸ್ಸು ಪಡೆಯುತ್ತವೆ, ನಿಮ್ಮ ನಿಧಿ ನಿಮಗೆ ದೊರೆಯುತ್ತದೆ” ಎಂದು ಹೇಳಿ ಅಲ್ಲಿಂದ ಹೊರಟ. ಚಿನ್ನದ ಬಗೆಗೆ ಏನಾದರೂ ಸುಳುಹು ಸಿಗಬಹುದೇ ಎಂದು ಹಲವು ಕಡೆ ನಿರಂತರವಾಗಿ ಹುಡುಕಿಕೊಂಡು ಹೋದ. ಒಂಬತ್ತು ದಿನಗಳು ಕಳೆದುಹೋದವು. ಎಲ್ಲಿಯೂ ಚಿನ್ನದ ಕುರಿತು ಮಾಹಿತಿ ಸಿಗಲಿಲ್ಲ.
ಹತ್ತನೆಯ ದಿನ ರಜಾಕ್ ಬೀದಿಯಲ್ಲಿ ಹೋಗುತ್ತಿರುವಾಗ ಒಬ್ಬ ಹುಚ್ಚ ಅವನ ಬಳಿ ಬಂದು ಭಿಕ್ಷೆ ನೀಡುವಂತೆ ಕೈ ಚಾಚಿದ. ಅವನ ಕೈಗಳೆರಡೂ ಒಗರು ಹಿಡಿದು ಕೆಂಪಾಗಿದ್ದವು. ರಜಾಕ್ ಅವನಿಗೆ ಒಂದು ದಿನಾರ ಕೊಡುತ್ತ ಕೈಗಳಿಗೆ ಅಂಟಿದ ಬಣ್ಣದ ಬಗೆಗೆ ವಿಚಾರಿಸಿದ. ಹುಚ್ಚನು ತನ್ನದೇ ಭಾಷೆಯಲ್ಲಿ ಒಬ್ಬ ಶ್ರೀಮಂತ ಸಾಹುಕಾರನ ಬಳಿಯಲ್ಲಿ ತಾನು ಜುಜುಬೆ ಮರದ ಬೇರುಗಳನ್ನು ಜಜ್ಜಿ ರಸ ಹಿಂಡಿ ಕೊಟ್ಟಿರುವುದಾಗಿ ಹೇಳಿದ. ಬೇರುಗಳಲ್ಲಿದ್ದ ಒಗರು ಅವನ ಕೈಗಳಿಗೆ ಅಂಟಿ ಕೆಂಪು ಬಣ್ಣ ಬಂದಿತ್ತೆಂಬುದು ರಜಾಕ್ ತಲೆಗೆ ಹೊಳೆಯಿತು.
ರಜಾಕ್ ನಗರದ ಒಬ್ಬ ಪ್ರಸಿದ್ಧ ಹಕೀಮನ ಬಳಿಗೆ ಹೋದ. “”ತಾವು ಯಾರಾದರೂ ರೋಗಿಗಳಿಗೆ ಜುಜುಬೆ ಮರದ ಬೇರಿನಿಂದ ಔಷಧಿ ತಯಾರಿಸಿ ಕುಡಿಯಲು ಹೇಳಿದ್ದೀರಾ?” ಎಂದು ಕೇಳಿದ. ಹಕೀಮನು ನೆನಪು ಮಾಡಿಕೊಳ್ಳುತ್ತ, “”ಹೌದು, ನಗರದಲ್ಲಿ ನ್ಯಾಮಾಂಡರ್ ಎಂಬ ವ್ಯಾಪಾರಿಯಿದ್ದಾನೆ. ಅವನಿಗೆ ತೀವ್ರವಾದ ಅಸ್ತಮಾ ಬಾಧೆಯಿದೆ. ಇದಕ್ಕೆ ಜುಜುಬೆ ಮರದ ಬೇರುಗಳನ್ನು ಜಜ್ಜಿ ರಸ ಹಿಂಡಿ ಕುಡಿದರೆ ರೋಗ ಶಮನವಾಗುವುದಾಗಿ ಹೇಳಿದ್ದೇನೆ. ಆದರೆ, ಈ ಪರಿಸರದಲ್ಲಿ ಎಲ್ಲೋ ಒಂದು ಕಡೆ ಮಾತ್ರ ಅದರ ಮರವಿರುವುದಾಗಿ ಅವನು ಹೇಳಿದ್ದ” ಎಂದು ತಿಳಿಸಿದ.
ರಜಾಕ್ ವ್ಯಾಪಾರಿಯನ್ನು ಕಾಣಲು ಅವನ ಮನೆಗೆ ತೆರಳಿದ. “”ನೀವು ಒಬ್ಬ ದಯಾಳುವೆಂದು ತಿಳಿದು ಬಂದಿದ್ದೇನೆ. ಒಬ್ಬ ಬಡವನು ತನ್ನ ಮಗಳ ಮದುವೆಗಾಗಿ ಚಿನ್ನದ ಗಟ್ಟಿಗಳನ್ನು ಒಂದು ಪೆಟ್ಟಿಗೆಯಲ್ಲಿ ತುಂಬಿಸಿ ಮರದ ಕೆಳಗೆ ಹೂಳಿದ್ದ. ಆ ಪೆಟ್ಟಿಗೆಯನ್ನು ಯಾರೋ ಅಪಹರಿಸಿದ್ದಾರೆ. ಅವನ ಒಬ್ಬಳೇ ಮಗಳಿಗೆ ನಿಶ್ಚಯವಾಗಿದ್ದ ಮದುವೆ ನಿಲ್ಲುವಂತಾಗಿದೆ. ಮದುವೆ ನಡೆಯಲು ನಿಮ್ಮ ಸಹಾಯ ಬೇಕಾಗಿದೆ” ಎಂದು ಹೇಳಿದ.
ವ್ಯಾಪಾರಿಯು, “”ನನಗೆ ಔಷಧಕ್ಕಾಗಿ ಒಂದು ಜುಜುಬೆ ಮರದ ಬೇರುಗಳನ್ನು ತರಲು ನಾನೇ ಹೋಗಿದ್ದೆ. ಆಗ ಮರದ ಬುಡದಲ್ಲಿ ಒಂದು ಪೆಟ್ಟಿಗೆ ತುಂಬ ಚಿನ್ನದ ಗಟ್ಟಿಗಳು ಸಿಕ್ಕಿವೆ. ಮನೆಗೆ ತಂದು ಹಾಗೆಯೇ ಇಟ್ಟಿದ್ದೇನೆ. ಇದನ್ನು ನಿನ್ನಲ್ಲಿ ಕೊಟ್ಟುಬಿಡುತ್ತೇನೆ. ಅವರಿಗೆ ತಲುಪಿಸಿಬಿಡು. ನನಗಂತೂ ಅದರ ಮೇಲೆ ವ್ಯಾಮೋಹವಿಲ್ಲ” ಎಂದು ಹೇಳಿದ. ಪೆಟ್ಟಿಗೆಯೊಂದಿಗೆ ರಜಾಕ್ ಬಂದಾಗ ಝಯಾನ್‌ಗೆ ಹೋದ ಜೀವ ಮರಳಿದಂತಾಯಿತು. ಮಗಳ ಮದುವೆಯನ್ನು ನಡೆಸಿ ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ