Advertisement
ಹೌದು, ಈ ಭೂಮಿ, 3ನೇ ಭಾಗದಷ್ಟು ನೀರಿನಿಂದ ಆವೃತ್ತಿಯಾಗಿದ್ದರೂ ಪ್ರತಿ ಮೂವರು ವ್ಯಕ್ತಿಗಳಲ್ಲಿ ಓರ್ವ ವ್ಯಕ್ತಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾನೆ ಎಂಬುದು ಸಂಶೋಧಕರ ವರದಿ.
Related Articles
Advertisement
ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಮತ್ತು ಜಿಪಂ. ವ್ಯಾಪ್ತಿಯ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸಿದರೆ, ಜಿಲ್ಲೆಯ ಅಂತರ್‌ಜಲ ಹೆಚ್ಚಳದ ಜತೆಗೆ ಭವಿಷ್ಯದ ನೀರಿನ ಸಮಸ್ಯೆ ನೀಗಲಿದೆ. ಈ ನಿಟ್ಟಿನಲ್ಲಿ ಕೆರೆಗಳಿಗೆ ನೀರು ತುಂಬುವ ಯೋಜನೆಗಳು ಸಾಕಾರಗೊಳ್ಳಲಿ ಎಂಬ ಒತ್ತಾಯ ಕೇಳಿ ಬಂದಿದೆ.
ಹಲವು ಕೆರೆಗಳಿಗೆ ನೀರು: ಕಳೆದ 2015-16ನೇ ಸಾಲಿನಲ್ಲಿ ಬಾಗಲಕೋಟೆ ನವನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಮುಚಖಂಡಿ ಕೆರೆಯನ್ನು 12 ಕೋಟಿ ವೆಚ್ಚದಲ್ಲಿ ತುಂಬಿಸುವ ಯೋಜನೆ ಕೈಗೊಂಡಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಕಾರಣ, ಈ ಕೆರೆ ಸುಮಾರು 721 ಕೆರೆ ವಿಸ್ತಾರವಿದ್ದು, 250 ಎಂಎಂ ವ್ಯಾಸದ ಎರಡು ಪೈಪ್ ಅಳವಡಿಸಿ, ನೀರು ತುಂಬಿಸಲಾಗುತ್ತಿದೆ. ಇದಕ್ಕೆ ಕನಿಷ್ಠ 1 ಸಾವಿರ ಎಂಎಂ ವ್ಯಾಸದ ದೊಡ್ಡ ದೊಡ್ಡ ಪೈಪ್‌ಲೈನ್ ಅಳವಡಿಸಿ ನೀರು ತುಂಬಿಸಬೇಕೆಂಬ ಒತ್ತಾಯ ಕೇಳಿ ಬಂದಿದ್ದು, ಆ ನಿಟ್ಟಿನಲ್ಲಿ 80 ಕೋಟಿ ವೆಚ್ಚದ ಹೊಸ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಕ್ಕೆ ಅನುಮೋದನೆ ದೊರೆಯಬೇಕಿದೆ.
ಅಲ್ಲದೇ ಶಿರೂರ ಜೋಡಿ ಕೆರೆಗಳು ತುಂಬಿಸಲಾಗುತ್ತಿದೆ. ಬಾದಾಮಿ ತಾಲೂಕಿನ ಕೆಂದೂರ ಕೆರೆ ತುಂಬಿಸುವ ಯೋಜನೆಯೂ ಪೂರ್ಣಗೊಂಡಿದ್ದು, ಅದು ಉದ್ಘಾಟನೆಗೆ ಬಾಕಿ ಇದೆ.
ಬಾದಾಮಿ ಕ್ಷೇತ್ರದ ಕೆರೆಗಳಿಗೆ ನೀರು: ಬಾದಾಮಿ ತಾಲೂಕಿನ ಪರ್ವತಿ, ಹಿರೇಕೆರೆ, ಗಂಜಿಕೆರೆ ಸಹಿತ ಒಟ್ಟು ಮೂರು ಕೆರೆಗಳಿಗೆ ಆಸಂಗಿ ಹತ್ತಿರದ ಮಲಪ್ರಭಾ ನದಿಯಿಂದ ನೀರು ತುಂಬಿಸಲು 12 ಕೋಟಿ ಮೊತ್ತದ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಕೆಂದೂರ ಕೆರೆಯನ್ನು 5 ಕೋಟಿ ವೆಚ್ಚದಲ್ಲಿ ತುಂಬಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಇದರ ಜತೆಗೆ ಬಾಗಲಕೋಟೆ ಹತ್ತಿರದ ಮಹಾರುದ್ರಪ್ಪನ ಹಳ್ಳದ ಬಳಿಯ ಹಿನ್ನೀರು ಬಳಸಿಕೊಂಡು ಕೆಲವಡಿ, ಲಿಂಗಾಪುರ, ತಿಮ್ಮಸಾಗರ, ತೆಗ್ಗಿ, ಹಂಸನೂರ, ಹಿರೇಬೂದಿಹಾಳ, ತೋಗುಣಸಿ ಹಾಗೂ ಕೋಟಿಕಲ್ ಸಹಿತ ಒಟ್ಟು 10 ಕೆರೆಗಳಿಗೆ ನೀರು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ 83 ಕೋಟಿ ಮೊತ್ತದ ಹೊಸ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದು ಅನುಮೋದನೆಯ ಹಂತದಲ್ಲಿದೆ. ಈ ಯೋಜನೆ ಮಂಜೂರಾತಿ ದೊರೆತು ಅನುಷ್ಠಾನಗೊಂಡಲ್ಲಿ, ಗುಳೇದಗುಡ್ಡ ಭಾಗದ ಹಲವು ಕೆರೆಗಳು ನೀರಿನಿಂದ ಕಂಗೊಳಿಸಲಿವೆ.
ಅರ್ಧಕ್ಕೆ ನಿಂತ ಕಾಮಗಾರಿಗಳು: ಬಾಗಲಕೋಟೆ ತಾಲೂಕಿನ ಅಚನೂರ (2.40 ಕೋಟಿ), ಹಿರೇಮಾಗಿ (4 ಕೋಟಿ) ಹಾಗೂ ಹುನಗುಂದ ತಾಲೂಕಿನ ತಿಮ್ಮಾಪುರ (5 ಕೋಟಿ) ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿದ್ದು, ಹಲವು ಕಾರಣಗಳಿಂದ ಅರ್ಧಕ್ಕೆ ನಿಂತಿವೆ. ಅಚನೂರ ಕೆರೆಗೆ ನೀರು ತುಂಬಿಸುವ ಪೈಪ್‌ಲೈನ್ ಅಳವಡಿಸುವ ಮಾರ್ಗದಲ್ಲಿ ರೈಲ್ವೆ ಹಳಿ ಹಾದು ಹೋಗಿದ್ದು, ಇಲ್ಲಿ ಹಳಿಗಳ ಕ್ರಾಸ್ ಮಾಡಲು ರೈಲ್ವೆ ಇಲಾಖೆಯ ಅನುಮತಿ ಬೇಕಿದೆ. ಹೀಗಾಗಿ ಈ ಯೋಜನೆ ತಡವಾಗುತ್ತಿದೆ.
ಅಲ್ಲದೇ ಹಿರೇಮಾಗಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಭೂಮಿ ವ್ಯಾಜ್ಯ ಎದುರಾಗಿದ್ದು, ಇದನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ನಡೆಯಬೇಕಿದೆ. ಒಟ್ಟಾರೆ, ಜಿಲ್ಲೆಯ 236 ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ನಡೆದರೆ, ಜೀವಜಲದ ನೆಲೆಗಳು ಸಮೃದ್ಧಗೊಳ್ಳಲಿವೆ. ಇದರಿಂದ ರೈತರ ಬದುಕು, ಕುಡಿಯುವ ನೀರಿನ ಬವಣೆ ಎಲ್ಲವೂ ಪರಿಹಾರವಾಗಲಿದೆ ಎಂಬುದು ಹಲವರ ಆಶಯ.
ಸಣ್ಣ ನೀರಾವರಿ ಇಲಾಖೆಯಡಿ ಎರಡು ಉಪ ವಿಭಾಗ ಬರುತ್ತಿದ್ದು, ಬಾಗಲಕೋಟೆ ಉಪ ವಿಭಾಗದಡಿ ಮುಚಖಂಡಿ, ಕೆರಕಲಮಟ್ಟಿ, ಕೆಂದೂರ, ಶಿರೂರ ಸಹಿತ ಹಲವು ಕೆರೆ ತುಂಬಿಸಲಾಗುತ್ತಿದೆ. ಅಚನೂರ, ತಿಮ್ಮಾಪುರ ಹಾಗೂ ಹಿರೇಮಾಗಿ ಕೆರೆ ತುಂಬುವ ಕಾಮಗಾರಿ ವಿವಿಧ ಕಾರಣಗಳಿಂದ ಪೂರ್ಣಗೊಂಡಿಲ್ಲ.
-ಶ್ರೀನಿವಾಸ ದೇಸಾಯಿ, ವ್ಯವಸ್ಥಾಪಕ, ಸಣ್ಣ ನೀರಾವರಿ ಇಲಾಖೆ
ಬಾದಾಮಿ ಕ್ಷೇತ್ರದಡಿ ಬರುವ ಪರ್ವತಿ ಸಹಿತ ಮೂರು ಕೆರೆ ತುಂಬಿಸಲು 12 ಕೋಟಿ, ಕೆಂದೂರ ಕೆರೆಗೆ 5 ಕೋಟಿ ಅನುದಾನದಡಿ ಕೆರೆ ತುಂಬಿಸುವ ಯೋಜನೆ ಕೈಗೊಳ್ಳಲಾಗಿದೆ. ಹೊಸದಾಗಿ 10 ಕೆರೆ ತುಂಬಿಸಲು 83 ಕೋಟಿ ಮೊತ್ತದ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಹೊಳಬಸು ಶೆಟ್ಟರ, ಕಾಂಗ್ರೆಸ್ ಮುಖಂಡ
ಶ್ರೀಶೈಲ ಕೆ. ಬಿರಾದಾರ