ಹುಬ್ಬಳ್ಳಿ: ಏಪ್ರಿಲ್ 1ನ್ನು ಕೂಲ್ ದಿನವಾಗಿ ಆಚರಿಸುತ್ತಿರುವ ಬದುಕು ಫೌಂಡೇಶನ್ ನಿಂದ ಉಣಕಲ್ಲನ ಮಂದಮತಿ ಮಹಿಳೆಯರ ಅನುಪಾಲನಾ ಗೃಹದಲ್ಲಿ ಶುಕ್ರವಾರ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಹಿನ್ನೆಲೆಯಲ್ಲಿ ಏಪ್ರಿಲ್ ಕೂಲ್‌ನಂತಹ ಕಾರ್ಯಕ್ರಮ ಎಲ್ಲ ಕಡೆ ಕೈಗೊಳ್ಳುವುದು ಅತ್ಯವಶ್ಯವಾಗಿದೆ. ಉತ್ತಮ ಪರಿಸರ ಇದ್ದಾಗ ಒಳ್ಳೆಯ ವಾತಾವರಣ ಸಾಧ್ಯವಾಗಲಿದೆ. ರೈತರ ಬದುಕಿಗೆ ಪರಿಸರ ಪೂರಕವಾಗಿದೆ. ಪೂರ್ವಜರ ಚಿಂತನೆಗಳ ಅಳವಡಿಕೆ ಅಗತ್ಯವಾಗಿದೆ ಎಂದರು.
ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ಡಾ| ಬಂಡು ಕುಲಕರ್ಣಿ ಮಾತನಾಡಿ, ಡಾ| ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ದಿನವಾದ ಇಂದು ಬದುಕು ಫೌಂಡೇಶನ್ ಅತ್ಯುತ್ತಮ ಕಾರ್ಯ ಹಮ್ಮಿಕೊಂಡಿದೆ. ಮಂದಮತಿ ಮಹಿಳೆಯರ ಈ ತಾಣ ಅತ್ಯಂತ ಪವಿತ್ರವಾದದ್ದು ಎಂದು ಹೇಳಿದರು.
ಬ್ರಿಕ್‌ಲಿಂಕ್ಸ್ ಸಿಇಒ ಅಭಿಷೇಕ ಪಾಟೀಲ ಮಾತನಾಡಿ, ಹಿಂದೂ ಪರಂಪರೆಯಂತೆ ಯುಗಾದಿ ವರ್ಷದ ಆರಂಭವಾಗಿದೆ. ಯುರೋಪಿಯನ್ ಕ್ಯಾಲೆಂಡರ್ ತಿಂಗಳುಗಳ ಬದಲು ನಮ್ಮ ಮಾಸಗಳ ಅನುಸರಣೆ ಅವಶ್ಯವಾಗಿದೆ. ಮಂದಮತಿ ಮಹಿಳೆಯರ ಸೇವಾ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದರು.
ಅನುಪಾಲನಾ ಗೃಹ ಅಧೀಕ್ಷಕಿ ಸುಜಾತಾ ಚನ್ನಪ್ಪಗೌಡ, ಮಾಜಿ ಸೈನಿಕ ಎಸ್.ಜಿ. ಬಟಕುರ್ಕಿ ಮಾತನಾಡಿದರು. ಮಾಜಿ ಸೈನಿಕ ಮಹಾಂತೇಶಗೌಡ ಶೆಟ್ಟಪ್ಪಗೌಡ್ರ, ಸೌಮ್ಯಾ ಕುಂಬಾರ, ಎಚ್. ಎಸ್.ಕಿರಣ, ರಮೇಶ ಕಾಂಬಳೆ ಇದ್ದರು.
ರಮೇಶ ಮಹಾದೇವಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಫೌಂಡೇಶನ್ ಅಧ್ಯಕ್ಷ ನಂದೀಶ ವಡ್ಡಟ್ಟಿ ಸ್ವಾಗತಿಸಿದರು. ಶೋಭಾ ಹೊನ್ನಳ್ಳಿ ನಿರೂಪಿಸಿದರು. ಮಲ್ಲಪ್ಪ ತಡಸದ ವಂದಿಸಿದರು.