Advertisement
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
Related Articles
Advertisement
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ನಿರ್ಧರಿಸಿದ್ದು, ಇದಕ್ಕಾಗಿಯೇ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರನ್ನು ಕಣಕ್ಕಿಳಿಸಲಿದೆ. ಆದರೂ ಮಹದೇವ ಪ್ರಸಾದ್ ಅವರ ವಿರುದ್ಧ 2008ರಲ್ಲಿ 2203 ಮತ ಮತ್ತು 2013ರಲ್ಲಿ ಕಾಂಗ್ರೆಸ್ ಅಲೆ ಮಧ್ಯೆಯೂ 7657 ಮತಗಳ ಅಂತರದಿಂದ ಸೋತಿದ್ದ ನಿರಂಜನ್ ಕುಮಾರ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದೆ.
ಪ್ರತಿಷ್ಠೆಯಾಗಿದೆ ನಂಜನಗೂಡುನಂಜನಗೂಡು ಕ್ಷೇತ್ರದ ಉಪ ಚುನಾವಣೆಯನ್ನು ಕಾಂಗ್ರೆಸ್, ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಇದೆ. 2013ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಶ್ರೀನಿವಾಸ ಪ್ರಸಾದ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವುದು ಇದಕ್ಕೆ ಕಾರಣ. ಈ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂದು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಪರ ಇಡೀ ಸಚಿವ ಸಂಪುಟವನ್ನೇ ಪ್ರಚಾರಕ್ಕೆ ಇಳಿಸುವುದಾಗಿ ಹೇಳಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶ್ರೀನಿವಾಸ ಪ್ರಸಾದ್, ಸಚಿವ ಸಂಪುಟ ಮಾತ್ರವಲ್ಲ, ಇಡೀ ಎಐಸಿಸಿಯನ್ನೇ ಕರೆಯಿರಿ, ಅವರ ವಿರುದ್ಧ ಗೆದ್ದು ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ಗುಂಡ್ಲುಪೇಟೆಗಿಂತ ನಂಜನಗೂಡು ಕ್ಷೇತ್ರದ ಬಗ್ಗೆಯೇ ಒಲವು ತೋರಿಸುತ್ತಿದ್ದು, ಶ್ರೀನಿವಾಸ ಪ್ರಸಾದ್ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ ನಂಜನಗೂಡು ಕ್ಷೇತ್ರ ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಜೆಡಿಎಸ್ ನಿಲುವು ನಿಗೂಢ
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಹದೇವಪ್ರಸಾದ್ ಮತ್ತು ಅವರ ಕುಟುಂಬದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದರಿಂದ ಅಲ್ಲಿ ಸ್ಪರ್ಧೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಜೆಡಿಎಸ್‌ನಲ್ಲಿ ಚರ್ಚೆ ನಡೆಯುತ್ತಿದೆ. ನಂಜನಗೂಡು ಕ್ಷೇತ್ರದಲ್ಲಿ ಕಳೆದ ಬಾರಿ ಶ್ರೀನಿವಾಸ ಪ್ರಸಾದ್ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದ ಕಳಲೆ ಎನ್.ಕೇಶವಮೂರ್ತಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಹಾಗೂ ಅಲ್ಲಿ ಯಾರೇ ಗೆದ್ದರೂ ಅವಧಿ ಒಂದು ವರ್ಷವೂ ಇಲ್ಲದಿರುವುದರಿಂದ ಹೊಸ ಅಭ್ಯರ್ಥಿಯನ್ನು ಹುಡುಕಿ ಕಣಕ್ಕಿಳಿಸುವ ಸಾಹಸ ಮಾಡುವುದು ಬೇಡ ಎಂಬ ಅಭಿಪ್ರಾಯ ಪಕ್ಷದಲ್ಲಿದೆ. ಆದರೆ, ಸ್ಥಳೀಯ ಕಾರ್ಯಕರ್ತರು ಸ್ಪರ್ಧೆಗೆ ಒಲವು ತೋರಿದ್ದಾರೆ. ಹೀಗಾಗಿ, ಕಾರ್ಯಕರ್ತರಿಂದ ಒತ್ತಡ ಹೆಚ್ಚಾದರೆ ಕೊನೇ ಕ್ಷಣದಲ್ಲಿ ಎರಡೂ ಕಡೆ ಅಭ್ಯರ್ಥಿ ಕಣಕ್ಕಿಳಿಸಬಹುದು. ಒಟ್ಟಾರೆ, ಉಪ ಚುನಾವಣೆ ವಿಚಾರದಲ್ಲಿ ಜೆಡಿಎಸ್ ನಡೆ ಇನ್ನೂ ನಿಗೂಢವಾಗಿದೆ. ನೀತಿ ಸಂಹಿತೆ ಜಾರಿ
*ಮಾ. 14ರ ಮಂಗಳವಾರ ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಮಾ. 21 ನಾಮಪತ್ರ ಸಲ್ಲಿಸಲು ಕಡೆಯ ದಿನ. ಮಾ. 22ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ. 24 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ. ಏ. 9ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಏ. 13ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ನಡೆಯುವ ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.
* ಮಾ. 14- ನಾಮಪತ್ರ ಸಲ್ಲಿಕೆ ಆರಂಭ
* ಮಾ. 21- ನಾಮಪತ್ರ ಸಲ್ಲಿಸಲು ಕಡೇ ದಿನ
* ಮಾ. 24- ನಾಮಪತ್ರ ವಾಪಸ್‌ಗೆ ಕಡೇ ದಿನ
* ಏ. 13- ಫಲಿತಾಶ ಪ್ರಕಟ