ಕೊಪ್ಪಳ: ಪುನೀತ್ ರಾಜಕುಮಾರ ದೊಡ್ಡ ನಟರಾಗಿದ್ದರೂ ಯಾವ ಹಮ್ಮಿಲ್ಲದೇ ಪ್ರತಿಭೆಗಳಿಗೆ ಅವಕಾಶ ನೀಡುತ್ತ, ಬಡಜನರಿಗೆ ಸಹಾಯಹಸ್ತ ಚಾಚುತ್ತಾ ಮೇರುತನ ಮೆರೆದ ಕರ್ನಾಟಕ ರತ್ನ ಎಂದು ಭಾಗ್ಯ ನಗರದ ಶ್ರೀ ಶಂಕರಾಚಾರ್ಯಮಠದ ಶ್ರೀ ರಾಮಕೃಷ್ಣ ಗುರುಗಳು ಪ್ರಶಂಸಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಕಪ್-2022 ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುನೀತ್ ಅವರ ಸಾಮಾಜಿಕ ಕಾರ್ಯಗಳು ಎಲ್ಲರಿಗೂ ಪ್ರೇರಣೆ. ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಕೇವಲ ಆಟೋಟಗಳಿಗೆ ಸೀಮಿತವಾಗದೇ ಸಾಮಾಜಿಕ ಸೇವೆಯಲ್ಲೂ ಮುಂದಿದೆ. ಹಾಗೆಯೇ ಸಮಾಜ ಸೇವಾನಿರತ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಿ, ಗೌರವಿಸುತ್ತದೆ ಎಂಬುದಕ್ಕೆ ಅನು ಅಕ್ಕ ಬಳಗ ಹಾಗೂ ಕಲರವ ತಂಡವೇ ಸಾಕ್ಷಿ ಎಂದರು.
ಅನು ಅಕ್ಕ ಮತ್ತು ಸಂಗಡಿಗರು ಈ ಚಿಕ್ಕ ವಯಸ್ಸಿನಲ್ಲಿ ಸರಕಾರಿ ಶಾಲಾಭಿವೃದ್ಧಿ, ಕನ್ನಡ ಉಳಿಸಿ-ಬೆಳೆಸುವ ಕಾರ್ಯ ಹಮ್ಮಿಕೊಂಡಿರುವುದು ಪ್ರೇರಣಾತ್ಮಕ ಸಂಗತಿ. ಕೊಪ್ಪಳದ ಶಿಕ್ಷಕರ ಕಲರವ ತಂಡದ ಸದಸ್ಯರು ತಿಂಗಳಿಗೊಮ್ಮೆ ತಮ್ಮ ಸಂಬಳದ ಕೊಂಚ ಹಣ ಮೀಸಲಿಟ್ಟು, ಸರಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಹಚ್ಚುವ ಮೂಲಕ ಅಂದಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಭಾಗ್ಯನಗರ ಪಪಂ ಇಒ ಚಂದ್ರಶೇಖರಯ್ಯ, ನಿವೃತ್ತ ಇಒ ಬಾಬು, ಅನು, ರಾಜಣ್ಣ ನಾಯಕ್, ಕಾಶೀನಾಥ ಸಿರಿಗೇರಿ, ಕಂದಾಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿ ಮತ್ತಿತರರು ಮಾತನಾಡಿದರು.
ಬೀರಪ್ಪ ಅಂಡಗಿ, ಹನುಮಂತಪ್ಪ ಕುರಿ, ಎಸ್.ಎಸ್. ಗ್ರೂಪ್‌ನ ಶಂಕರ ಲಿಂಗನಬಂಡಿ, ರಾಮಣ್ಣ ಕಲ್ಲಣ್ಣವರ್, ಪ್ರಜ್ವಲ್, ಡಾ| ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಮಧು ಪ್ರಾರ್ಥಿಸಿದರು. ಮಾರುತಿ ಮ್ಯಾಗಳಮನಿ ಸ್ವಾಗತಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಬಸವರಾಜ ಕರುಗಲ್ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಗೋಂಧಳಿ ಅಧ್ಯಕ್ಷತೆ ವಹಿಸಿದ್ದರು. ಈರಣ್ಣ ವಂದಿಸಿದರು.
ಪುನೀತ್ ಚಿತ್ರಕ್ಕೆ ಪುಷ್ಪ ಮಳೆ: ಪುನೀತ್ ಚಿತ್ರಕ್ಕೆ ಗಣ್ಯರು ಪುಷ್ಪಮಳೆ ಸುರಿಸಿ ಕ್ರಿಕೆಟ್, ಚೆಸ್ ಹಾಗೂ ಕೇರಂ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಸಮಾರಂಭದಲ್ಲಿ ಅಪ್ಪು ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ನ ದಂತ ಕಥೆ ಶೇನ್ ವಾರ್ನ್ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.