ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಪ್ರಥಮ ಆದ್ಯತೆ ನೀಡಿದ್ದು, ದುಡಿದವರಿಗೆ ಸೂಕ್ತ ಮನ್ನಣೆ ನೀಡುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೆಗಾಳ್ ರಾಮಣ್ಣ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರ ನಾಲ್ಕು ವರ್ಷಗಳಲ್ಲಿ ಎಸ್‌ಸಿಪಿ ಟಿಎಸ್‌ಪಿ ಅನುದಾನದಡಿ 27 ಸಾವಿರ ಕೋಟಿ ರೂ. ನೀಡಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ ಎಂದರು. ಅನ್ನಭಾಗ್ಯ ಯೋಜನೆಯ ಮೂಲಕ ಹಸಿವು ಮುಕ್ತ ಕರ್ನಾಟಕವಾಗಿಸಿದೆ. ಇಂದಿರಾ ಕ್ಯಾಂಟಿನ್‌ಗಳು ಪಟ್ಟಣ, ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಜನರ ಹಸಿವನ್ನು ನೀಗಿಸುವ ಕೇಂದ್ರಗಳಾಗಿವೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ, ವಸತಿ ಸಹಾಯಕ್ಕಾಗಿ ವಿದ್ಯಾಸಿರಿ ಯೋಜನೆಯನ್ನ ಜಾರಿಗೊಳಿಸಿದೆ. ಶಾದಿ ಭಾಗ್ಯ ಯೋಜನೆಗೆ 245ಕೋಟಿ ನೆರವು ನೀಡಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮಿತಿಯ ರಾಜ್ಯ ಸಂಚಾಲಕ ಸಿ. ಬಸವರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತ್ತು. ಅದರಂತೆ ಇದರಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ರಾಜ್ಯ ಸರ್ಕಾರ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ 125 ಹೊಸ ವಸತಿ ಶಾಲೆಗಳನ್ನು ಮಂಜೂರು ಮಾಡಿದೆ ಎಂದರು.
ಪರಿಶಿಷ್ಟ ಜಾತಿ-ಪಂಗಡಗಳಿಗೆ 19.540 ಕೋಟಿ ರೂ. ಅನುದಾನ ನೀಡಿದೆ. ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿಯನ್ನು ಮಾಡಿದೆ. ವಿಶೇಷ ಅಭಿವೃದ್ಧಿಯಲ್ಲಿ 3ಸಾವಿರ ಕೋಟಿ ರೂ. ಅನುದಾನ ಒದಗಿಸಿದೆ. ನರೇಂದ್ರ ಮೋದಿಯವರ ಕೇಂದ್ರ ಸರಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸದೆ ಜಿಎಸ್‌ಟಿ ಜಾರಿಗೊಳಿಸಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ನೋಟ್‌ಬ್ಯಾನ್ ಮಾಡುವ ಮೂಲಕ ದೇಶದ ಸಾಕಷ್ಟು ಜನರ ಜೀವ ಕಳೆದುಕೊಳ್ಳುವಂತೆ ಮಾಡಿದೆ ಕೇಂದ್ರ ಸರ್ಕಾರ. ಈ ಹಿಂದೆ ಯುಪಿಎ ಸರ್ಕಾರ ಮಾಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಎಲ್. ಮಾರೆಣ್ಣ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿ 5 ಕೋಟಿ ಜನರಿಗೆ ನೆರವಾಗಿದೆ. ಮತದಾರರು ಮತ್ತೂಮ್ಮೆ ಕಾಂಗ್ರೆಸ್‌ಗೆ ಬೆಂಬಲಿಸಿ ಸಾಮರಸ್ಯದ ಕರ್ನಾಟಕ ಕಟ್ಟಲು ಕೈಜೋಡಿಸಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಕೊಟ್ರೇಶ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಜಮಲ್‌ಸಾಬ್, ರಾಟಿ ಚಮನ್‌ಸಾಬ್, ಹರಿಜನ ಸುಭಾಸ್, ಅಬ್ದುಲ್ ಸಾಬ್, ಶಿಗೇನಹಳ್ಳಿ ವೀರನಗೌಡ, ಚಲವಾದಿ ಕೊಟ್ರೇಶ, ಗಪೂರ್‌ಸಾಬ್, ಜಾಕಿ ಶಾಹೀರ್, ಮೈಲಪ್ಪ, ದೊಡ್ಡಬಸಪ್ಪ, ರಮೇಶ ಪೂಜಾರಿ, ಎಚ್. ಮರಿಯಪ್ಪ, ತೋಟಪ್ಪ ಇತರರು ಇದ್ದರು.