Advertisement

ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಅಂಗೀಕಾರ

06:54 AM Dec 09, 2020 | mahesh |

ಬೆಂಗಳೂರು: ರಾಜ್ಯ ಸರಕಾರದ ಬಹುನಿರೀಕ್ಷಿತ ಭೂ ಸುಧಾರಣೆ (ತಿದ್ದುಪಡಿ) ಮಸೂದೆ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಅಂಗೀಕಾರಗೊಂಡಿದೆ. ವಿಶೇಷವೆಂದರೆ ಒಂದೆಡೆ ರೈತರ ಪ್ರತಿಭಟನೆ, ಬಂದ್‌ಗೆ ಬೆಂಬಲ ನೀಡಿದ್ದ ಜೆಡಿಎಸ್‌ ಮೇಲ್ಮನೆಯಲ್ಲಿ ಮಸೂದೆ ಪರ ಮತ ಚಲಾಯಿಸಿತು!

Advertisement

ತಿದ್ದುಪಡಿ ಮಸೂದೆ ಸಂಬಂಧ ಚರ್ಚೆ ನಡೆದ ಬಳಿಕ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಧ್ವನಿಮತಕ್ಕೆ ಹಾಕಿದರು. ಈ ಸಂದರ್ಭ ದಲ್ಲಿ ಸದನದ ಒಳಗಿದ್ದ 58 ಸದಸ್ಯರಲ್ಲಿ 37 ಮಂದಿ ತಿದ್ದುಪಡಿ ಮಸೂದೆಯ ಪರ ಮತ್ತು 21 ಸದಸ್ಯರು ವಿರುದ್ಧ ಮತ ಹಾಕಿದರು. ವಿಶೇಷವೆಂದರೆ ಜೆಡಿಎಸ್‌ ಸದಸ್ಯರು ಮಸೂದೆಗೆ ಬೆಂಬಲ ಸೂಚಿಸಿದರು. ಆದರೆ ಜೆಡಿಎಸ್‌ ಹಿರಿಯ ಸದಸ್ಯ ಮರಿತಿಬ್ಬೇಗೌಡ ಅವರು ಮಾತ್ರ ಮಸೂದೆಯ ವಿರುದ್ಧ ಮತ ಹಾಕಿ ಪ್ರತಿರೋಧ ವ್ಯಕ್ತಪಡಿಸಿದರು.

ಇದರೊಂದಿಗೆ ಮಹತ್ವಾಕಾಂಕ್ಷಿ ಭೂ ಸುಧಾರಣೆ ಮಸೂದೆಯನ್ನು ಜಾರಿಗೊಳಿಸಲು ಸರಕಾರದ ಹಾದಿ ಸುಗಮವಾಗಿದೆ. ಕೃಷಿ ಆಧಾರಿತ ಕೈಗಾರಿಕೆಗೆ ಒತ್ತು ತಿದ್ದುಪಡಿ ಮಸೂದೆ ಸಂಬಂಧ ಸದನಕ್ಕೆ ಉತ್ತರ ನೀಡಿದ ಕಂದಾಯ ಸಚಿವ ಆರ್‌. ಅಶೋಕ್‌, ಈ ಮಸೂದೆ ಯಿಂದ ರೈತರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಯಾಗುವುದಿಲ್ಲ. ಕೃಷಿ ಆಧಾರಿತ ಕೈಗಾರಿಕೆಗೆ ಉತ್ತೇಜನ ನೀಡಲಿದ್ದೇವೆ. ಯುವ ಸಮುದಾಯವನ್ನು ಕೃಷಿಯತ್ತ ಸೆಳೆಯಲು ಇದರಲ್ಲಿ ಸಾಕಷ್ಟು ಕ್ರಮಗಳಿವೆ. ಕೃಷಿಯಲ್ಲಿ ಆಸಕ್ತಿಯಿರುವ ಯುವ ಸಮೂಹವನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಕಾರ್ಯಕ್ಕೆ ಸರಕಾರ ಮುಂದಾಗಿದೆ ಎಂದರು.

ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಮಾತನಾಡಿ, 86 ಸಾವಿರ ಎಕರೆ ಭೂಮಿ ಮಾತ್ರ ಕೆಐಎಡಿಬಿಯಿಂದ ಸ್ವಾಧೀನ ಮಾಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ 1.56 ಲಕ್ಷ ಸಾವಿರ ಎಕರೆ ಭೂಮಿ ಸ್ವಾಧೀನವಾಗಿದೆ. ಮಾರಾಟ ಮಿತಿ ಇರುವುದರಿಂದ ಯಾವುದೇ ರೀತಿಯಲ್ಲೂ ಭೂಮಿ ಖರೀದಿ ಮಿತಿ ದುರುಪಯೋಗವಾಗಲು ಸಾಧ್ಯವಿಲ್ಲ ಎಂದರು.

ತಿದ್ದುಪಡಿಯಲ್ಲೇನಿದೆ?
– ಕೈಗಾರಿಕೆ, ಶಿಕ್ಷಣ, ಧಾರ್ಮಿಕ ಸಹಿತ ಯಾವ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಸಲಾಗುತ್ತದೆಯೋ ಅದೇ ಉದ್ದೇಶಕ್ಕೆ ಮಾರಾಟ ಮಾಡಬೇಕು.

Advertisement

– ಅಣೆಕಟ್ಟು, ಜಲಾನಯನ ಪ್ರದೇಶ, ನದಿಪಾತ್ರದ ಫ‌ಲವತ್ತಾದ ಕೃಷಿ ಭೂಮಿ ಮತ್ತು ನೀರಾವರಿ ಜಮೀನನ್ನು ಕೈಗಾರಿಕೆಗೆ ಖರೀದಿಸಲು ಅವಕಾಶವಿಲ್ಲ.

– ಭೂಮಿ ಖರೀದಿಸಿ ಕಾಲಮಿತಿಯಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಬಳಸದಿದ್ದರೆ ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು.

– ಕೈಗಾರಿಕೆ ಉದ್ದೇಶಕ್ಕೆ ಖರೀದಿಸಿದ ಭೂಮಿಯನ್ನು ರಿಯಲ್‌ ಎಸ್ಟೇಟ್‌ ಅಥವಾ ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ.

– ಉಳುವವನೇ ಭೂಮಿ ಒಡೆಯ ಕಾಯ್ದೆಗೂ ಈ ತಿದ್ದುಪಡಿಗೂ ಸಂಬಂಧ ಇಲ್ಲ.

– ಪ. ಜಾತಿ, ಪ. ಪಂಗಡದವರ ಒಡೆತನದ ಜಮೀನು ಖರೀದಿ ಈ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ.

ಜೆಡಿಎಸ್‌ ಇಬ್ಬಗೆ ನಿಲುವು
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಜೆಡಿಎಸ್‌ ನಾಯಕರು ಮಂಗಳವಾರ ಬೆಳಗ್ಗೆ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಅಧಿ ವೇಶನಕ್ಕೆ ಆಗಮಿಸಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗಿಯಾದರು. ಚರ್ಚೆ ಸಂದರ್ಭದಲ್ಲಿ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್‌ ಸದಸ್ಯರು ಮಸೂದೆ ಅಂಗೀಕಾರದ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸಿದ್ದಾರೆ.
ಗುರುವಾರಕ್ಕೆ ಅಧಿವೇಶನ ಮೊಟಕು ವಿಧಾನಮಂಡಲದ ಚಳಿಗಾಲದ ಅಧಿವೇಶನ ಗುರುವಾರಕ್ಕೆ ಮೊಟಕುಗೊಳ್ಳಲಿದೆ. ಗ್ರಾಮ ಪಂಚಾಯತ್‌ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕರ ಒತ್ತಾಯದ ಮೇರೆಗೆ ಅಧಿವೇಶನವನ್ನು 4 ದಿನಗಳಿಗೆ ಸೀಮಿತಗೊಳಿಸಲು ಕಲಾಪ ಸಲಹಾ ಸಮಿತಿ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next