ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಅರಿವು ಮೂಡಿಸುವ ಪ್ರಚಾರ ಆಂದೋಲನಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ನಗರದಲ್ಲಿನ ಅಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾ.ಎಸ್.ಸುಜಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅನುಮತಿ ನೀಡಿದೆ ಆದೇಶಿಸಿದೆ.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ವಿದ್ಯುನ್ಮಾನ, ಮುದ್ರಣ ಮಾಧ್ಯಮ ಹಾಗೂ ಮಲ್ಟಿಮೀಡಿಯಾಗಳಲ್ಲಿ ಪ್ರಚಾರ ಆಂದೋಲನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಅದರಂತೆ, ನಗರದ ಪ್ರಮುಖ ಜಾಗಗಳಲ್ಲಿ ಜಾಹೀರಾತು ಫಲಕಗಳ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಿ ಆಯೋಗ ಬಿಬಿಎಂಪಿಗೆ ಪತ್ರ ಬರೆದಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅದೇ ರೀತಿ, ಆಯೋಗದ ಮನವಿ ಪರಿಗಣಿಸಿ ಪಿವಿಸಿ ಮುಕ್ತ ಹಾಗೂ ಶೇ.100ರಷ್ಟು ಹತ್ತಿಯ ಪರಿಕರಗಳನ್ನು ಬಳಸಿದ ಜಾಹೀರಾತು ಫಲಕಗಳನ್ನು ಅಳವಡಿಸಲು ಮತ್ತು ಚುನಾವಣಾ ಪ್ರಕ್ರಿಯೆ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸುವಂತೆ ಷರತ್ತು ವಿಧಿಸಿ ಅನುಮತಿ ನೀಡಿಲು ಬಿಬಿಎಂಪಿ ಸಹ ನಿರ್ಧರಿಸಿದೆ. ಅದಕ್ಕೆ ಕೋರ್ಟ್ ಒಪ್ಪಿಗೆ ನೀಡಬೇಕು ಎಂದು ಬಿಬಿಎಂಪಿ ಪರ ವಕೀಲರು ಮನವಿ ಮಾಡಿದರು.
ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಮತದಾನದ ಬಗ್ಗೆ ಅರಿವು ಮೂಡಿಸಲು ನಗರದಲ್ಲಿ ಜಾಹೀರಾತು ಅಳವಡಿಸಲು ಚುನಾವಣಾ ಆಯೋಗಕ್ಕೆ ಬಿಬಿಎಂಪಿ ಅನುಮತಿ ನೀಡಬಹುದು ಎಂದು ತಿಳಿಸಿತು.