Advertisement

ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ: ಸಿರಿಗೆರೆ ಶ್ರೀ

10:01 AM Feb 02, 2019 | Team Udayavani |

ಸಿರಿಗೆರೆ: ಹರಿಹರದ ಬಳಿಯ ರಾಜನಹಳ್ಳಿ ಏತ ನೀರಾವರಿ ಯೋಜನೆಯಡಿ ಸಿರಿಗೆರೆ-ಭರಮಸಾಗರ ಭಾಗದ 41 ಹಾಗೂ ಜಗಳೂರು-ದಾವಣಗೆರೆ ಭಾಗದ 53 ಕೆರೆಗಳಿಗೆ ನೀರು ತುಂಬಿಸುವ 1202 ಕೋಟಿ ರೂ. ಮಹತ್ವದ ಯೋಜನೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ನೀರಾವರಿ ನಿಗಮದ ಸಭೆಯಲ್ಲಿ ಮಂಜೂರಾತಿ ದೊರೆತಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಿರಿಗೆರೆ ಶ್ರೀ ಬೃಹನ್ಮಠದ ಸದ್ಧರ್ಮ ನ್ಯಾಯಪೀಠದಲ್ಲಿ ರೈತ ಮುಖಂಡರಿಗೆ ಸಿಹಿ ಹಂಚಿ ಮಾತನಾಡಿದ ಅವರು, ಇಂದು ತಮಗೆ ಅತೀವ ಸಂತೋಷ ಮತ್ತು ಸಡಗರದ ದಿನವಾಗಿದೆ ಎಂದರು.

ಜಗಳೂರು ಪಟ್ಟಣದಲ್ಲಿ ನಡೆದಿದ್ದ ತರಳಬಾಳು ಹುಣ್ಣಿಮೆಯಲ್ಲಿ ಭಾಗವಹಿಸಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭರಮಸಾಗರ-ಸಿರಿಗೆರೆ ಭಾಗದ 41 ಕೆರೆಗಳು ಹಾಗೂ ಜಗಳೂರು-ದಾವಣಗೆರೆ ಭಾಗದ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಮಾಡಲಾಗಿತ್ತು. ಅದರಂತೆ ಭರಮಸಾಗರ ಭಾಗದ 41 ಕೆರೆಗಳಿಗೆ 525 ಕೋಟಿ ರೂ., ಜಗಳೂರು ಭಾಗದ ಕೆರೆಗಳಿಗೆ 660 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಯ ಮಲ್ಲಶೆಟ್ಟಿಹಳ್ಳಿ ಜಾಕ್‌ವೆಲ್‌ ಬಳಿ ಸುಮಾರು 18 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ 5 ಕೋಟಿ ರೂ.ಗಳನ್ನು ನೀರಾವರಿ ನಿಗಮ ತನ್ನ ಪ್ರಸ್ತಾವನೆಯಲ್ಲಿ ಮಂಜೂರು ಮಾಡಿದೆ. ಅಣಜಿ ಕೆರೆಯಿಂದ ತುಪ್ಪದಹಳ್ಳಿ ಕೆರೆಗೆ ನೀರು ಭರ್ತಿಗೆ ಸಂಪರ್ಕ ಕಲ್ಪಸುವ ಕೊಳವೆ ಯೋಜನೆಗೆ 1.5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.

ತೋಟಗಳನ್ನು ಹೊಂದಿರುವ ರೈತರು ನೀರಿಗಾಗಿ ಪಡುತ್ತಿದ್ದ ಬವಣೆ ಹೇಳ ತೀರದಾಗಿತ್ತು. ಹೇಗಾದರೂ ಮಾಡಿ ರೈತರು ಒಂದೆರಡು ವರ್ಷಗಳ ಕಾಲ ತಮ್ಮ ತೋಟಗಳನ್ನು ಉಳಿಸಿಕೊಳ್ಳುವ ಯತ್ನ ಮಾಡಬೇಕು. ಆ ನಂತರ ಈ ಭಾಗವು ಶಾಶ್ವತವಾಗಿ ನೀರಿನ ತೊಂದರೆ ಇಲ್ಲದೆ ಸಮೃದ್ಧವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ಹರಿಹರದದ ರಾಜನಹಳ್ಳಿ ಬಳಿ ಇರುವ ಹೊಳೆಯಿಂದ ಮಲ್ಲಶೆಟ್ಟಿಹಳ್ಳಿಯಲ್ಲಿ ನಿರ್ಮಿಸಲಾಗುವ ಹೊಸದಾದ ಕೆರೆಗೆ ನೀರು ಸಂಗ್ರಹಿಸಲಾಗುವುದು. ಮಲ್ಲಶೆಟ್ಟಿಹಳ್ಳಿಯಲ್ಲಿ ನಿರ್ಮಿಸಲಾಗಿರುವ ಜಾಕ್‌ವೆಲ್‌ ಮೂಲಕ ನೀರನ್ನು ಭರಮಸಾಗರದ ದೊಡ್ಡ ಕೆರೆಗೆ ಹರಿಸಲಾಗುವುದು. ಭರಮಸಾಗರ ಕೆರೆಯ ಸಮೀಪ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ಈ ಯೋಜನೆಯ ವ್ಯಾಪ್ತಿಗೆ ಬರುವ ಕೆರೆಗಳಿಗೆ ಕೊಳವೆಗಳ ಮೂಲಕ ನೀರು ಹರಿಸಲಾಗುವುದು. ಇದರಿಂದ ಭರಮಸಾಗರ, ನೀರ್ಥಡಿ, ಹಳವುದರ, ಹಂಪನೂರು, ಸಿರಿಗೆರೆ, ದೊಡ್ಡಾಲಗಟ್ಟ, ಹಿರೇಗುಂಟನೂರು, ಲಕ್ಷಿ ್ಮೕಸಾಗರ, ಬಿದರಕೆರೆ, ಕೊಡಗವಳ್ಳಿ, ಕಾತ್ರಾಳ್‌ ಕೆರೆ, ಹಿರೇಗುಂಟನೂರು, ಕೊಳಹಾಳ್‌, ಚಿಕ್ಕಬೆನ್ನೂರು ಮುಂತಾದ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡ ಜಿ. ಮಂಜುನಾಥ್‌, ಬಿಜೆಪಿ ಭರಮಸಾಗರ ಕಾರ್ಯದರ್ಶಿ ಕೆ.ಬಿ. ಮೋಹನ್‌, ಗ್ರಾಪಂ ಸದಸ್ಯರಾದ ಎಂ. ಬಸವರಾಜಯ್ಯ, ಎಂ.ಜಿ. ದೇವರಾಜ್‌, ಸಿರಿಗೆರೆ ಹಾಗೂ ಸುತ್ತಲಿನ ರೈತ ಮುಖಂಡರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next