ಕಾರವಾರ: ದೇಶದಲ್ಲಿ ಹೊಸದಾಗಿ 12 ಅಣು ವಿದ್ಯುತ್ ಉತ್ಪಾದನೆ ರಿಯಾಕ್ಟರ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಆಡಳಿತಾತ್ಮಕ ಮತ್ತು ಹಣಕಾಸು ಒಪ್ಪಿಗೆ ನೀಡಿದೆ ಎಂದು ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಮೇಲ್ಮನವಿ ಪ್ರಾಧಿಕಾರದ ಸಹಾಯಕ ನಿರ್ದೇಶಕ ಎ.ಕೆ. ನೇಮಾ ತಿಳಿಸಿದ್ದಾರೆ.
ಶುಕ್ರವಾರ ಅಣು ವಿದ್ಯುತ್ ಸ್ಥಾವರಗಳ ಬಗ್ಗೆ ವಿವರ ನೀಡಿದ ಅವರು, ದೇಶದಲ್ಲಿ 22 ಅಣುವಿದ್ಯುತ್ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಂದ 6,780 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೊಸದಾಗಿ 12 ಅಣು ವಿದ್ಯುತ್
ರಿಯಾಕ್ಟರ್‌ಗಳ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, 12 ಘಟಕಗಳಿಂದ 9000 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಅಲ್ಲದೇ ದೇಶದಲ್ಲಿ ವಿವಿಧೆಡೆ 8 ರಿಯಾಕ್ಟರ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಇವುಗಳಿಂದ 6200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇದೆ ಎಂದರು.
ಕೈಗಾ ಘಟಕ-1ರ ಸಾಧನೆ: ಕೈಗಾ ಅಣುಸ್ಥಾವರ ಘಟಕ-1 ವಿಶ್ವದಾಖಲೆ ನಿರ್ಮಿಸಿದೆ. ಈ ಘಟಕ ಸತತ 895 ದಿನ ವಿದ್ಯುತ್ ಉತ್ಪಾದಿಸಿ ವಿಶ್ವದಲ್ಲಿ ಸತತ ವಿದ್ಯುತ್ ಉತ್ಪಾದಿಸಿದ 2ನೇ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2016, ಮೇ 13ರಿಂದ 2018, ಅ.25ರಂದು ಬೆಳಗ್ಗೆ 9ಕ್ಕೆ 895 ದಿನ ಪೂರೈಸಿ ದಾಖಲೆ ಮಾಡಿದೆ. ಈ ಘಟಕ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ್ದಾಗಿದೆ. 2000, ನ.16ರಂದು ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಉತ್ಪಾದನೆ ಆರಂಭಿಸಿತ್ತು. ರಾಜಸ್ಥಾನ ಅಣುವಿದ್ಯುತ್
ಘಟಕ-3 777 ಹಾಗೂ ಘಟಕ-5 ಸಹ 765 ದಿನ ವಿದ್ಯುತ್ ಉತ್ಪಾದಿಸಿದ ದಾಖಲೆ ಹೊಂದಿವೆ ಎಂದರು.