Advertisement

ಅಟಲ್‌ ಭೂ ಜಲ ಯೋಜನೆಗೆ ಅನುಮೋದನೆ

11:32 PM Feb 17, 2020 | Lakshmi GovindaRaj |

ಬೆಂಗಳೂರು: ರಾಜ್ಯದ 41 ತಾಲೂಕುಗಳಲ್ಲಿ ಅಂತರ್ಜಲ ನಿರ್ವಹಣೆಗಾಗಿ 1201.52 ಕೋಟಿ ರೂ. ಮೊತ್ತದ ಕೇಂದ್ರ ಸರ್ಕಾರದ ಅಟಲ್‌ ಭೂ ಜಲ ಯೋಜನೆ ಜಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯಪಾಲರ ಭಾಷಣದಲ್ಲೂ ಈ ಯೋಜನೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ರಾಜ್ಯವನ್ನು ಬರಮುಕ್ತ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ ಎಂದು ತಿಳಿಸಲಾಗಿತ್ತು.

Advertisement

ಸಂಪುಟದ ಇತರ ತೀರ್ಮಾನಗಳು: ಸಚಿವಾಲಯಕ್ಕೆ 250 ಸಂಪನ್ಮೂಲ ವ್ಯಕ್ತಿಗಳನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ 25 ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳನ್ನು 579.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದು, ಶಿಂಶಾ ನದಿಯಿಂದ ಏತ ನೀರಾವರಿ ಮೂಲಕ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕೆರೆ ತುಂಬಿಸುವ 20.83 ಕೋಟಿ ರೂ.ಯೋಜನೆ, ಕಣಾ ಜಲಾಶಯದಿಂದ ಮಾಕಳಿ, ಮಾಕಳಿ ಹೊಸಹಳ್ಳಿ, ಕೃಷ್ಣಪುರ ಸುತ್ತಮುತ್ತಲ ಗ್ರಾಮಗಳ ಕೆರೆ ತುಂಬಿಸುವ 24.85 ಕೋಟಿ ರೂ.ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.

“ಸ್ವಚ್ಛ ಭಾರತ್‌ ಮಿಷನ್‌’ ಅಡಿಯಲ್ಲಿ ರೂಪಿಸಲಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲೀಕರಣ ನೀತಿ, ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಬೈಲಾ, ಕರ್ನಾಟಕ ಉದ್ಯೋಗ ನೋಂದಣಿ (ವೃಂದ ಮತ್ತು ನೇಮಕಾತಿ) ನಿಯಮಾವಳಿ-2020, ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ತೆರೆದ ಜಾಗಗಳ ವಿರೂಪ ತಡೆ ಕಾಯ್ದೆ, ಕರ್ನಾಟಕ ಪೌರಸಂಸ್ಥೆಗಳ ಹಾಗೂ ಇತರ ಕಾನೂನು ಕಾಯ್ದೆ, ಕರ್ನಾಟಕ ನಗರ ಯೋಜನೆ ಕಾಯ್ದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರ ಪಿಂಚಣಿ ನಿಯಂತ್ರಣ ಕಾಯ್ದೆಗೆ ಸಂಪುಟ ಒಪ್ಪಿಗೆ ನೀಡಿದೆ.

ಮುಂದೂಡಿಕೆ: ಮೈಸೂರು ಲ್ಯಾಂಪ್ಸ್‌ ಹಾಗೂ ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೋರೇಷನ್‌ ವಿಲೀನ ವಿಷಯ ಹಾಗೂ ಮಹಿಳಾ ಕ್ಲಬ್‌ಗ ಇನ್‌ಫೆಂಟ್ರಿ ರಸ್ತೆಯಲ್ಲಿ 18275 ಚದರಡಿ ಜಾಗ ನೀಡುವ ವಿಷಯವನ್ನು ಮುಂದೂಡಲಾಗಿದೆ.

ರೇಸ್‌ಕೋರ್ಸ್‌ ತಿದ್ದುಪಡಿ ಕಾಯ್ದೆಗೂ ಅಸ್ತು: ತೀವ್ರ ವಿವಾದಕ್ಕೆ ಕಾರಣವಾಗಿರುವ ರೇಸ್‌ಕೋರ್ಸ್‌ ಗುತ್ತಿಗೆ ನವೀಕರಣ ಸಂಬಂಧದ “ಕರ್ನಾಟಕ ರೇಸ್‌ಕೋರ್ಸ್‌ ಗುತ್ತಿಗೆ ನವೀಕರಣ ತಿದ್ದುಪಡಿ ಕಾಯ್ದೆ’ಗೂ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಈಗಾಗಲೇ ವಿಧಾನಮಂಡಲದ ಸಮಿತಿಯು ರೇಸ್‌ಕೋರ್ಸ್‌ನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಶಿಫಾರಸು ಮಾಡಿದೆ. ಹೀಗಾಗಿ, ಕಾಯ್ದೆ ಮೂಲಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Advertisement

ಹೆಜಮಾಡಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಒಪ್ಪಿಗೆ
ಬೆಂಗಳೂರು:
ಉಡುಪಿಯ ಹೆಜಮಾಡಿ ಮೀನುಗಾರಿಕೆ ಬಂದರು 180. 84 ಕೋಟಿ ರೂ. ವೆಚ್ಚದಲ್ಲಿ ಹಾಗೂ ಗಂಗೊಳ್ಳಿ ಬಂದರಿನ ಮೀನುಗಾರಿಕಾ ಜೆಟ್ಟಿ ಪುನರ್‌ ನವೀಕರಣಕ್ಕಾಗಿ 12 ಕೋಟಿ ರೂ. ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಕುರಿತು “ಉದಯವಾಣಿ’ಯೊಂದಿಗೆ ಪ್ರತಿಕ್ರಿಯಿಸಿದ ಬಂದರು ಹಾಗೂ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯವು 320 ಕಿ.ಮೀ. ಕರಾವಳಿ ತೀರ ಹೊಂದಿದ್ದು, 21,891 ಮೀನುಗಾರಿಕಾ ದೋಣಿಗಳಿವೆ. ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರ ಕಲ್ಪಿಸಲು ಎಂಟು ಮೀನುಗಾರಿಕೆ ಬಂದರು ಮತ್ತು 26 ಮೀನುಗಾರಿಕೆ ಇಳಿದಾಣ ಕೇಂದ್ರ ಅಭಿವೃದ್ಧಿಗೆ ಉಡುಪಿಯ ಹೆಜಮಾಡಿ ಕೋಡಿಯಲ್ಲಿ 30 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮೀನುಗಾರಿಕಾ ಬಂದರು 180.84 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಇಲ್ಲಿಯವರೆಗೆ ಹೆಜಮಾಡಿ ಪ್ರದೇಶದ ಮೀನುಗಾರರರು ಮಂಗಳೂರು-ಮಲ್ಪೆ ಮೀನುಗಾರಿಕೆ ಬಂದರು ಆಶ್ರಯಿಸಬೇಕಿತ್ತು. ಹೆಜಮಾಡಿ ಬಂದರು ನಿರ್ಮಾಣದಿಂದ ಸ್ಥಳೀಯ ಮೀನುಗಾರರಿಗೆ ಅನುಕೂಲವಾಗಲಿದೆ.ಯೋಜನೆಗೆ 32 ಎಕರೆ ಸರ್ಕಾರಿ ಜಮೀನು ಈಗಾಗಲೇ ಕಂದಾಯ ಇಲಾಖೆ ನಮ್ಮ ಇಲಾಖೆಗೆ ವರ್ಗಾವಣೆ ಮಾಡಿದೆ. ಖಾಸಗಿ ಒಡೆತನದ 12 ಎಕರೆ ಜಮೀನು ಅಗತ್ಯವಿದ್ದು, ಭೂ ಸ್ವಾಧೀನಕ್ಕೆ 13.24 ಕೋಟಿ ರೂ. ಒಟ್ಟಾರೆ ಮೊತ್ತದಲ್ಲಿ ಮೀಸಲಿಡಲಾಗಿದೆ.

ಸಂಪುಟದಲ್ಲಿ ಇದಕ್ಕೆ ಅನುಮತಿ ನೀಡಿದ್ದಕ್ಕೆ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರಿಂದಲೇ ಶಿಲಾನ್ಯಾಸ ಮಾಡಿಸುವುದಾಗಿ ಶೀನಿವಾಸ ಪೂಜಾರಿ ತಿಳಿಸಿದರು. ಉಡುಪಿ ಜಿಲ್ಲೆ ಗಂಗೊಳ್ಳಿ ಬಂದರಿನಲ್ಲಿ ಕುಸಿದು ಹೋಗಿರುವ ಮೀನುಗಾರಿಕೆ ಜೆಟ್ಟಿಯ ಪುನರ್‌ ನಿರ್ಮಾಣದ 12 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next