ಚಿಕ್ಕೋಡಿ: ರೈತರಿಗೆ ನೀರು ಮುಖ್ಯ. ಅದೇ ಉದ್ದೇಶ ಇಟ್ಟುಕೊಂಡು ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಸಬೇಕೆಂದು ಜಲಸಂಪನ್ಮೂಲ ಖಾತೆ ಪಡೆದುಕೊಂಡಿದ್ದು, ಬರುವ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ತಾಲೂಕಿನ 17 ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಸ್ಥಳವನ್ನು ಕುಠಾಳಿ ಗ್ರಾಮದಲ್ಲಿ ವೀಕ್ಷಿಸಿ ರೈತರನ್ನುದ್ದೇಶಿಸಿ ಮಾತನಾಡಿದರು. ನೀರಾವರಿ ಸಚಿವರಾದ ಬಳಿಕ ಮಹಾಲಕ್ಷ್ಮೀ ಏತ ನೀರಾವರಿಗೆ ಆದ್ಯತೆ ನೀಡಲಾಗಿದ್ದು, ಶೀಘ್ರವಾಗಿ ಯೋಜನೆಗೆ ಮಂಜೂರಾತಿ ಕೊಡಲಾಗುತ್ತದೆ ಎಂದರು.
ಸಿಎಂ ಯಡಿಯೂರಪ್ಪ ಅವರು ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಹೀಗಾಗಿ ಅನುದಾನದ ಕೊರತೆ ಎದುರಾಗುವುದಿಲ್ಲ. ಈ ಯೋಜನೆಗೆ ನೀರಿನ ಹಂಚಿಕೆ ಆಗಿದ್ದರಿಂದ ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಲಾಗುವುದು. ಮಹಾರಾಷ್ಟ್ರದ ನೀರಾವರಿ ಸಚಿವರ ಜೊತೆ ಮಾತುಕತೆ ನಡೆಸಿ ಬೇಸಿಗೆಯಲ್ಲಿ ನೀರಿನ ಕೊರತೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.
ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಹಲವು ದಶಕಗಳಿಂದ ವಂಚಿತವಾದ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಸಮುದ್ರ ಪಾಲಾಗುತ್ತದೆ. ಹೀಗಾಗಿ ನದಿ ನೀರನ್ನು ರೈತರಿಗೆ ಒದಗಿಸಲು ಯೋಜನೆಗೆ ಚಾಲನೆ ಕೊಡಬೇಕು ಎಂದು ಮನವಿ ಮಾಡಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಹಳ ವರ್ಷದಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆಗೆ ಹಸಿರು ನಿಶಾನೆ ತೋರಬೇಕಾಗಿದೆ ಎಂದರು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಬರುವ ಎರಡು ವರ್ಷದಲ್ಲಿ ಈ ಯೋಜನೆ ಮುಕ್ತಾಯ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಪಂ ಅಧ್ಯಕ್ಷ ಆಶಾ ಐಹೊಳೆ, ಮಹೇಶ ಭಾತೆ, ರಾಜೇಶ ನೇರ್ಲಿ, ಪ್ರಕಾಶ ಮಗದುಮ್ಮ, ರಾವಸಾಹೇಬ ಕಮತೆ, ಅಪ್ಪಾಸಾಹೇಬ ಚೌಗಲೆ, ಅಭಯ ಪಾಟೀಲ, ಜೀತೇಂದ್ರ ಪಾಟೀಲ, ವಿಶ್ವನಾಥ ಕಮತೆ ಮುಂತಾದವರು ಇದ್ದರು.