Advertisement

ಸಲಾಂ ಬೆಂಗಳೂರು- 69ರ ಬೆಳಗಿನಲ್ಲಿ ಕಂಡ ಸಜ್ಜನಿಕೆ  

04:43 PM Feb 25, 2017 | Team Udayavani |

ಬೆಂಗಳೂರಿನ ವಿಷಯವಾಗಿ ಹಸವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೇ ಬೆಳೆಯುತ್ತಲೇ ಹೋಗುತ್ತದೆ. ಒಪ್ಪಲೇಬೇಕಾದ ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ ಪ್ರಸಂಗಗಳೂ ಈ ಬೆರಗಿನ ಬೆಂಗಳೂರಲ್ಲಿ ನಡೆದು ಬಿಡುತ್ತವೆ. ಅಂತಹ ಹೃದ್ಯ ಪ್ರಸಂಗದ ಅನಾವರಣಕ್ಕೆ ಈ ಅಂಕಣ ಮೀಸಲು.ಖ್ಯಾತ ಲೇಖಕರಾದ ನಾಗೇಶ ಹೆಗಡೆಯವರ ಪುಟ್ಟ ಬರಹದೊಂದಿಗೆ “ಸಲಾಂ ಬೆಂಗಳೂರ್‌’ ಹೆಸರಿನ ಈ ಅಂಕಣ ಆರಂಭವಾಗುತ್ತಿದೆ.

Advertisement

ಇಂದು ಬೆಳಿಗ್ಗೆ ಬೆಂಗಳೂರು ತಲುಪಿ, ರೈಲಿನಿಂದಿಳಿದು ಅಲ್ಲೇ ಇನ್ನಷ್ಟು ಪಾತಾಳಕ್ಕಿಳಿದು ಮೆಟ್ರೊ ಪಯಣದ ಟೋಕನ್‌ ಪಡೆದು, ಮತ್ತಷ್ಟು ತಳಕ್ಕಿಳಿದು ಮೆಟ್ರೊ ರೈಲನ್ನು ಹೊಕ್ಕಾಗ ತುಂಬ ಜನಸಂದಣಿ ಇತ್ತು. ಹೇಗೋ ಹೆಗಲಚೀಲವನ್ನು ಸಾವರಿಸಿಕೊಳ್ಳುತ್ತ ತೂಗುಹಿಡಿಕೆ ಹಿಡಿದು ಜೋತು ನಿಂತಿದ್ದಾ ಗ ಒಂದು ಅಚ್ಚರಿ ಸಂಭವಿಸಿತು. ಎದುರು ಕೂತಿದ್ದ ಯುವತಿಯೊಬ್ಬಳು ತನ್ನ ಸೀಟ್ ಬಿಟ್ಟು ಎದ್ದು ನಿಂತು “ಕೂತ್ಕೊಳಿ’ ಎಂದು ನನಗೆ ಹೇಳಿದಳು. ನನಗೆ ವಯಸ್ಸಾಯಿತು ಎಂದು ಅವಳಿಗೂ ಗೊತ್ತಾಯಿತಲ್ಲ! ವಯಸ್ಸಿನ ಕಾರಣದಿಂದಾಗಿಯೇ ಮೆಟ್ರೊದಲ್ಲಿ ಕೂರಲು ಅವಕಾಶ ಸಿಕ್ಕಿದ್ದು ಇದೇ ಮೊದಲ ಬಾರಿ. ಕೂರುವ ಮೊದಲು ಆ ಯುವತಿಯ ಕಿವಿಯಲ್ಲಿ ‘this is the most appropriate gift for an old man on his birthday’ ಅಂದೆ. ಚುರುಕು ಹುಡುಗಿ. ಒಂದರೆಕ್ಷಣದಲ್ಲೇ ನಾನು ಹೇಳಿದ್ದನ್ನು ಗ್ರಹಿಸಿ “ಹ್ಯಾಪಿ ಬರ್ತ್‌ಡೇ’ ಎಂದಳು. 

ದಿನವಿಡೀ ವಾಟ್ಸಾಪ್‌, ಎಸ್ಸೆಮ್ಮೆಸ್‌, ಫೇಸ್‌ಬುಕ್‌, ಇಮೇಲ್‌, ಫೋನ್‌ಕಾಲ್‌ – ಹೀಗೆ ಎಲ್ಲ ಮೂಲಗಳಿಂದ ಜನ್ಮದಿನದ ಶುಭಾಶಯಗಳು ಬರುತ್ತಿವೆ. ಜ್ಞಾಪಕಶಕ್ತಿ ಮಸುಕಾಗುತ್ತ ಹೋದಂತೆಲ್ಲ ಶುಭ ಕೋರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ವ್ಯಕ್ತಿಗತ ಧನ್ಯವಾದ ಹೇಳಲು ಶಕ್ತಿ ಮೀರಿ ಪ್ರಯತ್ನಿಸಿದರೂ ಹೇಳಲಾಗದೆ ಉಳಿದ ನೂರಾರು ಜನರಿಗೆ ಇದೋ ಧನ್ಯವಾದಗಳು. ಬದುಕಿನಲ್ಲಿ ಎಂದೂ “ಸುಸ್ತಾಯಿತು’ “ಬೋರ್‌ ಆಯಿತು’ ಎಂಬೆರಡು ಪದ ನಿಮ್ಮತ್ತ ಎಂದೂ ಸುಳಿಯದಿರಲಿ. 

– ನಾಗೇಶ್‌ ಹೆಗಡೆ  

Advertisement

Udayavani is now on Telegram. Click here to join our channel and stay updated with the latest news.

Next