Advertisement

ವಿಧಾನ-ಕದನ 2023: ಇನ್ನೇನಿದ್ದರೂ ನೀತಿ ಸಂಹಿತೆಯ ಕಾಲ

11:53 PM Mar 29, 2023 | Team Udayavani |

ರಾಜ್ಯ ವಿಧಾನಸಭೆ ಚುನಾ ವಣೆಗೆ ದಿನಾಂಕ ನಿಗದಿಯಾಗುತಿದ್ದಂತೆ ಶಾಸಕರು, ಸಚಿವರು, ನಿಗಮ ಮಂಡಳಿಯ ಅಧ್ಯಕ್ಷರಿಗೆ ಸರಕಾರ ಒದಗಿಸಿದ್ದ ಸವಲತ್ತುಗಳನ್ನು ವಾಪಸ್‌ ಪಡೆಯಲಾಗಿದೆ. ಶಾಸಕರು, ಸಚಿವರಿಗೆ ಸರಕಾರದಿಂದ ನಿಯೋಜಿಸಿರುವ ಆಪ್ತ ಸಹಾಯಕರನ್ನು ಮರಳಿ ಮಾತೃ ಇಲಾಖೆಗೆ ಕಳುಹಿಸಲಾಗಿದೆ. ಬುಧವಾರ ಬೆಳಗ್ಗೆ 11.30ರವರೆಗೂ ಸರಕಾರಿ ವಾಹನದಲ್ಲಿ ಓಡಾಡುತ್ತಿದ್ದ ಜನ ಪ್ರತಿನಿಧಿಗಳು ತತ್‌ಕ್ಷಣದಿಂದಲೇ ಸ್ವಂತ ವಾಹನ ಏರಿದರು.

Advertisement

ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳು ಆಗಿವೆ. ನಗರಸಭೆ ಸಿಬಂದಿ ಸಹಿತವಾಗಿ ಗ್ರಾ.ಪಂ., ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಬಂದಿ ವರ್ಗ ಜಿಲ್ಲಾಡಳಿತದ ಸೂಚನೆ ಮೇರೆಗೆ ಬ್ಯಾನರ್‌, ಬಂಟಿಂಗ್ಸ್‌ ಇತ್ಯಾದಿಗಳನ್ನು ತೆರವು ಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಆವರಣದ ಸಚಿವರ ಕಚೇರಿ ಹಾಗೂ ಸಂಸದರ ಕಚೇರಿಗೆ ಸರಕಾರದಿಂದ ನೀಡಿರುವ ಸವಲತ್ತುಗಳನ್ನು ನೀತಿ ಸಂಹಿತೆ ನಿಯಮ ಆಧಾರದಲ್ಲಿ ವಾಪಸ್‌ ಪಡೆಯಲಾಗಿದೆ. ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಅವರು ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರ ಸಭೆ ನಡೆಸಿ, ಚುನಾವಣೆ ವೆಚ್ಚ ಸಹಿತವಾಗಿ ಕಾರ್ಯಕ್ರಮ ಆಯೋಜನೆ ಸಂದರ್ಭದಲ್ಲಿ ಯಾವುದೇ ನಿಯಮದ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಲು ಸೂಚನೆಯನ್ನು ರವಾನಿಸಿದ್ದಾರೆ. ಒಟ್ಟಾರೆಯಾಗಿ ಜಿಲ್ಲಾದ್ಯಂತ ನೀತಿ ಸಂಹಿತೆ ಇಫೆಕ್ಟ್ ಶುರುವಾಗಿದೆ.

ರಾಜಕೀಯ ಪಕ್ಷಗಳಲ್ಲೂ ಸಂಚಲನ
ಚುನಾವಣೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ರಾಜಕೀಯ ಪಕ್ಷ ಗಳಲ್ಲೂ ಸಂಚಲನ ಆರಂಭವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಚುನಾವಣೆ ಸಂಬಂಧಿಸಿದ ಚಟುವಟಿಕೆಗಳು ಬಿರುಸುಗೊಂಡಿವೆ. ಪಕ್ಷದ ಕಚೇರಿಯಲ್ಲಿ ಚುನಾವಣೆ ಪ್ರಚಾರಕ್ಕೆ ಅಗತ್ಯವಿರುವ ಕರಪತ್ರಗಳು, ನಾಯಕರ ಕಟೌಟ್‌ಗಳು, ಬಾವುಟ ಇತ್ಯಾದಿ ಸಂಗ್ರಹಿಸಿಡಲಾಗಿದೆ. ಜಿಲ್ಲಾ ಸ್ತರದ ಪ್ರಮುಖರ ಸಭೆಯನ್ನು ನಡೆಸಲಾಗಿದೆ. ಕಾಂಗ್ರೆಸ್‌ನಿಂದ ಮೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಅಧಿಕೃತ ಪ್ರಚಾರವನ್ನು ಆರಂಭಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆಯನ್ನೇ ಇದಿರು ನೋಡುತ್ತಿದ್ದಾರೆ.

ಆಕಾಂಕ್ಷಿಗಳು ಟಿಕೆಟ್‌ ಪಡೆಯಲು ಕಸರತ್ತು ನಡೆಸುತ್ತಿದ್ದರೆ ಕಾರ್ಯಕರ್ತರು ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಜಿಲ್ಲಾ, ತಾಲೂಕು, ಗ್ರಾ.ಪಂ. ಮಟ್ಟದ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರಕ್ಕೆ ಬೇಕಾದ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಮನೆ ಮನೆ ಪ್ರಚಾರ ಪ್ರಕ್ರಿಯೆಯೂ ವೇಗ ಪಡೆಯುತ್ತಿದೆ.

Advertisement

ಚುನಾವಣೆಯದ್ದೇ ಮಾತು
ಚುನಾವಣ ಆಯೋಗ ದಿನಾಂಕ ಘೋಷಣೆ ಮಾಡು ತ್ತಿದ್ದಂತೆ ಬಹು ತೇಕ ಎಲ್ಲರ ಬಾಯಲ್ಲೂ ಮುಂದಿನ ಸರ ಕಾರದ ಚರ್ಚೆ ಆರಂಭ ವಾಗಿದೆ. ಮೇ 13 ಫ‌ಲಿತಾಂಶ ಬರುತ್ತದೆ. ಸರಕಾರ ಯಾವುದು ಬರಲಿದೆ. ನಮ್ಮ ಕ್ಷೇತ್ರ ಶಾಸಕರಾಗುವವರು ಯಾರು, ಎಷ್ಟು ಸಚಿವ ಸ್ಥಾನ ಸಿಗಲಿದೆ. ಮೋದಿ, ಅಮಿತ್‌ಶಾ, ರಾಹುಲ್‌ ಗಾಂಧಿ ಪ್ರಚಾರಕ್ಕೆ ಬರುವರೇ ಎಂಬಿತ್ಯಾದಿ ಚುನಾವಣೆಯ ಮಾತುಗಳು ಬಸ್‌ ನಿಲ್ದಾಣ, ಆಟೋ ನಿಲ್ದಾಣ, ಸಾರ್ವಜನಿಕ ಸಾರಿಗೆ, ವಿವಿಧ ಕಚೇರಿ, ಗ್ರಾಮಗಳ ಕಟ್ಟೆಗಳಲ್ಲಿ, ಮನೆ ಮನೆಗಳಲ್ಲೂ ಕೇಳಿ ಬರುತ್ತಿವೆ.

ಜಿಲ್ಲಾಧಿಕಾರಿಗೆ ಅಧಿಕಾರ
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಅಧಿಕಾರ ಗೌಣವಾಗಿ ಜಿಲ್ಲಾಧಿಕಾರಿಗಳಿಗೆ ಚುನಾವಣೆ ಮುಗಿಯುವರೆಗೂ ಒಂದು ರೀತಿಯಲ್ಲಿ ಪರಮಾಧಿಕಾರ ಇರುತ್ತದೆ. ಚುನಾವಣ ಆಯೋಗದ ಸೂಚನೆಯಂತೆ ಎಲ್ಲ ರೀತಿಯ ಮೇಲ್ವಿಚಾರಣೆ, ನಿಗಾವಣೆ ಮಾಡಲಿದ್ದಾರೆ. ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಅಭ್ಯರ್ಥಿಗಳ ಬ್ಯಾನರ್‌, ಬಂಟಿಂಗ್ಸ್‌ಗೆ ಕಡಿವಾಣ ಹೇರಲಾಗಿದೆ. ಮಾರಕಾಸ್ತ್ರ, ಮದ್ದುಗುಂಡುಗಳು ಹಾಗೂ ಆಯುಧ ಗಳೊಂದಿಗೆ ಸಂಚಾರವನ್ನು ನಿಷೇಧಿಸಿದ್ದಾರೆ. ಜಿಲ್ಲಾಧಿಕಾರಿಗಳು, ಸರಕಾರಿ ಅಧಿಕಾರಿಗಳು ಮುಂದಿನ ಸರಕಾರ ರಚನೆಯ ವರೆಗೂ ಅಧಿಕಾರ ನಡೆಸಲಿದ್ದಾರೆ..

ದಾಖಲೆ ಮರೆಯದಿರಿ
ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಎಲ್ಲೆಡೆ ತಪಾಸಣೆಯೂ ಚುರುಕುಗೊಂಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬರುವ ಸಂದರ್ಭದಲ್ಲಿ ಅಥವಾ ಯಾವುದೇ ಉದ್ದೇಶಕ್ಕೆ ಹಣ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ಪೂರಕ ದಾಖಲೆಗಳನ್ನು ಇರಿಸಿಕೊಳ್ಳಿ. ಹಣ ಮಾತ್ರವಲ್ಲ. ಚಿನ್ನಾಭರಣಕ್ಕೂ ಇದು ಅನ್ವಯಿಸುತ್ತದೆ. ಚುನಾವಣೆ ಮುಗಿಯುವವರೆಗೂ ಇದು ನೆನಪಿಟ್ಟುಕೊಳ್ಳಬೇಕಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next