Advertisement

ಚುನಾವಣೆ ಸಿದ್ಧತೆಗೆ ವೀಕ್ಷಕರಿಂದ ಮೆಚ್ಚುಗೆ

10:41 AM Apr 30, 2018 | |

ಬಳ್ಳಾರಿ: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಆಯೋಗ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಚುನಾವಣಾ ಆಯೋಗ ವಿವಿಧ ವಿಭಾಗಗಳಿಗೆ ನಿಯೋಜಿಸಿದ್ದ ವೀಕ್ಷಕರು ತೃಪ್ತಿ ವ್ಯಕ್ತಪಡಿಸಿದರು.

Advertisement

ನಗರದ ಹೊರವಲಯದ ಆರ್‌ವೈಎಂಇಸಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ 9 ವಿಧಾನಸಭಾ ಕ್ಷೇತ್ರಗಳ ರಿಟರ್ನಿಂಗ್‌ ಅಧಿಕಾರಿಗಳು ಮತ್ತು ವಿವಿಧ ಸಮಿತಿಗಳ ನೋಡಲ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್‌ ವೀಕ್ಷಕ ಎಲ್‌.ವಿ. ಅಂಥೋನಿ ದೇವಕುಮಾರ್‌, ಚುನಾವಣಾ ವೀಕ್ಷಕ ಜಿತೇಂದ್ರ ಕುಮಾರ್‌, ಡಾ| ಅಶೋಕ್‌ಚಂದ್ರ, ಎಲ್‌. ಎಸ್‌. ಕೇನ್‌, ಬಿ. ಜಯಕುಮಾರ್‌ ನಾಯಕ್‌, ಎಸ್‌. ಸೋಹೆಲ್‌ ಅಲಿ ಮತ್ತು ಚುನಾವಣಾ ವೆಚ್ಚ ವೀಕ್ಷಕ ಅಂದೇ ಪೋಶೆಟ್ಟಿ, ಎನ್‌. ಸಂಜಯಗಾಂಧಿ, ನೇಮ್‌ ಸಿಂಗ್‌, ಚಮನ್‌ಲಾಲ್‌ ಡೋಗ್ರಾ, ರಾಜು ಶಕ್ತಿವೇಲ್‌, ನವನೀತ್‌ ಅಗರ್‌ವಾಲ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಚುನಾವಣೆ ಸುಸೂತ್ರವಾಗಿ ನಡೆಯುವ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸುವ ಸಲುವಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಚುನಾವಣಾ ವೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ 3 ತಾಲೂಕುಗಳು ಅಂತರ್‌ರಾಜ್ಯ ಗಡಿ ಹಂಚಿಕೊಂಡಿದ್ದು, ಈಗಾಗಲೇ 15 ಅಂತಾರಾಜ್ಯ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನೊಂದಿಷ್ಟು ಚೆಕ್‌ಪೋಸ್ಟ್‌ಗಳ ಸ್ಥಾಪಿಸುವುದರತ್ತ ಮತ್ತು ಈಗಾಗಲೇ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವ ಕೆಲಸ ಮಾಡುವಂತೆ ಕೇಳಿಕೊಂಡರು. 

ಚುನಾವಣಾ ಆಯೋಗದ ಅನುಸಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ತಿಳಿಸಿದ ಅವರು, ರಿಟರ್ನಿಂಗ್‌ ಅಧಿಕಾರಿಗಳು ಇದುವರೆಗೆ ನಿರ್ವಹಿಸಿದ ಕೆಲಸಗಳ ವಿವರದ ಮಾಹಿತಿ ಪಡೆದುಕೊಂಡರು. ಇದಕ್ಕೂ ಮುಂಚೆ ಜಿಲ್ಲೆಯ ಚುನಾವಣೆ ಬಗ್ಗೆ ಸಂಪೂರ್ಣ ವಿವರನ್ನು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ| ವಿ. ರಾಮ್‌ಪ್ರಸಾತ್‌ ಮನೋಹರ್‌ ಸಭೆಗೆ ತಿಳಿಸಿದರು.

Advertisement

9 ವಿಧಾನಸಭಾ ಕ್ಷೇತ್ರಗಳಲ್ಲಿ 91 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. 2,127 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲೆಲ್ಲಾ ಕುಡಿಯುವ ನೀರು, ಶೌಚಾಲಯ, ಫ್ಯಾನ್‌, ರ್‍ಯಾಂಪ್‌, ವ್ಹೀಲ್‌ ಚೇರ್‌ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಲು ಪ್ರತಿ ಮತಗಟ್ಟೆಗೆ ಒಬ್ಬೊಬ್ಬ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಣ್ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವ 17 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸಖೀ(ಪಿಂಕ್‌) ಮತಗಟ್ಟೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದರು.

ಚೆಕ್‌ಪೋಸ್ಟ್‌ಗಳ ಮೂಲಕ ನಿಗಾ: ಜಿಲ್ಲೆಯಲ್ಲಿ 51 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮ ಚಟುವಟಿಕೆಗಳು ತಡೆಯಲು ತೀವ್ರ ನಿಗಾವಹಿಸಲಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ 153 ಸ್ಟ್ರ್ಯಟಿಕ್‌ ಸರ್ವಲೈನ್ಸ್‌ ತಂಡಗಳು ಸರದಿ ಅನುಸಾರ 24 ಗಂಟೆಗಳ ಕಾಲ ನಿರ್ವಹಿಸುತ್ತಿದ್ದು, ಇವರಿಗೆ ಫ್ಯಾರಾ ಮಿಲಿಟರಿ ಪಡೆ ಕೂಡ ಸಹಾಯ ಮಾಡುತ್ತಿದೆ ಎಂದರು.

ವಿವಿಪ್ಯಾಟ್‌ಗಳು ಇದೇ ಮೊದಲ ಬಾರಿಗೆ ಪರಿಚಯಿಸಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು. 459 ಅತಿಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗುತ್ತಿದೆ ಮತ್ತು 23 ವಲ್ಲನರಬೇಲ್‌ ಕಾಲೋನಿಗಳೆಂದು ಗುರುತಿಸಲಾಗಿದ್ದು, ಈ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮತದಾರರೊಂದಿಗೆ ಸಂವಾದ ನಡೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದರ ಮೂಲಕ ನಿರ್ಭಯವಾಗಿ ಮತಚಲಾಯಿಸುವಂತೆ ತಿಳಿಸಲಾಗಿದೆ. ತಮ್ಮ ಸಹಾಯಕ್ಕೆ ನಾವಿದ್ದೇವೆ ಚಿಂತೆ ಬಿಡಿ ಅಂತ ಹೇಳಿದ್ದೇವೆ ಎಂದರು.

ಕಾಸಿಗಾಗಿ ಸುದ್ದಿಮೇಲೆ ನಿಗಾ: ಜಿಲ್ಲೆಯಲ್ಲಿ ನೀತಿಸಂಹಿತೆ ಜಾರಿಗೆ ಬಂದ ದಿನದಿಂದ ಮಾಧ್ಯಮ ಕಣ್ಗಾವಲು ಸಮಿತಿ ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಕಾಸಿಗಾಗಿ ಸುದ್ದಿಗಳ ಮೇಲೆ ತೀವ್ರ ನಿಗಾ ಇರಿಸಿದೆ. ಅಭ್ಯರ್ಥಿಗಳ ಸೋಶಿಯಲ್‌ ಮೀಡಿಯಾ ಖಾತೆಗಳನ್ನು ಕೂಡ ನಾವು ಪರಿಶೀಲಿಸುತ್ತಿದ್ದು, ಸಣ್ಣ ನೀತಿ ಸಂಹಿತೆ ಉಲ್ಲಂಘನೆ ಅಂಶ ಕಂಡುಬಂದರೂ ಸಹ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ, ಮತದಾರರ ಕೋರಿಕೆ ಸೇರಿದಂತೆ ಇನ್ನಿತರ ಚುನಾವಣಾ ಸಂಬಂಧಿತ ಅಂಶಗಳನ್ನು ಈ ಸಮಿತಿ ಪರಿಶೀಲಿಸಿ ಆರ್‌ಒಗಳ ಗಮನಕ್ಕೆ ತರುತ್ತಿದೆ. ವಿದ್ಯುನ್ಮಾನ ಮತ್ತು ಕೇಬಲ್‌ ಟಿವಿಗಳಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಜಾಹೀರಾತು ಪ್ರಕಟಣೆ ಮಾಡುವುದಕ್ಕಿಂತ ಮುಂಚೆ ಜಾಹೀರಾತು ಪ್ರಮಾಣೀಕರಣ ಅನುಮತಿ ಕಡ್ಡಾಯವಾಗಿದೆ ಎಂದರು. 

18,242 ಅಂಗವಿಕಲ ಮತದಾರರಿದ್ದು, ಅವರನ್ನು ಪ್ರತಿಮತಗಟ್ಟೆ ಅಧಿಕಾರಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ಅವರ ವಿವರ ಸಂಗ್ರಹಿಸಿಕೊಂಡಿದ್ದಾರೆ. ಮತಗಟ್ಟೆ ಬಳಿ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಜಿಪಂ ಸಿಇಒ ಡಾ| ಕೆ.ವಿ. ರಾಜೇಂದ್ರ ಅವರು ಸ್ವೀಪ್‌ ಸಮಿತಿ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಂಶಗಳ ಕುರಿತು ವಿವರವಾಗಿ ತಿಳಿಸಿದರು.

ಎಸ್ಪಿ ಅರುಣ ರಂಗರಾಜನ್‌ ಅವರು ಚುನಾವಣೆ ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ವಿವಿಧ ಸಮಿತಿಗಳ ನೋಡಲ್‌ ಅಧಿ ಕಾರಿಗಳು ಮತ್ತು 9 ವಿಧಾನಸಭಾ ಕ್ಷೇತ್ರಗಳ ಆರ್‌ಒಗಳು ಈ ಸಂದರ್ಭದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next