ಬೆಂಗಳೂರು: ನಕಲಿ ಅಂಕಪಟ್ಟಿಯ ಸಾಲು ಸಾಲು ಹಗರಣಗಳಿಂದ ಬೇಸತ್ತಿರುವ ಸರಕಾರ ಅದಕ್ಕೆ ಕಡಿವಾಣ ಹಾಕಲು ಕಠಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಇನ್ನು ಮುಂದೆ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿ ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಅವುಗಳನ್ನು ನೀಡಿದ ವಿವಿಗಳು ಮತ್ತು ಪರೀಕ್ಷಾ ಮಂಡಳಿಗಳು ಖಾತರಿಪಡಿಸಿದ ಬಳಿಕವಷ್ಟೇ ನೇಮಕಾತಿ ಆದೇಶ ಕೈಗೆ ಸಿಗಲಿದೆ.
ರಾಜ್ಯ ಸಿವಿಲ್ ಸೇವೆ ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣಪತ್ರ ಹಾಗೂ ಇನ್ನಿತರ ದಾಖಲಾತಿಗಳ ಜತೆಗೆ ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳ ನೈಜತೆಯನ್ನು ಅವುಗಳನ್ನು ನೀಡಿದ ವಿವಿಗಳು, ಪರೀಕ್ಷಾ ಮಂಡಳಿಗಳೊಂದಿಗೆ ಪರಿಶೀಲನೆ ನಡೆಸಬೇಕು. ಸಂಬಂಧಿಸಿದ ವಿವಿಗಳು, ಶೈಕ್ಷಣಿಕ ಪರೀಕ್ಷಾ ಮಂಡಳಿಗಳಿಂದಲೇ ವಿತರಿಸಲಾದ ಪ್ರಮಾಣಪತ್ರಗಳೆಂದು ಖಾತರಿಯಾದ ಬಳಿಕವೇ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಎಲ್ಲ ಆಯ್ಕೆ ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ಸರಕಾರ ಆದೇಶಿಸಿದೆ.
ಈಚೆಗೆ ನಕಲಿ ಅಂಕಪಟ್ಟಿಗಳ ಹಗರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಈವರೆಗೆ ಸಿವಿಲ್ ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣಪತ್ರ ಹಾಗೂ ಇನ್ನಿತರ ದಾಖಲಾತಿಗಳನ್ನು ಮಾತ್ರ ಸಕ್ಷಮ ಪ್ರಾಧಿಕಾರ ಪರಿಶೀಲನೆ ನಡೆಸುತ್ತಿದೆ. ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಅಭ್ಯರ್ಥಿಗಳು ಹಾಜರುಪಡಿಸುವ ಮೂಲ ದಾಖಲೆಗಳೊಂದಿಗೆ ತಾಳೆ ನೋಡಲಾಗುತ್ತಿತ್ತು. ಅಂಕಪಟ್ಟಿ ವಿತರಿಸಿದ ವಿಶ್ವವಿದ್ಯಾಲಯ, ಪರೀಕ್ಷಾ ಮಂಡಳಿ ಮುಂತಾದ ಶೈಕ್ಷಣಿಕ ಪರೀಕ್ಷಾ ಪ್ರಾಧಿಕಾರಗಳೊಂದಿಗೆ ಪರಿಶೀಲಿಸುವ ವ್ಯವಸ್ಥೆ ಇರಲಿಲ್ಲ.
ಹೊಸ ಆದೇಶ ಎಲ್ಲರೂ ಪಾಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿ ಗಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
– ರಫೀಕ್ ಅಹ್ಮದ್