Advertisement

ಪ್ಯಾಕೇಜ್‌ ರೂಪದಲ್ಲಿ ವಿವಿ ಕುಲಪತಿಗಳ ನೇಮಕ

06:50 AM Nov 29, 2018 | Team Udayavani |

ಬೆಂಗಳೂರು : ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಪ್ಯಾಕೇಜ್‌ ಆಧಾರದಲ್ಲಿ ನಡೆಯುತ್ತಿದೆ. ಕುಲಪತಿ ಹುದ್ದೆ ಸ್ವೀಕರಿಸಿದವರು ಕಟ್ಟಡ ಕಟ್ಟುವುದು, ಟೆಂಡರ್‌ ಕರೆಯುವುದು ಬಿಟ್ಟರೆ, ಆಡಳಿತಾತ್ಮಕ ಕಾರ್ಯ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸ್ಟುಡೆಂಟ್‌ ಇಸ್ಲಾಮಿಕ್‌ ಆರ್ಗನೈಸೇಷನ್‌(ಎಸ್‌ಐಒ) ವತಿಯಿಂದ ಬುಧವಾರ ನಗರದ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ “ಸದನದಲ್ಲಿ ಶಿಕ್ಷಣ’ ದುಂಡುಮೇಜಿನ ಚರ್ಚೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವರ್ಗೀಕರಣ ವ್ಯವಸ್ಥೆ ಏಕೆ ಎಂಬುದನ್ನೇ ಇನ್ನೂ ಹಲವರು ಅರಿತುಕೊಂಡಿಲ್ಲ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಪ್ಯಾಕೇಜ್‌ ರೂಪದಲ್ಲಿ ನಡೆಯುವುದು ಮಾತ್ರವಲ್ಲದೇ ಸೆನೆಟ್‌, ಸಿಂಡಿಕೇಟ್‌ ಸದಸ್ಯರ ಆಯ್ಕೆಗೂ ಲಾಬಿ ನಡೆಯುತ್ತದೆ. ಯುಜಿಸಿ ವೇತನ ಶ್ರೇಣಿ ಜಾರಿಯಾದ ನಂತರವಂತೂ ವಿಶ್ವವಿದ್ಯಾಲಯದ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಹಾಳಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಗ್ರಂಥಾಲಯ ಬಳಸುವುದನ್ನೇ ಕಡಿಮೆ ಮಾಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಮಾಹಿತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಗ್ರಂಥಾಲಯ ಬಳಕೆ ಮಾಡದೇ ಇರುವುದು ಸರಿಯಲ್ಲ. ನಿತ್ಯ ಗ್ರಂಥಾಲಯಕ್ಕೆ ಹೋಗಬೇಕಾದ ಪ್ರಾಧ್ಯಾಪಕರು ತಿಂಗಳಿಗೊಮ್ಮೆ ಹೋಗುವುದು ಕಷ್ಟಸಾಧ್ಯವಾಗಿದೆ. ಇದಕ್ಕೆ ಸರಿ ಹೊಂದುವಂತೆ ಸರ್ಕಾರ ಬದಲಾದಂತೆ ಸಿದ್ಧಾಂತಗಳು ಬದಲಾಗುತ್ತದೆ ಎಂದರು.

ಒಂದೊಂದು ವಿಷಯಕ್ಕೂ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಲ್ಲಬೇಕು. ಎಲ್ಲ ವಿಷಯಗಳು ಸಮಗ್ರವಾಗಿ ಒಂದೇ ಸೂರಿನಡಿ ಸಿಗುವ ವಿಶ್ವವಿದ್ಯಾಲಯದ ಪರಿಕಲ್ಪನೆ ನೆರವೇರಬೇಕು. ಸರ್ಕಾರಕ್ಕೆ ಇತ್ಛಶಕ್ತಿ ಇದ್ದಾಗ ಮಾತ್ರ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಶಿಕ್ಷಣದ ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲು ಕ್ರಮ ವಹಿಸಲಾಗುವುದು. ಶಾಸನ ಸಭೆಗಳಲ್ಲಿ ಸದಸ್ಯರ ಭಾಗವಹಿಸುವಿಕೆಯಿಂದ ವ್ಯವಸ್ಥೆ ಸುಧಾರಿಸಲು ಸಾಧ್ಯ. ಈ ಬಾರಿಯ ಅಧಿವೇಶನದಲ್ಲಿ ಹೆಚ್ಚು ಸದಸ್ಯರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಲೇಖಕ ಶ್ರೀಪಾದ್‌ ಭಟ್‌ ಮಾತನಾಡಿ, ಸಾರ್ವಜನಿಕ ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿವೆ. ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರ ಗುಣಮಟ್ಟ ಎಷ್ಟೇ ಉತ್ತಮವಾಗಿದ್ದರೂ, ಕನಿಷ್ಠ ವೇತನ ಸಿಗುತ್ತಿಲ್ಲ. ಆದರೆ, ಖಾಸಗಿ ಕಂಪೆನಿಗಳಲ್ಲಿ ಅವಿದ್ಯಾವಂತ ಕಾರ್ಮಿಕರು ಕನಿಷ್ಠ ವೇತನದ ಜತೆಗೆ ಇಎಸ್‌ಐ, ಪಿಎಫ್ ಸೌಲಭ್ಯ ಪಡೆಯುತ್ತಿದ್ದಾರೆ. ಸದನಗಳಲ್ಲಿರುವ ಸದಸ್ಯರಿಗೆ ಶಿಕ್ಷಕರ ಸಮಸ್ಯೆ ಮುಖ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಜೀಂ ಪ್ರೇಮ್‌ಜೀ ವಿವಿಯ ಪ್ರಾಧ್ಯಾಪಕ ಪ್ರೊ.ಎ.ನಾರಾಯಣ ಮಾತನಾಡಿ, ಯುಜಿಸಿ ಬದಲಾವಣೆಯಿಂದ ವಿವಿಗಳಲ್ಲಿನ ಶಿಕ್ಷಣ ವ್ಯವಸ್ಥೆ ಬದಲಾವಣೆ ಅಸಾಧ್ಯ. ಪ್ರಸ್ತುತವಿರುವ ವ್ಯವಸ್ಥೆಯನ್ನು ಹಾಗೇ ಸಾಯಲು ಬಿಟ್ಟು ಹೊಸ ವ್ಯವಸ್ಥೆ ನಿರ್ಮಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಚಿಂತನೆ, ಸಂಶೋಧನೆ ಹೆಚ್ಚಾಗಬೇಕು. ಆಗ ಕಾಲಕ್ಕೆ ತಕ್ಕಂತೆ ವ್ಯವಸ್ಥೆಯೂ ಬದಲಾಗುತ್ತದೆ ಎಂದರು.
ಎಸ್‌ಐಒ ರಾಜ್ಯ ಕಾರ್ಯದರ್ಶಿಗಳಾದ ಜೀಶಾನ್‌ ಅಖೀಲ್‌, ಡಾ.ನಸೀಂ ಅಹ್ಮದ್‌ ಮೊದಲಾದವರು ಇದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next