Advertisement

ಪ್ರಸಿದ್ದ ಗರಗ ಮಠದ ಉತ್ತರಾಧಿಕಾರಿ ನೇಮಕ; ಭುಗಿಲೆದ್ದ ವಿವಾದ

09:58 PM Feb 18, 2023 | Team Udayavani |

ಧಾರವಾಡ : ಉತ್ತರ ಕರ್ನಾಟಕದ ಪ್ರಸಿದ್ದ ಮಠಗಳಲ್ಲಿ ಮುಂಚೂಣಿಯಲ್ಲಿ ಇರುವ ಗರಗದ ಮಡಿವಾಳೇಶ್ವರ ಕಲ್ಮಠ ಉತ್ತರಾಧಿಕಾರಿ ನೇಮಕ ಇದೀಗ ವಿವಾದಕ್ಕೆ ಒಳಗಾಗಿದೆ.

Advertisement

ಕಳೆದ ವಾರವಷ್ಟೇ ಮಠದ ಪೀಠಾಧಿಪತಿಯಾಗಿದ್ದ ಚನ್ನಬಸವ ಸ್ವಾಮೀಜಿ ಅವರು ವಯೋಸಹಜ ಕಾಯಿಲೆಗಳಿಂದ ಲಿಂಗೈಕ್ಯರಾಗಿದ್ದರು. ಅಂದೇ ಉತ್ತರಾಧಿಕಾರಿ ನೇಮಕ ಸಹ ಮಾಡಲಾಗಿತ್ತು. ಆದರೆ ಇದೀಗ ಈ ನೇಮಕ ಕುರಿತು ವಿವಾದ ಉಂಟಾಗಿದ್ದು, ಲಿಂಗಾಯತ ಮಠಕ್ಕೆ ಜಂಗಮರ ಪ್ರವೇಶಕ್ಕೆ ಹಾಗೂ ಶಾಸಕರ ಕುಟುಂಬ ಹಸ್ತಕ್ಷೇಪದ ಬಗ್ಗೆ ಬಲವಾದ ಆರೋಪವೇ ಕೇಳಿ ಬಂದಿದೆ.

ಕಲ್ಮಠದ ಶ್ರೀಗಳು ಲಿಂಗೈಕ್ಯರಾದ ದಿನದಿಂದಲೇ ಮಠದಲ್ಲಿ ಉತ್ತರಾಧಿಕಾರಿ ವಿವಾದ ಆರಂಭವಾಗಿದೆ. ಗರಗ ಮಡಿವಾಳೇಶ್ವರ ಮಠ ಮೊದಲಿನಿಂದಲೂ ಲಿಂಗಾಯತ ಸಂಪ್ರದಾಯದಂತೆ ಲಿಂಗಾಯತ ಸ್ವಾಮೀಜಿಗಳನ್ನೇ ಇಲ್ಲಿ ಮಠಾಧಿಶರನ್ನಾಗಿ ಮಾಡುತ್ತಾ ಬರಲಾಗಿದೆ. ಆದರೆ ಈಗ ಈ ಸಂಪ್ರದಾಯ ಗಾಳಿಗೆ ತೂರಿ ಪ್ರಶಾಂತ ದೇವರು ಎಂಬ ಜಂಗಮ ಸಂಪ್ರದಾಯದ ಸ್ವಾಮೀಜಿ ಅವರನ್ನು ಮಠಾಧಿಶರನ್ನಾಗಿ ಮಾಡಲು ಹೊರಟಿದ್ದಾರೆ ಎಂಬ ವಿವಾದ ಎದ್ದಿದೆ.

ಇದಲ್ಲದೇ ಲಿಂಗೈಕ್ಯರಾದ ಚನ್ನಬಸವ ಸ್ವಾಮೀಜಿ ಪ್ರಭುರಾಜೇಂದ್ರ ದೇವರನ್ನ ಉತ್ತರಾಧಿಕಾರಿಯಾಗಿ ನೇಮಿಸಲು ಇಚ್ಛಿಸಿದ್ದರು. ಆದರೆ 2011 ರಲ್ಲಿ ಚನ್ನಬಸವ ಸ್ವಾಮೀಜಿಗಳು ಅನಾರೋಗ್ಯದಿಂದ ಬಳಲುವಾಗ ಪ್ರಭುರಾಜೇಂದ್ರ ಸ್ವಾಮೀಜಿ ಅವರನ್ನು ಬೆಳಗಾವಿಯ ಬೈಲಹೊಂಗಲದ ಹೊಳೆ ಹೊಸೂರು ಮಠಕ್ಕೆ ಕಳಿಸಿಕೊಟ್ಟಿದ್ದಾರೆ. ಇದರ ಲಾಭ ಪಡೆದ ಶಾಸಕ ಅಮೃತ ದೇಸಾಯಿ ಈಗ ಜಂಗಮ ಸ್ವಾಮೀಜಿ ಅವರನ್ನು ತಂದು ಇಲ್ಲಿ ಉತ್ತರಾಧಿಕಾರಿ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿ ಯಾರೇ ಉತ್ತರಾದಿಕಾರಿಯಾಗಿ ಬಂದರೂ ಅವರು ಲಿಂಗಾಯತರೇ ಆಗಿರಬೇಕು, ವಿನಹ ಜಂಗಮರಿಗೆ ನಾವು ಅವಕಾಶ ಕೊಡಲ್ಲ ಎಂಬ ಪಟ್ಟು ಜೋರಾಗಿ ಕೇಳಿ ಬಂದಿದೆ.

ಶಾಸಕರ ಹಸ್ತಕ್ಷೇಪ
ಇನ್ನು ಶಾಸಕ ಅಮೃತ ದೇಸಾಯಿ ಮೇಲೆ ಕೂಡ ಗಂಭೀರ ಆರೋಪವೂ ಎದ್ದಿದೆ. ದೇಸಾಯಿ ಕುಟುಂಬದಿಂದಲೇ ಜಂಗಮ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಹಿಂದಿನ ಚನ್ನಬಸವ ಸ್ವಾಮೀಜಿಯಿಂದ ಸಹಿ ಪಡೆದು ಟ್ರಸ್ಟ ಸದಸ್ಯರ ಬದಲಾವಣೆ ಮಾಡಿ, 9 ಸದಸ್ಯರ ಪೈಕಿ ದೇಸಾಯಿ ಕುಟುಂಬದ 7 ಜನರು ಟ್ರಸ್ಟನಲ್ಲಿ ಸದಸ್ಯತ್ವ ಪಡೆಯಲಾಗಿದೆ ಎಂಬ ಗಂಭೀರ ಆರೋಪವೇ ಬಂದಿದೆ.

Advertisement

ಈ ಹಿಂದೆ ಶಾಸಕ ಅಮೃತ ದೇಸಾಯಿ ತಂದೆ ಎ.ಬಿ.ದೇಸಾಯಿ ಮಾತ್ರ ಮಠದ ಸದಸ್ಯರಾಗಿದ್ದರು. ಆದರೆ ಚನ್ನಬಸವ ಸ್ವಾಮೀಜಿ ಇದ್ದಾಗ ಇದೇ ದೇಸಾಯಿ ಕುಟುಂಬದವರು 7 ಜನ ಸದಸ್ಯರಾಗಿದ್ದಾರೆ. ಇದು ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಗರಗ ಹಾಗೂ ಹಂಗರಕಿ ಗ್ರಾಮದ ಜನರನ್ನು ಸೇರಿಸುವ ಬದಲು ಕುಟುಂಬದವರನ್ನೇ ಸದಸ್ಯರನ್ನಾಗಿಸಿರೋ ಶಾಸಕರು, ಜಂಗಮ ಸ್ವಾಮೀಜಿಗೆ ತಂದಿದ್ದಾರೆ. ಇದಲ್ಲದೇ ದೇಸಾಯಿ ಕುಟುಂಬ ಈ ಮಠಕ್ಕೆ ಕೇವಲ 37 ಗುಂಟೆ ಜಾಗ ಕೊಟ್ಟಿದ್ದಾರೆ, ದೇಶಪಾಂಡೆ ಎಂಬುವವರು 12 ಎಕರೆ ಹಾಗೂ ಲೋಕೂರಿನ ವೀರಭದ್ರ ಎನ್ನುವವರು 4 ಎಕರೆ ಕೊಟ್ಟಿದ್ದಾರೆ. ಅವರನ್ನ ಯಾರನ್ನೂ ಈ ಮಠದಲ್ಲಿ ಸದಸ್ಯರನ್ನಾಗಿ ಮಾಡದೇ ಶಾಸಕರ ಕುಟುಂಬವೇ ಮಠವನ್ನ ಮನೆತನದ ಮಠ ಮಾಡಿಕೊಂಡಿದೆ ಎಂದು ಆರೋಪ ಮಾಡಲಾಗಿದೆ.

ಸದ್ಯ ಫೆಬ್ರವರಿ 22 ಕ್ಕೆ ಮತ್ತೇ ಈ ಮಠದ ಉತ್ತರಾಧಿಕಾರಿ ನೇಮಕ ವಿಚಾರವಾಗಿ ಸಭೆ ನಡಯಲಿದೆ. ಆ ಸಭೆಯಲ್ಲಿ ಉತ್ತರಾಧಿಕಾರಿ ನೇಮಕದ ಬಗ್ಗೆ ಪಂಚಮಸಾಲಿ ಮುಖಂಡರು ಒತ್ತಾಯ ಮಾಡಲಿದ್ದು, ಈಗ ನೇಮಕ ಮಾಡಲು ಕರೆಸಿರುವ ಪ್ರಶಾಂತ ದೇವರಿಗೆ ಮಠದ ಪೀಠ ತಪ್ಪಿಸಲು ಎಲ್ಲ ಪ್ರಯತ್ನ ನಡೆದಿವೆ. ಆ ದಿನ ಈಮಠಕ್ಕೆ ಯಾರು ಉತ್ತರಾಧಿಕಾರಿ ಎಂದು ಗೊತ್ತಾಗಲಿದೆ.

1997 ರಲ್ಲಿ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳಲು ಶ್ರೀಗಳೇ ಕರೆ ತಂದರು. ವಿದ್ಯಾಭ್ಯಾಸ ಕಲಿಸಿದ ಬಳಿಕ 2014 ರಲ್ಲಿ ಬೇರೆ ಕಡೆ ಕಳುಹಿಸಿಕೊಟ್ಟರು. ಆಗಿನಿಂದ ಹೊಳೆಹೊಸೂರಿನಲ್ಲಿ ಉಳಿದುಕೊಂಡಿದ್ದೇನೆ. ಲಿಂಗಾಯತ ಸಂಸ್ಕೃತಿ ಇರುವ ಕಲ್ಮಠಕ್ಕೆವು ಲಿಂಗಾಯತ ಪರಂಪರೆ ಉಳಿಸಿಕೊಳ್ಳಬೇಕು.ಜಂಗಮ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯಾಗಿ ಮಾಡಬಾರದು.
-ಪ್ರಭುರಾಜೇಂದ್ರ ಸ್ವಾಮೀಜಿ,

ಲಿಂಗಾಯತ ಪರಂಪರೆ ಪೀಠ ಕಲ್ಮಠಕ್ಕೆ ಇದ್ದು, ಹೀಗಾಗಿ ಜಂಗಮ ಸ್ವಾಮೀಜಿ ಅವರನ್ನು ನೇಮಕ ಸರಿಯಲ್ಲ. ಲಿಂಗೈಕ್ಯ ಶ್ರೀಗಳೇ ಇಚ್ಛಿಸಿದಂತೆ ಪ್ರಭುರಾಜೇಂದ್ರ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು.
-ಗುರುಸಿದ್ಧ ಸ್ವಾಮೀಜಿ, ರಾಯಭಾಗ

ಶಾಸಕ ಅಮೃತ ದೇಸಾಯಿಯೊಬ್ಬರೇ ಮಠ ಬೆಳೆಸಿಲ್ಲ. ಸಾರ್ವಜನಿಕ ಮಠವನ್ನು ಸ್ವತ ಮಠವನ್ನಾಗಿ ಮಾಡುತ್ತಿರುವ ದೇಸಾಯಿ ಕುಟುಂಬವು ದಬ್ಬಾಳಿಕೆ, ಗೂಂಡಾಗಿರಿ ಮಾಡುತ್ತಿದೆ. ಮಠದ ಟ್ರಸ್ಟ ಕಮಿಟಿಯಲ್ಲಿ ದೇಸಾಯಿ ಕುಟುಂಬವೇ ಬಹುತೇಕ ಇದ್ದು, ಇಡೀ ಮಠವನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡಿರುವುದು ಸರಿಯಲ್ಲ. ಲಿಂಗಾಯತ ಪರಂಪರೆಯ ಮಠಕ್ಕೆ ಲಿಂಗಾಯತರೇ ಉತ್ತರಾಧಿಕಾರಿ ಆಗಬೇಕು.
-ಬಸವರಾಜ್, ಕಲ್ಮಠದ ಭಕ್ತ

Advertisement

Udayavani is now on Telegram. Click here to join our channel and stay updated with the latest news.

Next