Advertisement

ಒಂದೇ ಸಮಿತಿ ಮೂಲಕ ವಿವಿಗಳ ಕುಲಪತಿ ನೇಮಕ

11:04 PM Sep 10, 2019 | Lakshmi GovindaRaju |

ಬೆಂಗಳೂರು: ವಿಶ್ವವಿದ್ಯಾಲಯಗಳ ಕುಲಪತಿ ನೇಮಕಾತಿಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ತರಲು ಶೋಧನಾ ಸಮಿತಿಯ ಬದಲಿಗೆ ಒಂದೇ ಸಮಿತಿ ಮೂಲಕ ಎಲ್ಲ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿ ಪ್ರಕ್ರಿಯೆ ನಡೆಸಲು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್ ನಾರಾಯಣ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿವಿಗಳಲ್ಲಿ ಕುಲಪತಿಗಳ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ, ಗುಣಮಟ್ಟವೂ ಇಲ್ಲ ಎಂಬುದು ತಿಳಿಯುತ್ತಿದೆ. ಪ್ರತಿಯೊಂದು ವಿವಿಗೂ ಪ್ರತ್ಯೇಕ ಶೋಧನಾ ಸಮಿತಿ ರಚನೆ ಮಾಡುವ ಬದಲು ಏಕರೂಪವಾಗಿ ಸಾರ್ವಜನಿಕ ವೇದಿಕೆ ಮೂಲಕ ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಎಲ್ಲ ವಿವಿಗಳ ಕುಲಪತಿಗಳನ್ನು ಒಂದೇ ಸಮಿತಿ ನೇಮಕ ಮಾಡಲು ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸುತ್ತಿದ್ದೇವೆ. ಕುಲಪತಿ ಹುದ್ದೆ ಆಕಾಂಕ್ಷಿಗಳ ವಿರುದ್ಧ ಯಾವುದೇ ದಾಖಲೆ ಸಹಿತ ಆರೋಪಗಳಿದ್ದರೂ ಸಾರ್ವಜನಿಕವಾಗಿ ಸಲ್ಲಿಸಲು ಅವಕಾಶ ಸಿಗುವಂತಾಗಬೇಕು ಎಂದರು.

ಕುಲಪತಿಗಳ ನೇಮಕಾತಿಗೆ ಇರುವ ಶೋಧನಾ ಸಮಿತಿ ಶಿಫಾರಸು ಮಾಡುವ ಮೂವರಲ್ಲಿ ಒಬ್ಬರಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿದ್ದಾರೆ. ಆದರೆ, ಸರಿಯಾದ ಕ್ರಮದಲ್ಲಿ ಕುಲಪತಿಗಳ ನೇಮಕಾತಿ ಮಾಡದಿರುವ ಕಾರಣ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪವಿದೆ. ಕೆಲ ಪ್ರಕರಣಗಳಲ್ಲಿ ಸ್ವಜನ ಪಕ್ಷಪಾತದಿಂದ ಕುಲಪತಿಗಳ ನೇಮಕಾತಿ ನಡೆಸುತ್ತಿದೆ. ಹೀಗಾಗಿ, ತಿದ್ದುಪಡಿ ಅಗತ್ಯವಿದೆ ಎಂದರು.

ಆನ್‌ಲೈನ್‌ ಮೂಲಕ ಪ್ರಾಂಶುಪಾಲರ ನೇಮಕ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇಮಕಾತಿ ಯನ್ನು ಪಾರದರ್ಶಕವಾಗಿ ಆನ್‌ಲೈನ್‌ ಮೂಲಕ ನಡೆಸಲು ತೀರ್ಮಾನಿಸಿದ್ದೇವೆ. ರಾಜ್ಯದ 412 ಪದವಿ ಕಾಲೇಜುಗಳ ಪೈಕಿ 399 ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. ಕಳೆದ ಎರಡು ತಿಂಗಳ ಹಿಂದೆ ಸರ್ಕಾರವು 310 ಪ್ರಾಂಶುಪಾಲರ ನೇಮಕಾತಿಗೆ ಒಪ್ಪಿಗೆ ಸೂಚಿಸಿದೆ. ನೇಮಕಾತಿ ಅಧಿಸೂಚನೆ ಕೂಡ ಹೊರಡಿ ಸಿದೆ. ಯಾರೊಬ್ಬರ ಹಸ್ತಕ್ಷೇಪವಿಲ್ಲದಂತೆ ನೇರ ನೇಮಕಾತಿ ಯನ್ನು ಆನ್‌ಲೈನ್‌ ಮೂಲಕ ಮಾಡಲಾಗುತ್ತದೆ ಎಂದರು.

Advertisement

ಮೆರಿಟ್‌ ಆಧಾರದಲ್ಲಿ 2019-20 ಹಾಗೂ 2020-21ನೇ ಸಾಲಿನಲ್ಲಿ ತಲಾ 155 ಪ್ರಾಂಶುಪಾಲರಂತೆ ಎರಡು ಹಂತದಲ್ಲಿ 310 ಪ್ರಾಂಶುಪಾಲರ ನೇಮಕಾತಿ ಮಾಡಲಾಗುವುದು ಎಂದು ಈ ಹಿಂದಿನ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರಂತೆ ಈಗಾಗಲೇ ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ವಿಶ್ವವಿದ್ಯಾಲಗಳ ಅನುದಾನ ಆಯೋಗ (ಯುಜಿಸಿ) ನಿಯಮಗಳ ಪ್ರಕಾರ ನೇಮಕಾತಿಗೆ ಪಟ್ಟಿ ಸಿದ್ಧ ಮಾಡಲಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭಿಸಿಲ್ಲ. ಕುಲಸಚಿವರ ನೇಮಕಾತಿಯಲ್ಲಿ ತರಬೇಕಾದ ನಿಯಮಗಳ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆಯಿಂದ ಆಗಿರುವ ಸಮಸ್ಯೆ ಮತ್ತು ಹೊಸ ವಿವಿಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಹಾಗೂ ವಿವಿಗಳ ಹಾಸ್ಟೆಲ್‌ ಹೇಗಿದೆ ಎಂಬುದನ್ನು ಖುದ್ದು ಪರಿಶೀಲನೆ ನಡೆಸಿದ್ದೇನೆ ಎಂದರು.

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲ ಬದಲಾವಣೆ ತರಬೇಕಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತಾಂತ್ರಿಕವಾಗಿ ಹಿಂದು ಳಿ ಯಬಾರದು. ತಾಂತ್ರಿಕತೆ ಸಾಕಷ್ಟು ಅಭಿವೃದ್ಧಿಯಾಗಿದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು, ಯಾವುದೇ ರೀತಿಯ ಲ್ಲೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆಯನ್ನು ಸುಧಾರಿ ಸಲು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.

ಗೋಹತ್ಯೆ ನಿಷೇಧ ಜಾರಿ ನಮ್ಮ ಮೊದಲ ಆದ್ಯತೆ
ಬೆಂಗಳೂರು: ಸಂವಿಧಾನದಲ್ಲೇ ಗೋಹತ್ಯೆ ನಿಷೇಧದ ಉಲ್ಲೇಖವಿದೆ. ಹೊಸದಾಗಿ ತರುವುದು ಏನೂ ಇಲ್ಲ. ಈಗಾಗಲೇ ಇರುವುದು ಅನುಷ್ಠಾನವಾಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಯಾವುದಾದರೂ ಅಡೆತಡೆ ಇದ್ದರೆ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು. ಈಗಿರುವ ಕಾನೂನನ್ನು ಜಾರಿಗೊಳಿಸಲು ಮೊದಲಿಗೆ ಆದ್ಯತೆ ನೀಡಲಾಗುವುದು. ಗೋಹತ್ಯೆ ಆಗಬಾರದು ಎಂಬುದು ನಮ್ಮ ಭಾವನೆ- ಚಿಂತನೆ. ಅಗತ್ಯಬಿದ್ದರೆ ಕಾನೂನನ್ನು ಬಲಪಡಿಸಲು ತಿದ್ದುಪಡಿ ತರಲು ಬದ್ಧರಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next