ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಕಟಿಸಿದರು.
ನಗರದ ತಾಜ ಸುಲ್ತಾನಪುರದಲ್ಲಿರುವ ಕೆಎಸ್ಆರ್ ಪಿ 6ನೇ ಪಡೆಯ ಹೆಚ್ಚುವರಿ ತರಬೇತಿ ಶಾಲೆಯ ಆವರಣದಲ್ಲಿ ನಡೆದ ವಿಶೇಷ ಮೀಸಲು ಪೊಲೀಸ್ ಕಾನ್ಸ್ ಟೇಬಲ್ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥ ಸಂಚಲನ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಹಿಂದೆ ಅನೇಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದರೂ ತನಿಖೆ ಮಾಡಿರಲಿಲ್ಲ. ಒಂದು ವೇಳೆ ತನಿಖೆಯಾಗಿದ್ದರೆ ಈ ಪ್ರಕರಣ ನಡೆಯುತ್ತಿರಲಿಲ್ಲ. ಆದರೆ ಈ ವಿಷಯ ಗೊತ್ತಾದ ಎರಡು ಗಂಟೆಯೊಳಗೆ ವಿಶೇಷ ತಂಡ ರಚಿಸಿ ತನಿಖೆಗೆ ನಿರ್ದೇಶಿಸುವ ಮುಖಾಂತರ ಸರ್ಕಾರ ಬದ್ದತೆ ತೋರಿದೆ. ಇಲ್ಲಿಯವರೆಗೆ 48 ಜನರನ್ನು ಬಂಧಿಸಲಾಗಿದೆ. ತನಿಖೆಯು ಆಳವಾಗಿ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ನಿಶ್ಚಿತ ಎಂದರು.
ಇದನ್ನೂ ಓದಿ:ರಾಜಕಾರಣಿಗಳ ಪರಿಚಯವಿದೆ ಎಂದು ನಂಬಿಸಿ 36 ಲಕ್ಷ ರೂ. ಪಂಗನಾಮ ಹಾಕಿದ ಮಹಿಳೆ
ಪೊಲೀಸ್ ಇಲಾಖೆ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಠಾಣೆಗಳ ಅಭಿವೃದ್ಧಿ ಗೆ 200 ಕೋ ರೂ ಬಿಡುಗಡೆ ಮಾಡಲಾಗಿದೆ. ಸೈಬರ ಕ್ರೈಂ ಗಟ್ಟಿಗೊಳಿಸಲಾಗುತ್ತಿದೆ 400 ವಿಧಿ ವಿಜ್ಞಾನ ತಜ್ಞ ರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ಪ್ರಕಟಿಸಿದರು.
ಅಡ್ಡ ದಾರಿ ಹಿಡಿಯಬೇಡಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಅಪರ ಪೊಲೀಸ್ ಮಹಾ ನಿರ್ದೇಶಕ ಅಲೋಕ ಕುಮಾರ್ ಮಾತನಾಡಿ, ಪರಿಶ್ರಮದಿಂದ ಇಲಾಖೆಗೆ ಸೇರ್ಪಡೆಯಾಗಿದ್ದೀರಿ, ಹೀಗಾಗಿ ಮನಸ್ಸು ಹಾಗೂ ದೈಹಿಕವಾಗಿ ಎರಡು ವಿಧದಿಂದ ಗಟ್ಟಿಯಾಗಿ ಸೇವೆ ಸಲ್ಲಿಸಬೇಕು. ಪ್ರಮುಖವಾಗಿ ಯಾವುದೇ ಸಂದರ್ಭದಲ್ಲಿ ಅಡ್ಡದಾರಿ ಹಿಡಿಯಬೇಡಿ. ಅಡ್ಡ ದಾರಿ ಹಿಡಿದರೆ ವೈಯಕ್ತಿಕವಲ್ಲದೇ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕೆಟ್ಟು ಹೆಸರು ತರಲು ನಾಂದಿ ಹಾಡಿದಂತಾಗಿದೆ ಎಂದು ಕಿವಿ ಮಾತು ಹೇಳಿದರು.