ಮಂಡ್ಯ: ಪಾಂಡವಪುರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿಯಂತ್ರಿಸುವ ಉದ್ದೇಶದಿಂದ ಕೆಆರ್‌ಎಸ್ ಬಳಿ ಖನಿಜ ತನಿಖಾ ಠಾಣೆ ಸ್ಥಾಪಿಸಲಾಗಿದ್ದು, ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿದಿನ ಮೂವರು ನೋಡಲ್ ಅಧಿಕಾರಿಗಳು ಪಾಳೀಯ ಆಧಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಪಾಂಡವಪುರ ವ್ಯಾಪ್ತಿಯ ಬೇಬಿಬೆಟ್ಟ ಸೇರಿದಂತೆ ವಿವಿಧೆಡೆ ಅಕ್ರಮಗಳ ಗಣಿಗಾರಿಕೆಯು ನಿಷೇಧದ ನಡುವೆಯೂ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವುದರಿಂದ ಜಿಲ್ಲಾಡಳಿತದಿಂದಕಟ್ಟೆಚ್ಚರ ವಹಿಸಲಾಗಿದೆ.
ಅಧಿಕಾರಿಗಳ ತಂಡ ರಚನೆ: ಬೇಬಿಬೆಟ್ಟ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ, ಗಣಿ ಸಾಮಗ್ರಿಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಾಗುತ್ತಿವೆ. ಇದು ರಾಜ್ಯಮಟ್ಟದಲ್ಲಿ ಚರ್ಚಿತ ವಿಷಯವಾಗಿದೆ. ಆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ತೆರೆದು ತಾಲೂಕು ಪಂಚಾಯಿತಿ, ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನೊಳಗೊಂಡ 30 ಅಧಿಕಾರಿಗಳ ತಂಡವನ್ನು ರಚಿಸಿ ಗಸ್ತಿಗೆ ನಿಯೋಜಿಸಲಾಗಿದೆ. ಇವರ ಜೊತೆಗೆ ಪೊಲೀಸರ ತಂಡ ಕಾರ್ಯನಿರ್ವಹಿಸಲಿದೆ.
ನಿತ್ಯ ಅಧಿಕಾರಿಗಳಿಂದ ಗಸ್ತು: ಪ್ರತಿದಿನ ನಿಗದಿತ ಮೂವರು ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ಹಾಗೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಚೆಕ್‌ಪೋಸ್ಟ್‌ಗಳಲ್ಲಿ ಗಸ್ತು ತಿರುಗ ಬೇಕು. ಅನಧಿಕೃತವಾಗಿ ಗಣಿಗಾರಿಕೆ, ಕಲ್ಲು ಸೇರಿದಂತೆ ಗಣಿ ಸಾಮಗ್ರಿಗಳು ಸಾಗಿಸುವ ವಾಹನಗಳನ್ನು ತಡೆ ಹಿಡಿದು ವಾಹನಗಳನ್ನು ವಶಕ್ಕೆ ಪಡೆಯಬೇಕು. ಚೆಕ್ ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ ವರದಿಯನ್ನು ಜಿಲ್ಲಾ ಟಾಸ್ಕ್ಫೋರ್ಸ್ (ಗಣಿ) ಸಮಿತಿಯ ಸದಸ್ಯ ಕಾರ್ಯ ದರ್ಶಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗೆ ವರದಿ ನೀಡಬೇಕು. ತಪ್ಪಿದಲ್ಲಿ ಸಂಬಂಧಿಸಿದವರನ್ನೇ ನೇರ ಹೊಣೆಗಾರರನ್ನಾಗಿ ಮಾಡ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಉದಯವಾಣಿಗೆ ತಿಳಿಸಿದರು.
ಅಕ್ರಮ ತಡೆಗೆ ಕ್ರಮ: ಈಗಾಗಲೇ ಅಕ್ರಮ ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಗಣಿ ಪ್ರದೇಶಗಳಿಗೆ ತೆರಳದಂತೆ ಸಂಪರ್ಕಿಸುವ ಮಾರ್ಗದ ರಸ್ತೆಗಳಿಗೆ ಅಡ್ಡಲಾಗಿ ಗುಂಡಿ ತೆಗೆಸಿ, ಕ್ರಮ ಕೈಗೊಳ್ಳಲಾ ಗಿದೆ. ಆದರೂ, ಕೆಲವು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಆಧಾರದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪುಷ್ಪಾ ನೇತೃತ್ವದ ತಂಡದಲ್ಲಿ ರಾತ್ರಿಯೇ ದಾಳಿ ಅಕ್ರಮ ಗಣಿಗಾರಿಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಆಯಾ ಗಣಿ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿತ್ತು. ಭಾರೀ ಸ್ಫೋಟದ ಸದ್ದು: ಇದಕ್ಕೂ ಮೊದಲು ಕಳೆದ 2018 ಹಾಗೂ 2019ರಲ್ಲೂ ಕೆಆರ್‌ಎಸ್ ಸುತ್ತಮುತ್ತ ಭಾರೀ ಸ್ಫೋಟದ ಸದ್ದು ಕೇಳಿ ಬಂದಿತ್ತು. ಕಂಪನದ ತೀವ್ರತೆ ಕೆಆರ್‌ಎಸ್ ಜಲಾ ಶಯದ ಬಳಿ ಇರುವ ಮಾಪಕದಲ್ಲಿ ದಾಖಲಾಗಿತ್ತು. ಇದರ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ಕೆಆರ್ ಎಸ್ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಸದಂತೆ ವರದಿ ನೀಡಿತ್ತು. ಇದರ ಆಧಾರದ ಮೇಲೆ ಗಣಿಗಾರಿಕೆ ನಿಷೇಧ ಹೇರಲಾಗಿತ್ತು. ನಂತರ ಗಣಿ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ನ್ಯಾಯಾಲಯವು ಪರಿಶೀಲಿಸಿ ಕ್ರಷರ್‌ಗಳಿಗೆ ಮಾತ್ರ ಅನುಮತಿ ನೀಡಿತ್ತು.
ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಗಣಿ ವಸ್ತುಗಳನ್ನು ಸಾಗಣೆ ಮಾಡದಂತೆ ಕಟ್ಟೆಚ್ಚರ ವಹಿಸಲು ಪಾಳೀಯ ಆಧಾರದ ಮೇಲೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿದಿನ ಮೂವರು ನೋಡಲ್ ಅಧಿಕಾರಿಗಳು ಗಸ್ತು ನಡೆಸಲಿದ್ದಾರೆ. ಇವರ ಜೊತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ
–ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ, ಮಂಡ್ಯ