Advertisement

ಅತಿಥಿ ಉಪನ್ಯಾಸಕರ ನೇಮಕ: ಸೂಚನೆ

12:20 AM Feb 01, 2023 | Team Udayavani |

ಬೆಂಗಳೂರು: ರಾಜ್ಯದ ಸರರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್‌, ಅತಿಥಿ ಉಪನ್ಯಾಸಕರ ಮುಂದಿನ ನೇಮಕಾತಿಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿರುವ ಕನಿಷ್ಠ ಶೈಕ್ಷಣಿಕ ಅರ್ಹತೆ ಸೇರಿದಂತೆ ಎಲ್ಲ ನಿಯಮಾವಳಿಗಳನ್ನು ಪರಿಗಣಿಸಿಯೇ ನೇಮಕ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದೆ.

Advertisement

ಈ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆ.ವಿ. ರಂಜಿತ್‌ ನಾಯಕ್‌ ಮತ್ತಿತರ 50ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ 2022ರ ಜನ‌ರಿಯಲ್ಲಿ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರಕಾರ ಯುಜಿಸಿ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಹೊಂದಿರದ ಅಭ್ಯರ್ಥಿಗಳೂ ಸಹ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ, ನೇಮಕವಾದ ಮೂರು ವರ್ಷದೊಳಗೆ ಯುಜಿಸಿ ನಿಗದಿಪಡಿಸಿದ ಅರ್ಹತೆಗಳನ್ನು ಹೊಂದಬೇಕು ಎಂದು ಹೇಳಿತ್ತು. ಅಲ್ಲದೇ ಅಭ್ಯರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಹಾಲಿ ನಡೆದಿರುವ ನೇಮಕಗಳಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿತು. ಅಲ್ಲದೆ, ಮುಂದಿನ ನೇಮಕಾತಿಗೆ ವೇಳೆ ಯುಜಿಸಿಯ ನಿಯಮ ಪರಿಗಣಿಸಲು ಸರಕಾರಕ್ಕೆ ನಿರ್ದೇಶನ ನೀಡಿ ಅರ್ಜಿಗಳನ್ನು ವಿಲೇವಾರಿ ಮಾಡಿತು.

ಅತಿಥಿ ಉಪನ್ಯಾಸಕರಿಗೆ ಅವರು ಸಲ್ಲಿಸಿರುವ ವರ್ಷಗಳ ಸೇವೆಗೆ ಅನುಗುಣವಾಗಿ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳ ಕೃಪಾಂಕ ನೀಡಿಕೆ ಸಮಂಜಸವಾಗಿದೆ. ಈ ಕುರಿತು 2022ರ ಜನವರಿಯಲ್ಲಿ ಸರಕಾರ ಹೊರಡಿಸಿರುವ ಆದೇಶ ಸರಿ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

ಅತಿಥಿ ಉಪನ್ಯಾಸಕರು ಯುಜಿಸಿ ನಿಯಮದಂತೆ ಕನಿಷ್ಠ ವಿದ್ಯಾರ್ಹತೆ ಹೊಂದಬೇಕು, ಆದರೆ ಸರಕಾರ ಆ ನಿಯಮಗಳನ್ನು ಪಾಲಿಸದೆ ವಿದ್ಯಾರ್ಹತೆ ಹೊಂದಲು ನೇಮಕಗೊಂಡ ಮೂರು ವರ್ಷಗಳವರೆಗೆ ಕಾಲಾವಕಾಶ ನೀಡಿದೆ ಮತ್ತು ಕೃಪಾಂಕ ನೀಡಿಕೆ ಕ್ರಮ ಸರಿಯಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಯುಜಿಸಿ ಪರ ವಕೀಲರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next