ಬೆಂಗಳೂರು: ಖಾಲಿ ಇರುವ ಉಪ ಲೋಕಾಯುಕ್ತರ ಒಂದು ಹುದ್ದೆಯನ್ನು ಆದಷ್ಟು ಬೇಗ ಭರ್ತಿ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾ| ಆಲೋಕ್ ಆರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಸ್.ವಿಶ್ವನಾಥ್ ಶೆಟ್ಟಿ ಅವರು 2022ರ ಜನವರಿ ಕೊನೆಯ ವಾರದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಈ ಹುದ್ದೆಗೆ ಉಪ ಲೋಕಾಯುಕ್ತ-1 ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ 2022ರ ಜೂ.14ರಿಂದ ಉಪ ಲೋಕಾಯುಕ್ತ-1 ಹುದ್ದೆ ಖಾಲಿಯಿದ್ದು, ಅದನ್ನು ಭರ್ತಿ ಮಾಡುವಂತೆ ಕೋರಿ 2022ರ ಜೂ.23ರಂದು ಅರ್ಜಿದಾರರು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಉಪ ಲೋಕಾಯುಕ್ತ-1ಹುದ್ದೆಯ ನೇಮಕ ಪ್ರಕ್ರಿಯೆಯನ್ನು ಆರಂಭಿಸಿ ತುರ್ತಾಗಿ ಅಂತಿಮಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.