Advertisement

ಗುತ್ತಿಗೆ ನೌಕರರ ನೇಮಕ; ಅಕ್ರಮ ತನಿಖ

04:10 PM Sep 23, 2018 | Team Udayavani |

ಬೀದರ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ “ಡಿ’ ಗ್ರೂಪ್‌ ನೌಕರರ ಕುರಿತು ತನಿಖೆ ನಡೆಸಿ, ಸರ್ಕಾರದ ನಿಯಮ ಮೀರಿ ನೇಮಕಗೊಂಡಿದ್ದರೆ ಅಂತವರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮುಂದುವರಿದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, “ಡಿ’ ಗ್ರೂಪ್‌ ನೌಕರರ ನೇಮಕ ಕುರಿತು ಸರ್ಕಾರದ ಮಾರ್ಗಸೂಚಿಗಳು ಇವೆ. ಅವುಗಳ ಪ್ರಕಾರವೆ ನೇಮಕಾತಿ ನಡೆಯಬೇಕು. ಆದರೆ, ಇಲ್ಲಿ ನೇಮಕಾತಿಯಲ್ಲಿ ಅವ್ಯವಹಾರದ ಆರೋಪಗಳ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 
ಆರೋಗ್ಯ ಇಲಾಖೆ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಜಿಪಂ ಸದಸ್ಯ ಆನಂದ ಪಾಟೀಲ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್‌ ನೌಕರರ ನೇಮಕದಲ್ಲಿ ಅವ್ಯವಹಾರ ನಡೆದ್ದು, ಕೂಡಲೆ ನೇಮಕಾತಿ ರದ್ದುಗೊಳಿಸುವಂತೆ ಎರಡು ಸಭೆಗಳಲ್ಲಿ ನಡವಳಿಕೆ ಬರೆದರೂ ಕೂಡ ಯಾವುದೇ ಕ್ರಮ ಇಂದಿಗೂ ಆಗಿಲ್ಲ. ಅಲ್ಲದೆ, ನೌಕರರ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಇವರ ಮಾತಿಗೆ ಇತರೆ ಸದಸ್ಯರು ಕೂಡ ಧ್ವನಿಗೂಡಿಸಿದರು. ಈ ಕುರಿತು ಆರೋಗ್ಯಾಧಿಕಾರಿ ಡಾ| ಎಂ.ಎ. ಜಬ್ಟಾರ ಮಾತನಾಡಿ, ಜಿಲ್ಲೆಯಲ್ಲಿ ಖಾಲಿ ಇರುವ 109 “ಡಿ’ ಗ್ರೂಪ್‌ ನೌಕರರ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ನೇತೃತ್ವದಲ್ಲಿಯೆ ಹುದ್ದೆಗಳ ಭರ್ತಿ ಕಾರ್ಯಗಳು ನಡೆದಿವೆ. ಸರ್ಕಾರ ನಿಯಮಗಳನ್ನು ಪಾಲಿಸಿಕೊಂಡೆ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ವಿವರಣೆ ನೀಡಿದರು. ಈ ಮಧ್ಯದಲ್ಲಿ ಸದಸ್ಯರು ಮಾತನಾಡಿ, ಜಿಲ್ಲೆಯಲ್ಲಿ ಅಥಿತಿ ಶಿಕ್ಷಕರಿಗೆ ಏಳು ಸಾವಿರ ರೂ. ಸಂಬಳ ನೀಡಲಾಗುತ್ತಿದೆ. ಆದರೆ, “ಡಿ’ ಗ್ರೂಪ್‌ ನೌಕರರಿಗೆ 14 ಸಾವಿರ ಸಂಬಳ ನೀಡಲಾಗುತ್ತಿದೆ. 

ಯಾಕೆ ಅಥಿತಿ ಶಿಕ್ಷಕರಿಗೆ ಕಡಿಮೆ ಸಂಬಳ ನೀಡುತ್ತಿರಿ ಎಂದು, ಅವರಿಗೂ ಹೆಚ್ಚು ಸಂಬಳ ನೀಡುವಂತೆ ಒತ್ತಾಯಿಸಿದರು. 
ಬಿಆರ್‌ಜಿಎಫ್‌ ಯೋಜನೆಯಡಿ 1.21 ಕೋಟಿ ಅನುದಾನ ಇದ್ದು, ಪ್ರತಿ ಸದಸ್ಯರಿಗೆ ಸಮನಾಗಿ ಹಂಚಿಕೆ ಮಾಡಬೇಕು ಎಂದು ಜಿಪಂ ಸದಸ್ಯ ಬುಳ್ಳಾ ಆಗ್ರಹಿಸಿದರು. ಆದರೆ, ಜಿಪಂ ಡಿಎಸ್‌ ಮಾತನಾಡಿ, ಬಿಆರ್‌ಜಿಎಫ್‌ ಅನುದಾನ ಬಳಸುವ ಮುನ್ನ ಕ್ರಿಯಾ ಯೋಜನೆ ತಯಾರಿಸಿ ಸಮಿತಿಯಲ್ಲಿ ಅನುಮೋದನೆ ಪಡೆಯಬೇಕು ಎಂದು ವಿವರಿಸಿದರು. ಇದಕ್ಕೆ
ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಜಿಲ್ಲಾ ಪಂಚಾಯತ ಅನುದಾನ ಜಿಲ್ಲಾ ಪಂಚಾಯತ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲು ಯಾಕೆ ಅನುಮೋದನೆ ಬೇಕು ಎಂದು ಪ್ರಶ್ನಿಸಿದರು. 

ಅಲ್ಲದೆ, ಸದ್ಯ 1.21 ಕೋಟಿ ಅನುದಾನದಲ್ಲಿ ಈಗಾಗಲೇ ಹಣ ಖರ್ಚು ಮಾಡಲಾಗಿದ್ದು, ಯಾರ ಅನುಮೋದನೆ ಆಧಾರದಲ್ಲಿ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗೆ ಪ್ರಶ್ನಿಸಿದರು. ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿ ಮೌನಕ್ಕೆ ಶರಣಾದರು. ಈ ಹಿನ್ನೆಲೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಈ ಮಧ್ಯದಲ್ಲಿ ಜಿಪಂ ಸಿಇಒ ಮಾತನಾಡಿ, ಈ ಕುರಿತು ಪರಿಶೀಲಿಸಿ ಮುಂದಿನ ಕೆಲ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ವಿವಿಧ ಕಾಮಗಾರಿ: ಸಿರಗುಪ್ಪ ಗ್ರಾಮದಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣವಾಗದೆ ಅನುದಾನ ಖರ್ಚು ಮಾಡಲಾಗಿದೆ. ಅಲ್ಲದೆ, ಹೆಚ್ಚು ಪ್ರಮಾಣದ ಅನುದಾನ ಖರ್ಚು ಮಾಡಲಾಗಿದೆ ಎಂದು ಜಿಪಂ ಸದಸ್ಯರು ಆರೋಪಿಸಿದರು. ಯಾವಾಗ ಕಾಮಗಾರಿ ಪ್ರಾರಂಭಗೊಂಡಿತ್ತು. ಎಷ್ಟು ಮೊತ್ತಕೆ ಟೆಂಡರ್‌ ಕರೆಯಲಾಗಿತ್ತು ಎಂದು ಮಾಹಿತಿ ಕೂಡ ಕೇಳಿದರು.
ಆದರೆ, ಸಭೆಯಲ್ಲಿದ್ದ ಅಧಿ ಕಾರಿಗಳು ಪೂರ್ಣ ಮಾಹಿತಿ ನೀಡುವಲ್ಲಿ ವಿಫಲವಾದರು. ಇದಕ್ಕೆ ಸಿಟ್ಟಾದ ಸದಸ್ಯರು ಸಭೆಗೆ ಬರುವಾಗ ಮಾಹಿತಿ ಇಲ್ಲದೆ ಯಾಕೆ ಬರುತ್ತಿರಿ ಎಂದು ಪ್ರಶ್ನಿಸಿದರು. 

Advertisement

ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ್‌, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next