Advertisement

ಬೆಳವಣಿಗೆ ಆಧರಿಸಿ ಪೌರ ಕಾರ್ಮಿಕರ ನೇಮಕ

04:36 PM Sep 24, 2018 | |

ದಾವಣಗೆರೆ: ಮಹಾನಗರ ಪಾಲಿಕೆಯಾಗಿ ಬೆಳೆಯುತ್ತಿರುವ ದಾವಣಗೆರೆಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ
ಪೌರ ಕಾರ್ಮಿಕರ ನೇಮಕ ಆಗಬೇಕಿದೆ. ಸರ್ಕಾರ ಪೌರ ಕಾರ್ಮಿಕರ ನೇಮಕ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಭಾನುವಾರ ರೇಣುಕ ಮಂದಿರದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿದ
ಅವರು, ನನಗೆ 88 ವರ್ಷ. ನನಗೆ ಗೊತ್ತಿರುವಂತೆ 70 ವರ್ಷಗಳ ಹಿಂದೆಗೂ ಈಗ ಪೌರ ಕಾರ್ಮಿಕರ ಸ್ಥಿತಿಗತಿ ಸುಧಾರಣೆ ಕಾಣುತ್ತಿದೆ. ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ ಎಂದರು. 

ಸರ್ಕಾರ ಒದಗಿಸುತ್ತಿರುವ ಹಲವಾರು ಸೌಲಭ್ಯದ ಪರಿಣಾಮ ಪೌರ ಕಾರ್ಮಿಕರ ಸ್ಥಿತಿಗತಿ ಸುಧಾರಣೆ ಕಾಣುತ್ತಿದೆ.
ಕೆಲವಾರು ದಶಕಗಳ ಹಿಂದೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಸ್ವತ್ಛತಾ ಕೆಲಸ ಮಾಡುತ್ತಿದ್ದರು. ಯಾರಾದರೂ ಗಣ್ಯರು ಬಂದರೆ ದೂರ ಸರಿದು ನಿಲ್ಲಬೇಕಾಗುತ್ತಿತ್ತು. ಪೌರ ಕಾರ್ಮಿಕರು ಸಹ ಮನುಷ್ಯರು.

ಅವರು ಮಾಡುತ್ತಿರುವ ಕೆಲಸ ಎಲ್ಲಾ ಕೆಲಸಕ್ಕಿಂತಲೂ ದೊಡ್ಡದು ಎಂದು ಅರಿತುಕೊಂಡಿರುವ ಸರ್ಕಾರಗಳು ಪೌರ
ಕಾರ್ಮಿಕರಿಗೆ ಮಾಸ್ಕ್, ಕೈಗವಸು, ಶೂ, ರಬ್ಬರ್‌ ಸಾಕ್ಸ್‌ ಇತರೆ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಸಾಕಷ್ಟು
ಮುತುವರ್ಜಿ ವಹಿಸುತ್ತಿದೆ. ಪೌರ ಕಾರ್ಮಿಕರು ತಮ್ಮ ಕೆಲಸದ ಜವಾಬ್ದಾರಿ ಅರಿತು ನಗರದ ಸ್ವತ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ಸರ್ಕಾರಗಳು ಪೌರ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಜೊತೆಗೆ ಸಂಬಳ ಹೆಚ್ಚಿಸುತ್ತಿದೆ. ಹಿಂದೆ ಪೌರ ಕಾರ್ಮಿಕರು
ಮಹಾ ಎಂದರೆ 600 ರೂಪಾಯಿ ಸಂಬಳ ತೆಗೆದುಕೊಳ್ಳುವ ಕಾಲ ಇತ್ತು. ಈಗ 16 ರಿಂದ 18 ಸಾವಿರದವರೆಗೆ ಸಂಬಳ
ಪಡೆಯುವವರು ಇದ್ದಾರೆ. ಪ್ರತಿ ವರ್ಷ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೊಡುಗೆ ಕೊಡುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

Advertisement

ಈ ಹಿಂದೆ ತಲೆ ಮೇಲೆ ಮಲ ಹೊರುವ ಪದ್ಧತಿ ಇತ್ತು. ನಮ್ಮ ಹರಿಹರದವರೇ ಆದ ಬಿ. ಬಸವಲಿಂಗಪ್ಪನವರು ಪೌರಾಡಳಿತ
ಇಲಾಖೆ ಸಚಿವರಾಗಿದ್ದಾಗ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಮಾಡಿದ್ದರು. ಅದನ್ನು ಕಂಡಂತಹ ದೇಶದ ಇತರೆ ರಾಜ್ಯಗಳಲ್ಲೂ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಜಾರಿಗೆ ಬಂದಿತು. ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಜಾರಿಗೆ ದೇಶದ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳಾಡಿದ ಉಪ ಆಯುಕ್ತ(ಆಡಳಿತ) ಮಹೇಂದ್ರಕುಮಾರ್‌, ಪೌರ ಕಾರ್ಮಿಕರು ಸ್ವತ್ಛತೆಯಂತಹ
ಅತ್ಯಂತ ಮಹತ್ತರ ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರು ಇಲ್ಲದೇ ಇರುವುದನ್ನು ಊಹಿಸಿಕೊಳ್ಳಲಿಕ್ಕೂ ಸಾಧ್ಯವೇ ಇಲ್ಲ. ಅಂತಹ ಜವಾಬ್ದಾರಿಯುತ ಕೆಲಸ ಮಾಡುತ್ತಿರುವ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಾದ ಪೌರ ಕಾರ್ಮಿಕರು ಸ್ವಾಭಿಮಾನಿ ಜೀವನ ನಡೆಸುವಂತಾಗಬೇಕು ಎಂದು ಐ.ಪಿ.ಡಿ. ಸಾಲಪ್ಪನವರ್‌ ವರದಿ ಅನ್ವಯ ಪೌರ ಕಾರ್ಮಿಕರ ಬದುಕು ಹಸನುಗೊಳಿಸುವ
ನಿಟ್ಟಿನಲ್ಲಿ ಸರ್ಕಾರ ಗೃಹಭಾಗ್ಯ, ಜೀವವಿಮೆ, ಮಾಸ್ಟರ್‌, ಜನರಲ್‌ ಆರೋಗ್ಯ ತಪಾಸಣೆ, ಹೊರ ಗುತ್ತಿಗೆ ಪೌರ ಕಾರ್ಮಿಕರ ಖಾತೆಗೆ ನೇರ ವೇತನ ಜಮಾವಣೆ ಒಳಗೊಂಡಂತೆ ಹಲವಾರು ಕಲ್ಯಾಣ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌. ತಿಪ್ಪಣ್ಣ,
ಸದಸ್ಯರಾದ ದಿನೇಶ್‌ ಕೆ. ಶೆಟ್ಟಿ, ಎಂ. ಹಾಲೇಶ್‌, ಎಲ್‌.ಎಂ. ಹನುಮಂತಪ್ಪ, ಬಿ. ನೀಲಗಿರಿಯಪ್ಪ, ಎಲ್‌.ಡಿ. ಗೋಣೆಪ್ಪ,
ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ಉಪ ಆಯುಕ್ತರಾದ ರವೀಂದ್ರ ಬಿ. ಮಲ್ಲಾಪುರ, ಎಂ. ಸತೀಶ್‌, ಎಸ್‌.ಎಸ್‌.
ಬಿರಾದಾರ್‌, ಇಸ್ಮಾಯಿಲ್‌, ಕೆ.ಎಸ್‌. ಗೋವಿಂದರಾಜ್‌ ಇತರರು ಇದ್ದರು. ವೇದಿಕೆ ಕಾರ್ಯಕ್ರಮದ ಮುನ್ನ ಮೆರವಣಿಗೆ
ನಡೆಯಿತು. ಉತ್ತಮ ಪೌರ ಕಾರ್ಮಿಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೌರ ಕಾರ್ಮಿಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಜಿ.ವಿ. ವಿಕಾಸ್‌ ನಾಡಗೀತೆ ಹಾಡಿದರು. ಬಿ.ಎಸ್‌. ವೆಂಕಟೇಶ್‌ ಸ್ವಾಗತಿಸಿದರು. ನಾಗರಾಜ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next