ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ 8 ಮಂದಿ ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾ. ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ವಕೀಲರಾದ ಸವಣೂರು ವಿಶ್ವನಾಥ ಶೆಟ್ಟಿ, ಸಿಂಗಾಪುರಂ ರಾಘವಚಾರ್ ಕೃಷ್ಣ ಕುಮಾರ್, ಮರಳೂರು ಇಂದರಕುಮಾರ್ ಅರುಣ್, ಮೊಹಮ್ಮದ್ ಗೌಸ್ ಶುಕೂರೆ ಕಮಾಲ್,
ಅಶೋಕ್ ಸುಭಾಷ್‌ಚಂದ್ರ ಕಿಣಗಿ, ಗೋವಿಂದರಾಜ್ ಸೂರಜ್, ಎನಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್, ಸಚಿನ್ ಶಂಕರ್ ಮಗದುಂ ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ನಿರ್ಧರಿಸಿದೆ.
ಕರ್ನಾಟಕ ಹೈಕೋರ್ಟ್‌ನ ಪ್ರಸ್ತಾವನೆಯಂತೆ ಕೊಲಿಜಿಯಂ ಈ ತೀರ್ಮಾನ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಲಿದೆ. ಬಳಿಕ ರಾಷ್ಟ್ರಪತಿಗಳಿಂದ ಆದೇಶ ಹೊರಬೀಳಲಿದೆ. ಕರ್ನಾಟಕ ಹೈಕೋರ್ಟ್ ಕೊಲಿಜಿಯಂ 2018ರಲ್ಲಿ 9 ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸು ಕಳಿಸಿಕೊಟ್ಟಿತ್ತು.
ಆ ಪೈಕಿ 8 ಮಂದಿಯ ನೇಮಕಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಆದರೆ ವಕೀಲೆ ಬಿ.ವಿ. ವಿದ್ಯುಲ್ಲತಾ ಅವರ ನೇಮಕ ಪ್ರಸ್ತಾವವನ್ನು ರಾಜ್ಯ ಹೈಕೋರ್ಟ್‌ಗೆ ಮತ್ತೆ ವಾಪಸ್ ಕಳುಹಿಸಲು ನಿರ್ಧರಿಸಿದೆ.
ಕರ್ನಾಟಕ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಆ ಪೈಕಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸೇರಿ ಸದ್ಯ 31 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ 8 ಮಂದಿ ನೇಮಕವಾದರೆ ನ್ಯಾಯಮೂರ್ತಿಗಳ ಸಂಖ್ಯೆ 39ಕ್ಕೆ ಏರಿಕೆಯಾಗಲಿದೆ.