ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಬಿಸಿ ಅಥವಾ ಎಸ್‌ಸಿ/ಎಸ್‌ಟಿ ನಾಯಕರನ್ನು ನೇಮಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರನ್ನು ಕೇಳಿಕೊಂಡಿದ್ದಾರೆ.
ಈ ನಡುವೆ ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬಿಡದಂತೆ ಒತ್ತಾಯಿಸುವುದನ್ನು ಮುಂದುವರಿಸಿದ್ದಾರೆ; ಆದರೂ ರಾಹುಲ್ ಯಾವುದೇ ಒತ್ತಡಕ್ಕೆ ತಾನು ಮಣಿಯುವುದಿಲ್ಲ; ಅಧ್ಯಕ್ಷ ಪದಕ್ಕೆ ತನ್ನ ರಾಜೀನಾಮೆ ನಿಲುವು ಅಚಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಷ್ಟೇ ಮುಗಿದಿರುವ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದು ಅತ್ಯಂತ ದಯನೀಯ ನಿರ್ವಹಣೆಯನ್ನು ತೋರಿದ್ದು ಇದರ ಪೂರ್ತಿ ಹೊಣೆಯನ್ನು ತಾನೇ ವಹಿಸಿಕೊಂಡು ಪಕ್ಷದ ಅಧ್ಯಕ್ಷ ಪದಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ರಾಹುಲ್ ಹೇಳಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಮಾವಶೇಷವಾಗಿದೆ.
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ನಾಯಕರಾದ ಲಾಲು ಪ್ರಸಾದ್ ಯಾದವ್, ಎಂ ಕೆ ಸ್ಟಾಲಿನ್, ಎಚ್ ಡಿ ಕುಮಾರಸ್ವಾಮಿ, ಶೀಲಾ ದೀಕ್ಷಿತ್ ಮುಂತಾಗಿ ಅನೇಕರು ರಾಹುಲ್ ಗಾಂಧಿಗೆ ಪಕ್ಷಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯವಂತೆ ಕೋರಿದ್ದಾರೆ.