ಹೊಸದಿಲ್ಲಿ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಒಂದು ವಾರದೊಳಗೆ ಮಹಾ ನಿರ್ದೇಶಕರನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಾಕೀತು ಮಾಡಿದೆ.
ಅಂತೆಯೇ ನಾಲ್ಕು ವಾರಗಳ ಒಳಗೆ ಆಯೋಗಕ್ಕೆ ಸದಸ್ಯರನ್ನು ನೇಮಿಸಬೇಕು ಎಂದು ವರಿಷ್ಠ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಪೀಠವು ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ.
“ಈ ಸಂಬಂಧವಾಗಿ ನಾವು ವಿಚಾರಣೆಯನ್ನು ಆರಂಭಿಸಿ ಆದೇಶ ಹೊರಡಿಸಿದೆವೆಂದರೆ ನೀವು ತೊಂದರೆಗೆ ಸಿಲುಕಿಕೊಳ್ಳುತ್ತೀರಿ. ಆದುದರಿಂದ ನಾಲ್ಕು ವಾರಗಳ ಒಳಗೆ ನೀವು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನು ನೇಮಿಸುವಿರೆಂದು ನಾವು ಹಾರೈಸುತ್ತೇವೆ ಮತ್ತು ನಿರೀಕ್ಷಿಸುತ್ತೇವೆ’ ಎಂದು ಪೀಠವು ಸರಕಾರಕ್ಕೆ ತಪರಾಕಿ ನೀಡಿತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮಹಾ ನಿರ್ದೇಶಕರನ್ನು ಹಾಗ ಸದಸ್ಯರನ್ನು ನೇಮಿಸದಿರುವ ಕುರಿತಾದ ಅರ್ಜಿಯ ಮೇಲಿನ ವಿಚಾರಣೆಯನ್ನು ಕೈಗೆತ್ತಿಕೊಂಡಾಕ್ಷಣವೇ ಸುಪ್ರೀಂ ಪೀಠ, “ನೀವೇಕೆ ಈ ನೇಮಕಾತಿಗಳನ್ನು ಮಾಡುತ್ತಿಲ್ಲ; ನಿಮಗೆ ಅಷ್ಟೊಂದು ಕಾಲಾವಕಾಶವನ್ನು ನಾವು ಕೊಡಲಾರೆವು. ಆದುದರಿಂದ ನೀವು ಒಂದು ವಾರದೊಳಗೆ ಆಯೋಗಕ್ಕೆ ಮಹಾ ನಿರ್ದೇಶಕರನ್ನು ನೇಮಿಸಬೇಕು; ಮೂರು ವಾರಗಳ ಒಳಗೆ ಸದಸ್ಯರನ್ನು ನೇಮಿಸಬೇಕು’ ಎಂದು ಖಡಕ್ ಆಗಿ ಹೇಳಿತು.
ಪೀಠದಲ್ಲಿ ನ್ಯಾಯಮೂರ್ತಿಗಳಾದ ಎನ್ ವಿ ರಮಣ ಮತ್ತು ಡಿ ವೈ ಚಂದ್ರಚೂಡ್ ಕೂಡ ಇದ್ದರು.