ಹರಪನಹಳ್ಳಿ: ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಈಚೆಗೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿರುವ ಹರಪನಹಳ್ಳಿ ತಾಲೂಕಿನ ಜನರು ಹೈದ್ರಾಬಾದ್ ಕರ್ನಾಟಕ ಪ್ರಮಾಣ ಪತ್ರ ಪಡೆಯಲು ಇಂದಿನಿಂದ ಆಯಾ ನಾಡ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ಪ್ರಥಮ ಬಾರಿಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನ ಇಲಾಖೆಯ ತಾಂತ್ರಾಂಶದಲ್ಲಿ ಹೈಕ ಪ್ರಮಾಣ ಪತ್ರದ ಲಾಗೀನ್ ಓಪನ್ ಆಗಿರಲಿಲ್ಲ. ಜ.29ರಿಂದ ಅದನ್ನು ಸರಿಪಡಿಸಲಾಗಿದೆ. ಹೈಕ ಪ್ರಮಾಣ ಪಡೆದುಕೊಂಡ ತಕ್ಷಣವೇ ನೌಕರಿ ಸಿಗುವುದಿಲ್ಲ. ಹಾಗಾಗಿ ತಳ್ಳಾಟ-ನೂಕಾಟ ಮಾಡುವ ಬದಲು ಶೈಕ್ಷಣಿಕವಾಗಿ ಅಗತ್ಯವುಳ್ಳವರು ಅರ್ಜಿ ಸಲ್ಲಿಸಿ 30 ದಿನದೊಳಗೆ ಪಡೆದುಕೊಳ್ಳಬೇಕು. ನಂತರ ದಿನಗಳಲ್ಲಿ ಪ್ರತಿಯೊಬ್ಬರೂ ಪಡೆದುಕೊಳ್ಳಬಹುದು. ಒಂದು ಸಾರಿ ಪ್ರಮಾಣ ಪತ್ರ ಪಡೆದುಕೊಂಡರೆ ಸಾಕು ಅದು ಅಜೀವ ಪತ್ರವಾಗಿರುತ್ತದೆ ಎಂದರು.
ಬಳ್ಳಾರಿಗೆ ಹರಪನಹಳ್ಳಿ ಸೇರಿರುವುದರಿಂದ ಕೆಲವೊಂದು ಇಲಾಖೆಯ ಆಡಳಿತಾತ್ಮಕ ಮತ್ತು ಆರ್ಥಿಕ ಅಡತಡೆಗಳ ನಿವಾರಣೆಗಾಗಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕೆಲವೊಂದು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು. ಕಂದಾಯ ಇಲಾಖೆಯ ಹರಪನಹಳ್ಳಿ ಉಪ ವಿಭಾಗಕ್ಕೆ ಹಡಗಲಿ ಮತ್ತು ಕೊಟ್ಟೂರು ತಾಲೂಕು ಸೇರ್ಪಡೆಗೊಳಿಸಿದ್ದು, ಶೀಘ್ರವೇ ಸರ್ಕಾರದಿಂದ ಅಂತಿಮ ಅಧಿಸೂಚನೆ ಹೊರ ಬೀಳಲಿದೆ. ಅಲ್ಲಿಯವರೆಗೆ ಅಗತ್ಯವಿದ್ದರೆ ಹಡಗಲಿ ಮತ್ತು ಕೊಟ್ಟೂರು ತಾಲೂಕಿನ ಜನತೆ ಹರಪನಹಳ್ಳಿ ಉಪವಿಭಾಗಾಧಿಕಾರಿಗಳ ಬಳಿ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಹರಪನಹಳ್ಳಿ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುವ ಹಿನ್ನ್ನೆಲೆಯಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಟ್ಟು 1 ಕೋಟಿ ರೂ. ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆತ್ತಿದ್ದು, ಶೀಘ್ರವೇ ಹಣ ಬಿಡುಗಡೆಯಾಗಿಲಿದೆ. ಅಗತ್ಯವಿರುವ ಕಡೆ ಖಾಸಗಿ ಬೋರ್‌ವೆಲ್‌ಗಳಿಗೆ ಮಾಸಿಕ 11 ಸಾವಿರ ರೂ. ಹಣ ಕೊಟ್ಟು ನೀರು ಖರೀದಿಸುವಂತೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 8 ಕಡೆ ಟ್ಯಾಂಕರ್ ಹಾಗೂ 26 ಕಡೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್ ಬದಲು ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.
ಪ್ರಕೃತಿ ವಿಕೋಪ ಪರಿಹಾರ ನಿಧಿಗಾಗಿ ತಹಶೀಲ್ದಾರ್ ಖಾತೆಗೆ 25 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಕಂದಾಯ, ಜಿಪಂ, ತಾಪಂ ವ್ಯಾಪ್ತಿಯ ಎಲ್ಲಾ ಇಲಾಖೆಗಳು ಈಗಾಗಲೇ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಯಾವ ಇಲಾಖೆಗಳಲ್ಲಿ ತಾಂತ್ರಿಕವಾಗಿ ಸಮಸ್ಯೆಗಳಿವೆಯೋ ಅವುಗಳನ್ನು ಪಟ್ಟಿ ಮಾಡಿ ನಮಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪೊಲೀಸ್ ಇಲಾಖೆಯೂ ಕೂಡ ಶೀಘ್ರವೇ ಬಳ್ಳಾರಿ ಜಿಲ್ಲೆಗೆ ಬದಲಾಯಿಸಿ ಅಧಿಸೂಚನೆ ಹೊರಡಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಪಂ ಸಿಇಒ ಕೆ.ಎಸ್.ನಿತೀಶ್‌ಕುಮಾರ್ ಮಾತನಾಡಿ, ಹರಪನಹಳ್ಳಿಯ 7 ಜಿ.ಪಂ ಕ್ಷೇತ್ರಗಳ ಸದಸ್ಯ ಸ್ಥಾನ ಬಳ್ಳಾರಿಗೆ ಸೇರ್ಪಡೆಗೊಂಡಿರುವುದರಿಂದ 40ರಿಂದ ಸದಸ್ಯ ಸ್ಥಾನ ಇದೀಗ 47ಕ್ಕೆ ಏರಿಕೆಯಾಗಿದೆ. ಹರಪನಹಳ್ಳಿ ತಾಲೂಕಿನ ಗ್ರಾಪಂಗಳಲ್ಲಿರುವ ಪಿಡಿಒಗಳ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ತಹಶೀಲ್ದಾರ್ ಡಾ| ನಾಗವೇಣಿ, ತಾಪಂ ಇಒ ಮಮತಾ ಹೊಸಗೌಡರ್, ತಹಶೀಲ್ದಾರ್ ಗ್ರೇಡ್-1 ಎಸ್.ರವಿ, ಡಿವೈಎಸ್ಪಿ ನಾಗೇಶ್ ಐತಾಳ್, ಕೃಷಿ ಸಹಾಯಕ ನಿರ್ದೇಶಕ ಆರ್.ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ನಾಗರಾಜನಾಯ್ಕ ಇನ್ನಿತರರಿದ್ದರು.
ಶೀಘ್ರವೇ ಜನ ಸಂಪರ್ಕ ಸಭೆ
ಜಿಲ್ಲಾ ಕೇಂದ್ರ ಬಳ್ಳಾರಿ ಹರಪನಹಳ್ಳಿ ಜನತೆಗೆ ದೂರವಾಗುವ ಹಿನ್ನ್ನೆಲೆಯಲ್ಲಿ ಪ್ರತಿ ತಿಂಗಳಿಗೊಮ್ಮ್ಮೆ ಹರಪನಹಳ್ಳಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ಅಲ್ಲದೇ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಶೀಘ್ರವೇ ಜನ ಸಂಪರ್ಕ ಸಭೆ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಾರ್ವಜನಿಕರು ಬಳ್ಳಾರಿಗೆ ಬರುವ ಬದಲು ಹರಪನಹಳ್ಳಿ ಮಿನಿವಿಧಾನಸೌಧ ಕಚೇರಿ ಆವರಣದಲ್ಲಿಯೇ ಪ್ರತ್ಯೇಕ ಕೌಂಟರ್ ತೆರೆದು ಅರ್ಜಿ ಸಲ್ಲಿಸಲು ವ್ಯವಸ್ಥೆ ಕಲಿಸಲಾಗುವುದು.
•ಡಾ| ರಾಮ್‌ಪ್ರಸಾತ್ ಮನೋಹರ್,ಜಿಲ್ಲಾಧಿಕಾರಿ, ಬಳ್ಳಾರಿ.