ಬೀಳಗಿ: ಚಿಕ್ಕ ಹಿಡುವಳಿದಾರ ರೈತರಿಗೆ (ಐದು ಎಕರೆ ಒಳಗೆ) ವಾರ್ಷಿಕ 6000 ರೂಪಾಯಿ ಸಹಾಯಧನ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆದುಕೊಳ್ಳಲು ರೈತರು ಅರ್ಜಿ ಸಲ್ಲಿಸಲು ಪೈಪೋಟಿ ನಡೆಸಿದ್ದು, ಈಗಾಗಲೇ ಎರಡು ಸಾವಿರ ಅರ್ಜಿ ಸಲ್ಲಿಕೆಯಾಗಿವೆ.
ಇನ್ನು ಅರ್ಜಿ ಜತೆಗೆ ಹಲವು ದಾಖಲೆ ಸಲ್ಲಿಸಬೇಕಾಗಿದ್ದು, ಅಗತ್ಯ ಜಮೀನು ಉತಾರ
ಪಡೆಯಲು ರೈತರು ಪರದಾಡುವಂತಾಗಿದೆ. ಐದು ಎಕರೆ ಮೇಲ್ಪಟ್ಟ ದೊಡ್ಡ ರೈತರು ಮತ್ತು ಐದು ಎಕರೆ ಒಳಗಿನ ಸಣ್ಣ ರೈತರು ಸೇರಿ ಒಟ್ಟು ತಾಲೂಕಿನಲ್ಲಿ 24,200 ರೈತರಿದ್ದಾರೆ. ಕೃಷಿ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ 16,048 ಜನ ಸಣ್ಣ ರೈತರಿದ್ದು, ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹತೆ ಹೊಂದಿದ್ದಾರೆ. ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಲು ಫೆ.25 ಕೊನೆಯ ದಿನವಾಗಿದೆ.
ಕಾಲಕ್ರಮೇಣದಲ್ಲಿ ಇನ್ನು ಅನೇಕ ರೈತರು ಚಿಕ್ಕ ಹಿಡುವಳಿದಾರರಾಗಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಅಂತಹ ರೈತರ ಹೆಸರು ಕೃಷಿ ಇಲಾಖೆ ಹೊರಡಿಸಿರುವ ಪಟ್ಟಿಯಲ್ಲಿ ಇರದಿದ್ದಲ್ಲಿ, ಅರ್ಹ ರೈತರು ಅಗತ್ಯ ದಾಖಲೆಗಳೊಂದಿಗೆ ಫಾರ್ಮ “ಸಿ’ ಭರ್ತಿ ಮಾಡುವ ಮೂಲಕ ಯೋಜನೆಗೆ ಹೆಸರು ನೋಂದಾಯಿಸಬಹುದು.
ಅರ್ಜಿಗಳ ಮಹಾಪೂರ: ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಫೆ.20ರಿಂದ ರೈತರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಕೃಷಿ ಇಲಾಖೆಯಡಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳು ಹಾಗೂ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ಅಲ್ಲದೆ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿಯೂ ಕೂಡ ಅರ್ಜಿ ಸ್ವೀಕರಿಸಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕೃಷಿ ಇಲಾಖೆ ಯೋಜನೆಗೆ ವೇಗ ನೀಡಿದೆ. ಪರಿಣಾಮ, ಕೇವಲ 2 ದಿನದಲ್ಲಿ ಈಗಾಗಲೇ ರೈತರಿಂದ 2 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ನಿತ್ಯವೂ ಅರ್ಹ ರೈತರಿಂದ ಅರ್ಜಿಗಳ ಮಹಾಪೂರ ಹರಿದು ಬರುತ್ತಿದೆ.
ಅರ್ಹ ರೈತರ ಪಟ್ಟಿ ಪ್ರಕಟ: ಕೃಷಿ ಇಲಾಖೆ ಬಳಿ ಮಾಹಿತಿಯಿರುವ ಅರ್ಹ ಫಲಾನುಭವಿ ಸಣ್ಣ ರೈತರ ಪಟ್ಟಿಯನ್ನು ತಾಲೂಕಿನ ಆಯಾ ಗ್ರಾಪಂ ಬೋರ್ಡ್ ಗೆ ಅಂಟಿಸಲಾಗಿದೆ. ಪಟ್ಟಿಯಲ್ಲಿ ಹೆಸರಿರುವ ಸಣ್ಣ ರೈತರು ಹಾಗೂ ತಾವು ಸಣ್ಣ ರೈತರಿದ್ದೂ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅಂಥವರು ಕೂಡ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಇಲಾಖೆ ಮನವಿ ಮಾಡಿಕೊಂಡಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ ಎರಡು ಸಾವಿರ ಅರ್ಜಿ ಬಂದಿವೆ. ಸಣ್ಣ ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.
.
ಪರಶುರಾಮ ಗಣಿ,
ಸಹಾಯಕ ಕೃಷಿ ನಿರ್ದೇಶಕ, ಬೀಳಗಿ
ರವೀಂದ್ರ ಕಣವಿ