ಬೆಂಗಳೂರು: ಹೊಸತಾಗಿ ಪಡಿತರ ಚೀಟಿಗೆ ಅರ್ಜಿ ಹಾಕಬೇಕಾ? ಅದಕ್ಕೆ ಇರುವ ಪ್ರಕ್ರಿಯೆ ಮೇ 1ರಿಂದಲೇ ರಾಜ್ಯಾದ್ಯಂತ ಶುರುವಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಕಾರಣದಿಂದ ಸ್ಥಗಿತಗೊಂಡಿದ್ದ ಪ್ರಕ್ರಿಯೆಗೆ ಈಗ ಮರುಜೀವ ದೊರೆತಿದೆ.
ಅದಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಂದ ವಿಶೇಷ ಅನುಮತಿ ಪಡೆದುಕೊಳ್ಳಲಾಗಿದೆ. ಒಂದು ವಾರದಲ್ಲಿ ಸುಮಾರು 2,400 ಅರ್ಜಿಗಳು ಬಂದಿವೆ. ಅವುಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಅದರ ಮುಕ್ತಾಯದ ಬಳಿಕ ಬಳಿಕ ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಚುನಾವಣೆಗೆ ಮಾ.10ರಂದು ವೇಳಾಪಟ್ಟಿ ಪ್ರಕಟಗೊಂಡು ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಮಾ.11ರಿಂದ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಅರ್ಜಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು.
ಮೇ 9ರವರೆಗೆ ಒಟ್ಟು 2,400 ಅರ್ಜಿಗಳು ಬಂದಿವೆ. ಇದರಲ್ಲಿ ವಿಜಯಪುರದಲ್ಲಿ 214, ಕಲಬುರಗಿಯಲ್ಲಿ 145, ಯಾದಗಿರಿಯಲ್ಲಿ 142, ಬೆಳಗಾವಿಯಲ್ಲಿ 140, ರಾಯಚೂರಿನಲ್ಲಿ 135 ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಉಡುಪಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಕೆ ನಿಧಾನಗತಿಯಲ್ಲಿದೆ. ಈಗಷ್ಟೇ ಅರ್ಜಿಗಳ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಚುರುಕುಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಅರ್ಜಿ ಸಲ್ಲಿಕೆ: ಹೊಸ ಪಡಿತರ ಚೀಟಿಗಾಗಿ ಕೈ ಬರಹ ಅಥವಾ ಮುದ್ರಿತ ಪ್ರತಿಯಲ್ಲಿ ಅರ್ಜಿ ಸಲ್ಲಿಸಲು ಈಗ ಅವಕಾಶವಿಲ್ಲ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.
ಅದರಂತೆ ಕಂಪ್ಯೂಟರ್ ವ್ಯವಸ್ಥೆ ಹೊಂದಿದವರು ಆಹಾರ ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಗ್ರಾಮೀಣ ಭಾಗದ ಜನರು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ, ನಗರದ ಪ್ರದೇಶದ ಜನ ಆಹಾರ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿರುವ ಕಂಪ್ಯೂಟರ್ ವಿಭಾಗದಲ್ಲಿ, ಖಾಸಗಿ ಸೈಬರ್ ಹಾಗೂ ಇಂಟರ್‌ನೆಟ್ ಕೇಂದ್ರಗಳಲ್ಲಿ, ಕರ್ನಾಟಕ ಒನ್, ಬೆಂಗಳೂರು ಒನ್ ನಂತಹ ಆನ್‌ಲೈನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾ ವಣೆ ಘೋಷಣೆಯಾಗಿರು ವುದರಿಂದ ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಅರ್ಜಿ ಸ್ವೀಕಾರ ಪ್ರಕ್ರಿಯೆ ಬಗ್ಗೆ ರಾಜ್ಯ ಚುನಾವಣಾ ಆಯೋಗ ನಿರ್ದಿಷ್ಟವಾಗಿ ಯಾವುದೇ ಸೂಚನೆ, ನಿರ್ದೇಶನ ನೀಡಿಲ್ಲ. ಹಾಗಾಗಿ, ಆನ್‌ಲೈನ್ ಅರ್ಜಿ ಸ್ವೀಕಾರ ಮುಂದುವರಿಯಲಿದೆ.
-ಹಿರಿಯ ಅಧಿಕಾರಿ, ಆಹಾರ ಇಲಾಖೆ
– ರಫೀಕ್ ಅಹ್ಮದ್