Advertisement

ಎಲ್‌ಪಿಜಿಯಲ್ಲಿ ಶೇ.5 ಅಂಗವಿಕಲರ ನೇಮಕ ಕೋರಿದ್ದ ಅರ್ಜಿ ವಜಾ

06:50 AM Sep 06, 2018 | |

ಬೆಂಗಳೂರು: ಎಲ್‌ಪಿಜಿ ವಿತರಕರ ನೇಮಕಾತಿಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಶೇ.5 ಮೀಸಲು ಒದಗಿಸಲು ಕೇಂದ್ರ ಸರ್ಕಾರ ಸ್ವಾಮ್ಯದ ಹಾಗೂ ಸರ್ಕಾರಿ ತೈಲ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

Advertisement

ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ನೇತೃತ್ವದ ವಿಭಾಗೀಯ ಪೀಠ, ಈ ವಿಚಾರದಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿತು.

ಅಲ್ಲದೆ, ಕರ್ನಾಟಕ ವಲಯದಲ್ಲಿ 238 ಎಲ್‌ಪಿಜಿ ವಿತರಕರ ನೇಮಕಾತಿಗೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ 2018ರ ಫೆ.9ರಂದು ನೀಡಿದ್ದ ತಡೆಯಾಜ್ಞೆಯನ್ನು ಇದೇ ವೇಳೆ ನ್ಯಾಯಪೀಠ ತೆರವುಗೊಳಿಸಿದೆ.

ಇದರಿಂದಾಗಿ ಕರ್ನಾಟಕ ವಲಯದಲ್ಲಿ ಎಲ್‌ಪಿಜಿ ವಿತರಕರ ನೇಮಕಾತಿಗೆ ಎದುರಾಗಿದ್ದ ಅಡ್ಡಿ ಈಗ ದೂರವಾಗಿದೆ.
ಕರ್ನಾಟಕ ವಲಯದಲ್ಲಿ 238 ಎಲ್‌ಪಿಜಿ ವಿತರಕರ ನೇಮಕಾತಿಗೆ ಜಾಹೀರಾತು ನೀಡಲಾಗಿದೆ. ಆ ಪೈಕಿ ಕೇವಲ 6 ವಿತರಕರ ಹುದ್ದೆಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲು ನೀಡಲಾಗಿದೆ. ಇದು ಶೇ.5ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಆದ್ದರಿಂದ ಎಲ್‌ಪಿಜಿ ವಿತರಕರ ನೇವಕಾತಿಯಲ್ಲಿ ಶೇ.5ರಷ್ಟು ಮೀಸಲು ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಎಲ್‌ಪಿಜಿ ವಿತರಕರ ನೇಮಕಾತಿಯಲ್ಲಿ ಮಾರ್ಗಸೂಚಿಗಳ ಅನ್ವಯವೇ ಶೇ.3ರಷ್ಟು ಮೀಸಲು ನೀಡಲಾಗಿದೆ. ಇದು ನ್ಯಾಯಸಮ್ಮತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಕಂಡು ಬರುತ್ತಿಲ್ಲ ಎಂದು ಹೈಕೋರ್ಟ್‌ ಅರ್ಜಿ
ವಜಾಗೊಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next